ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಶಿಲೆ ತೆಗೆದಿದ್ದಕ್ಕೆ ದಂಡ ಪಾವತಿಸಿದ್ದ ಗುತ್ತಿಗೆದಾರ

Published 21 ಜನವರಿ 2024, 5:13 IST
Last Updated 21 ಜನವರಿ 2024, 5:13 IST
ಅಕ್ಷರ ಗಾತ್ರ

ಮೈಸೂರು: ಆಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವ ‘ಬಾಲರಾಮ’ನ ‌ಮೂರ್ತಿ ಕೆತ್ತಲು ಬಳಸಿದ ಕೃಷ್ಣಶಿಲೆಯನ್ನು ಒದಗಿಸಿದ ಕಲ್ಲು ಗಣಿಗಾರಿಕೆ ಗುತ್ತಿಗೆದಾರ ಶ್ರೀನಿವಾಸ್‌ ನಟರಾಜು ಅವರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ₹ 80ಸಾವಿರ ದಂಡ ಪಾವತಿಸಿಕೊಂಡಿದ್ದರೆಂಬ ಸಂಗತಿ ಹೊರಬಿದ್ದಿದೆ.

‘ತಾಲ್ಲೂಕಿನ ಹಾರೋಹಳ್ಳಿಯ ರಾಮದಾಸ್‌ ಅವರ ಜಮೀನಿನಲ್ಲಿದ್ದ ಕಲ್ಲನ್ನು ಹೊರ ತೆಗೆದಿದ್ದೆವು. ಮಾಲೀಕರು ಸಮತಟ್ಟು ಮಾಡಿಕೊಡುವಂತೆ ಕೇಳಿದ್ದರು. ಆಗ, ಅನಾಮಧೇಯ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಭೂ ಸಂಪತ್ತನ್ನು ಅನುಮತಿ ಇಲ್ಲದೆ ಹೊರತೆಗೆದಿದ್ದೀರಿ ಎಂದು ದಂಡ ವಿಧಿಸಿದ್ದರು. ಇದೆಲ್ಲವೂ, ಬಾಲರಾಮನ ಮೂರ್ತಿಗೆ ಬೇಕಾದ ಶಿಲೆ ಕಳುಹಿಸುವುದಕ್ಕಿಂತ ಮುಂಚೆ ನಡೆದಿತ್ತು’ ಎಂದು ಶ್ರೀನಿವಾಸ್ ತಿಳಿಸಿದರು.

‘ಇಲ್ಲಿಂದ ಅಯೋಧ್ಯೆಗೆ ಶಿಲೆ ಸಾಗಿಸಲು ₹ 6 ಲಕ್ಷ ಖರ್ಚಾಗಿದೆ. ಆದರೆ, ನಮಗೆ ಸಿಕ್ಕಿರುವುದು ₹ 1.95 ಲಕ್ಷ ಮಾತ್ರ. ಅದನ್ನು ಅಯೋಧ್ಯೆಯ ರಾಮಮಂದಿರದ ಟ್ರಸ್ಟ್‌ನೊಂದಿಗೆ ಸಂಪರ್ಕ ಹೊಂದಿದ್ದ ಶ್ರೀನಾಥ್‌ ಎನ್ನುವವರು ನೀಡಿದ್ದಾರೆ’ ಎಂದರು.

‘ಇಲ್ಲಿಂದ ಕಳುಹಿಸಲಾದ ಶಿಲೆಯಲ್ಲಿ ಮೂರ್ತಿ ಕೆತ್ತನೆಯಾಗಿದ್ದು, ಇಡೀ ವಿಶ್ವದ ಗಮನ ಸೆಳೆದಿದೆ. ಆದರೆ, ಈ ಕಲ್ಲು ತೆಗೆದ ಬಡವನ ಜೇಬಿಗೆ ಕತ್ತರಿ ಬಿದ್ದಿರುವುದನ್ನು ಪ್ರತಿನಿಧಿಗಳು ಗಮನಿಸಿಲ್ಲ. ಕಲ್ಲು ಈಗ ವಿಗ್ರಹವಾಗಿ ಅದನ್ನು ಪ್ರತಿಷ್ಠಾಪಿಸಲು ಕೇಂದ್ರ ಸರ್ಕಾರವೇ ಬೆಂಬಲವಾಗಿ ನಿಂತಿರುವಾಗ ಅದು ಊರ್ಜಿತ ಎನ್ನಬಹುದು. ದಂಡ ಪಾವತಿಸಿರುವುದರಿಂದ, ಕಲ್ಲು ತೆಗೆದದ್ದು ಅನಧಿಕೃತ ಎಂಬ ಕಾರಣಕ್ಕೆ ಈಗ ಮೂರ್ತಿಯನ್ನು ಜಪ್ತಿ ಮಾಡಲಾಗುವುದೇ? ಜಮೀನಿನ ಮಾಲೀಕ ರಾಮದಾಸ್ ಹಾಗೂ ಶಿಲೆ ಒದಗಿಸಿದ ಶ್ರೀನಿವಾಸ್‌ ಅವರನ್ನು ಪ್ರಾಣ ಪ್ರತಿಷ್ಠಾ‍ಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕೊಡಬೇಕು. ಮುಡಾದಿಂದ ಉಚಿತ ನಿವೇಶನ ನೀಡಬೇಕು’ ಎಂದು ಕನ್ನಡಪರ ಹೋರಾಟಗಾರ ಅರವಿಂದ ಶರ್ಮ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT