ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರಲ್ಲಿ ಒಗ್ಗಟ್ಟಿಲ್ಲ: ಚಂದ್ರಶೇಖರನಾಥ ಸ್ವಾಮೀಜಿ ವಿಷಾದ

ರಾಜ್ಯ ಮಟ್ಟದ ವಿಚಾರಸಂಕಿರಣ ಸಮಾರೋಪ
Last Updated 9 ಅಕ್ಟೋಬರ್ 2022, 13:50 IST
ಅಕ್ಷರ ಗಾತ್ರ

ಮೈಸೂರು: ‘ಒಕ್ಕಲಿಗರು ರಾಜ್ಯದಲ್ಲಿ ಪ್ರಾಬಲ್ಯ ಹೊಂದಿದ ಸಮುದಾಯದವೇ ಆಗಿರಬಹುದು. ಆದರೆ, ಒಗ್ಗಟ್ಟು–ಪರಸ್ಪರ ಸಹಕಾರ ಮನೋಭಾವ ಇಲ್ಲ. ಇವೆಲ್ಲವನ್ನೂ ಮೈಗೂಡಿಸಿಕೊಳ್ಳಬೇಕಿದೆ’ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಸಲಹೆ ನೀಡಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದಿಂದ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಮತ್ತು ಒಕ್ಕಲಿಗ ರಾಜ ಮನೆತನದ ಇತಿಹಾಸ’– ರಾಜ್ಯಮಟ್ಟದ ವಿಚಾರಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ರಾಜಮನೆತನದಿಂದ ಇಂದಿನವರೆಗೂ ಅಧಿಕಾರಸ್ಥ ಒಕ್ಕಲಿಗರು ಜಾತೀಯ ಸ್ವಾರ್ಥತೆ ಮಾಡಿಲ್ಲ. ಮರದಂತೆ ಆಶ್ರಯಿಸಿದ ಎಲ್ಲ ಜೀವಜಾಲಗಳಿಗೂ ನೆರವಾಗಿದ್ದಾರೆ. ಕೆಂಪೇಗೌಡರು ಬೆಂಗಳೂರು ಕಟ್ಟಿದಾಗಲೂ ‍ಪ್ರತಿ ಸಮುದಾಯಕ್ಕೂ ಒಂದೊಂದು ಪ್ರದೇಶದಲ್ಲಿ, ಗಲ್ಲಿಗಳಲ್ಲಿ ಅವಕಾಶ ನೀಡಿದ್ದರು’ ಎಂದು ವಿವರಿಸಿದರು.

ಮುಖ್ಯಅತಿಥಿಯಾಗಿದ್ದ ವಿಧಾನಪರಿಷತ್‌ ಸದಸ್ಯ ಸಿ.ಎನ್‌.ಮಂಜೇಗೌಡ ಮಾತನಾಡಿ, ‘ಒಕ್ಕಲಿಗರು ಸ್ವಾಭಿಮಾನ ಬಿಟ್ಟು ಅಧಿಕಾರಕ್ಕಾಗಿ ಹಪಹಪಿಸಬೇಕಿಲ್ಲ. ಒಗ್ಗಟ್ಟಿನಿಂದ, ಪರಸ್ಪರ ಸಹಕಾರದಿಂದ, ಪರಂಪರೆಯ ಬಗ್ಗೆ ಹೆಮ್ಮೆಹೊಂದಿ ಬದುಕಬೇಕು. ಚುನಾವಣೇ ಸಮಯದಲ್ಲಷ್ಟೇ ಮೈಕೊಡವಿ ಏಳುವುದಲ್ಲ. ಎಲ್ಲ ಸಂಧರ್ಭದಲ್ಲೂ ಒಗ್ಗಟ್ಟಿನಿಂದಿದ್ದು, ಸಮುದಾಯದ ಏಳಿಗೆ ಬಯಸಬೇಕು’ ಎಂದರು.

‘ಮಹಾಸಭಾ ಬಯಸಿದರೆ ಮುಡಾದಿಂದ ಎರಡು ಎಕರೆ ಸಿಎ ಜಾಗ ಮಂಜೂರು ಮಾಡಿಸುವೆ. ಸಮುದಾಯ ಭವನಕ್ಕಾಗಿ ನೆರವಾಗುವೆ’ ಎಂದು ಭರವಸೆ ನೀಡಿದರು.

ಮಹಾಸಭಾದ ಗೌರವಾಧ್ಯಕ್ಷ ಸಾಹಿತಿ ಸಿಪಿಕೆ ಮಾತನಾಡಿ, ‘ಒಕ್ಕಲಿಗ ಸಮಾಜದಿಂದ ಇಂತಹ ಸಾಂಸ್ಕೃತಿಕ ಸಮಾವೇಶ ಇದೇ ಪ್ರಥಮ. ಅದು ಯಶಸ್ವಿಯಾಗಿದೆ. ಒಕ್ಕಲಿಗರ ಪೂರ್ವಜರಾದ ಗಂಗರಸರು, ನಾಡಪ್ರಭು ಕೆಂಪೇಗೌಡರು, ಸ್ಮಾರಕ ಶಾಸನಗಳ ಬಗ್ಗೆ ಬೆಳಕು ಚೆಲ್ಲಿಸ ಸಂಪನ್ಮೂಲ ವ್ಯಕ್ತಿಗಳು ಸಮುದಾಯದಲ್ಲಿ ಹೊಸ ಚೈತನ್ಯ ತುಂಬಿದ್ದಾರೆ’ ಎಂದರು.

ಡಾ.ಎಸ್‌.ಪಿ.ಯೋಗಣ್ಣ, ಮಹಾಸಭಾದ ಅಧ್ಯಕ್ಷ ಎನ್‌.ಬೆಟ್ಟೇಗೌಡ, ಕೋಶಾಧ್ಯಕ್ಷ ಎಂ.ಎನ್‌.ಚಂದ್ರಶೇಖರ್‌, ಎಂಸಿಸಿಐ ಅಧ್ಯಕ್ಷ ಕೆ.ಬಿ.ಲಿಂಗರಾಜು ಇದ್ದರು.

ಇದಕ್ಕೂ ಮುನ್ನ, ‘ಗಂಗರ ಇತಿಹಾಸ’ ವಿಷಯ ಮಂಡಿಸಿದ ಮಹಾಸಭಾದ ಗೌರವ ಸಲಹೆಗಾರ ಡಾ.ಬಿ.ಎನ್‌.ರವೀಶ್‌ ಖಡ್ಗ ಝಳಪಿಸಿ ಸಭಿಕರಲ್ಲಿ ಚೈತನ್ಯ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT