ಅದ್ಧೂರಿ, ಆಡಂಬರ ಬೇಡ ಮುಂಗಾರು ಮಳೆ ಕೈಕೊಟ್ಟಿರುವ ಈ ವರ್ಷ ನಾಡಿನಾದ್ಯಂತ ಬರಗಾಲ ಇರುವುದರಿಂದ ಮೈಸೂರು ದಸರೆಯನ್ನು ಅದ್ಧೂರಿ, ಆಡಂಬರದಿಂದ ಆಚರಿಸುವುದು ಬೇಡ. ಸಾಂಪ್ರದಾಯಿಕ ಆಚರಣೆ ಇರಲಿ.-ಎಸ್.ಡಿ. ಓಂಕಾರ್ ಜೈನ್, ಯುವ ಪ್ರಶಸ್ತಿ ವಿಜೇತ, ಸರಗೂರು ATTRIBUTION
ಸರಳವಾಗಿ ನಡೆಸುವುದು ಸೂಕ್ತ ಮುಂಗಾರು ಕೈ ಕೊಟ್ಟಿರುವ ಈ ಸಂದರ್ಭದಲ್ಲಿ ದಸರೆಯನ್ನು ವಿಜೃಂಭಣೆಯಿಂದ ಆಚರಿಸಿದರೆ ಅದು ಹೊಟ್ಟೆಗೆ ಹಿಟ್ಟಿಲ್ಲವೆಂದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಆಗುತ್ತದೆ. ರೈತಾಪಿ ವರ್ಗ ಸಂಕಷ್ಟದಲ್ಲಿ ಇರುವಾಗ ವೈಭವಪೂರ್ವವಾಗಿ ದಸರೆ ಆಚರಿಸುವುದನ್ನು ನಾಡದೇವಿ ಸಹ ಒಪ್ಪಲಾರಳು. ಹೀಗಾಗಿ, ಈ ಬಾರಿಯ ದಸರಾ ಸರಳವಾಗಿ ನಡೆಸುವುದೇ ಸೂಕ್ತ.-ಅಕ್ಷತಾ ಪಾಟೀಲ, ರಾಮಕೃಷ್ಣ ನಗರ, ಮೈಸೂರು
ಸರಳ, ಸಾಂಪ್ರದಾಯಿಕವಾಗಿರಲಿ: ಈ ವರ್ಷದ ನಾಡಹಬ್ಬ ದಸರೆಯನ್ನು ತುಂಬಾ ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಬಾರಿ ಮಳೆ ಇಲ್ಲದೇ ಬರ ಉಂಟಾಗಿ ರೈತರ ಸ್ಥಿತಿ ಚಿಂತಾಜನಕವಾಗಿರುವುದು ಗೊತ್ತಿರುವ ವಿಷಯ. ಈ ನಿಟ್ಟಿನಲ್ಲಿ ಆಡಂಬರದ ದಸರೆಗೆ ಸ್ವಲ್ಪ ಕಡಿವಾಣ ಹಾಕಿ ಸಾಂಪ್ರದಾಯಿಕವಾಗಿ ಉತ್ಸವವನ್ನು ನಡೆಸಲಿ. ರೈತರ ಸಂಕಷ್ಟಕ್ಕೆ ಸರ್ಕಾರ ನಿಲ್ಲಬೇಕಾಗಿದೆ.ಪವನ್ ಜಯರಾಂ, ಲೇಖಕ, ಮೈಸೂರು
ಸರಳ ಆಚರಣೆ ಸೂಕ್ತ: ರಾಜ್ಯದಲ್ಲಿ ಬರಗಾಲವಿದೆ. ಕೆಆರ್‌ಎಸ್ ತುಂಬಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಅದ್ಧೂರಿಯಾಗಿ ದಸರ ಆಚರಣೆ ಮಾಡುತ್ತಿರುವುದು, ಹಸಿದವರ ಕಣ್ಣು ಮುಂದೆ ಕುಳಿತು ಅವರಿಗೆ ಕೊಡದೇ ಮೃಷ್ಟಾನ್ನ ಭೋಜನ ಉಂಡಂತೆ ಆಗುತ್ತದೆ. ಆದ್ದರಿಂದ ಸರಳ ಆಚರಣೆ ಸೂಕ್ತ. ಜನರ ಆಗುಹೋಗು, ಕಷ್ಟ ಕಾರ್ಪಣ್ಯಗಳನ್ನು ಮತ್ತು ಬೇಕು ಬೇಡಗಳನ್ನು ಆಲಿಸುವ ಸಲುವಾಗಿಯೇ ರಾಜ್ಯ ಸರ್ಕಾರ ಇರುವುದು. ಆದಷ್ಟು ಕಡಿಮೆ ವೆಚ್ಚದಲ್ಲಿ ನಾಡಹಬ್ಬ ನಡೆಸಲಿ. ಬರ ಪೀಡಿತ ತಾಲ್ಲೂಕುಗಳಿಗೆ ಬರ ಪರಿಹಾರ ನೀಡಲಿ.ಹದೇವಸ್ವಾಮಿ ಕೆ.ಎಸ್., ರಾಜ್ಯಶಾಸ್ತ್ರ ವಿಭಾಗ, ಮಹಾರಾಜ ಕಾಲೇಜು, ಮೈಸೂರು
ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಳಿಸಿ: ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ. ಮೈಸೂರು ಜಿಲ್ಲೆಯೂ ಬರಪೀಡಿತವಾಗಿದೆ. ಜಿಲ್ಲೆ ಹಾಗೂ ತಾಲ್ಲೂಕಿನ ರೈತರು ಬವಣೆ ಪಡುತ್ತಿದ್ದಾರೆ. ಕಾವೇರಿ, ಕಬಿನಿಯಿಂದ ನೀರನ್ನು ನಂಬಿರುವ ರೈತರಿಗೆ ವ್ಯವಸಾಯಕ್ಕೆ ನೀರು ದೊರಕದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಆದ್ದರಿಂದ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕ, ಸರಳ ಪೂಜೆಗೆ ಸೀಮಿತಗೊಳಿಸಬೇಕು. ಅದಕ್ಕೆಂದು ಬಳಸಲು ಇಟ್ಟಿರುವ ಹಣವನ್ನು ಬರ ಪರಿಹಾರಕ್ಕೆ ವಿನಿಯೋಗಿಸಬೇಕು.ಎನ್. ಲೋಕೇಶ್, ಮುಖಂಡ, ತಿ.ನರಸೀಪುರ
ನೆರವಿಗೆ ಬಳಸಲಿ: ಈ ಬಾರಿ ರಾಜ್ಯದಲ್ಲಿ ಬರ ಪರಿಸ್ಥಿತಿ, ಮಳೆಯ ಕೊರತೆ ಇದೆ. ನೀರಿಲ್ಲದೇ ಫಸಲು ತೆಗೆಯಲು ರೈತರಿಗೆ ಕಷ್ಟವಾದ್ದರಿಂದ ದಿನಬಳಕೆ ಪದಾರ್ಥಗಳ ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಇದು ಜನರಿಗೆ ಹೊರೆಯಾಗಲಿದೆ. ಆದ್ದರಿಂದ ಈ ವರ್ಷ ಸರ್ಕಾರ ದಸರೆಗೆ ಹೆಚ್ಚಿನ ಅನುದಾನ ಬಳಸದೇ ಸರಳವಾಗಿ ಆಚರಿಸಿ ಆ ಹಣವನ್ನು ರೈತರಿಗೆ ನೆರವು ನೀಡಲು ಬಳಸುವುದು ಸೂಕ್ತ. ಸರ್ಕಾರವು ಪ್ರತಿಷ್ಠೆಗಾಗಿ ಸಾರ್ವಜನಿಕ ಹಣವನ್ನು ಬರಗಾಲದಲ್ಲಿ ವ್ಯಯ ಮಾಡುವ ಅಗತ್ಯವಿಲ್ಲ.ಯೋಗೇಶ್, ವರ್ತಕ, ತಿ.ನರಸೀಪುರ
ರೈತರ ಬೆಂಬಲಕ್ಕೆ ನಿಲ್ಲಲಿ: ರೈತ ಈ ದೇಶದ ಬೆನ್ನೆಲುಬು. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಬರದ ಆವರಿಸಿದೆ. ಇಂತಹ ಸಂದರ್ಭದಲ್ಲಿ ಅದ್ಧೂರಿ ಅಥವಾ ವಿಜೃಂಭಣೆಯಿಂದ ದಸರಾ ಆಚರಿಸುವುದು ಬೇಡ. ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಸರ್ಕಾರವೇ ಪ್ರಕಟಿಸಿರುವುದರಿಂದ ಅನ್ನದಾತರ ಬೆನ್ನಿಗೆ ನಿಲ್ಲಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯವೂ ಹೌದು.ಗುರುಸ್ವಾಮಿ ಎಸ್.ಎಂ., ಸಿಂಗರಿಪುರ, ನಂಜನಗೂಡು ತಾಲ್ಲೂಕು
ಸಂಪ್ರದಾಯ ಮುರಿಯುವುದು ಬೇಡ: ಅದ್ಧೂರಿ ಅಥವಾ ಸರಳ ದಸರಾ ಚರ್ಚೆಯಲ್ಲಿ ನಾನಿಲ್ಲ. ಸಾಂಪ್ರದಾಯಿಕವಾಗಿ ನಡೆಸಲಿ. ದಸರಾ ಮಾಡುವಾಗ ಒಂದಷ್ಟು ಹಣ ಖರ್ಚಾಗುತ್ತದೆ. ಅಂದ ಮಾತ್ರಕ್ಕೆ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ ಮುರಿಯುವುದು ಬೇಡ. ಜಂಬೂಸವಾರಿ, ದೀಪಾಲಂಕಾರ, ಕ್ರೀಡೆ, ಕವಿಗೋಷ್ಠಿ ಇರುತ್ತದೆ. ಇದಕ್ಕೆಲ್ಲ ಖರ್ಚು ಆಗೇ ಆಗುತ್ತದೆ. ಬರ ಎಂದು ಸಂಪ್ರದಾಯ ಮುರಿಯುವುದು ಬೇಡ.ಪ್ರತಾಪ ಸಿಂಹ, ಸಂಸದ
ಹಸಿವನ್ನು ಮುಚ್ಚಿಟ್ಟು ಇಸ್ತ್ರಿ ಬಟ್ಟೆ ತೊಟ್ಟಂತೆ: ರಾಜ್ಯದ 195 ತಾಲ್ಲೂಕುಗಳು ಬರದ ಹಸಿವಿನಲ್ಲಿ ಬಳಲುತ್ತಿರುವಾಗ ಅಧಿಕ ಹಣ ಬೇಡುವ ಅದ್ಧೂರಿ ಆಚರಣೆಯು ಹೊಟ್ಟೆಯೊಳಗಿನ ಹಸಿವನ್ನು ಮುಚ್ಚಿಟ್ಟು ಇಸ್ತ್ರಿ ಬಟ್ಟೆ ತೊಟ್ಟಂತೆ ಭಾಸವಾಗುತ್ತದೆ. ಹಿಂದಿಗಿಂತ ನಮ್ಮ ಸರ್ಕಾರದಲ್ಲಿ ಆಚರಣೆಯು ಅದ್ಧೂರಿಯಾಗಿರಬೇಕು ಎಂಬ ಮೇಲಾಟ ಸರಿಯಲ್ಲ. ಬರದಿಂದ ತತ್ತರಿಸಿ ರೈತರು ಮತ್ತು ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿರುವಾಗ ಅದ್ಧೂರಿ ಆಚರಣೆಯ ಅಗತ್ಯವಿಲ್ಲ.ಚೇತನ್ ಕುಮಾರ್, ಸಾಲಿಗ್ರಾಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.