ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಚಾಮುಂಡಿ ಬೆಟ್ಟದ ಮೇಲೆ ಪ್ಲಾಸ್ಟಿಕ್‌ ಹಾವಳಿ

ಅರಣ್ಯ ಇಲಾಖೆಯ ದಂಡಾಸ್ತ್ರ ಮಾದರಿ ಬೆಟ್ಟದ ಮೇಲೂ ಜಾರಿಯಾಗಲಿ: ಪರಿಸರ ಪ್ರಿಯರ ಒತ್ತಾಯ
Published : 21 ಸೆಪ್ಟೆಂಬರ್ 2023, 5:32 IST
Last Updated : 21 ಸೆಪ್ಟೆಂಬರ್ 2023, 5:32 IST
ಫಾಲೋ ಮಾಡಿ
Comments

ಮೋಹನ್‌ ಕುಮಾರ ಸಿ.

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕಸ, ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಯದೇ ಸಮಸ್ಯೆ. ಭಕ್ತರು ಹಾಗೂ ಪ್ರವಾಸಿಗಳು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಸಾಡುತ್ತಿದ್ದು, ದೇವಾಲಯ ಹಿಂಭಾಗ, ಮೆಟ್ಟಿಲು ಭಾಗದಲ್ಲಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ತ್ಯಾಜ್ಯದ ರಾಶಿ ಸಂಗ್ರಹವಾಗುತ್ತಿದೆ. 

ಈ ಮೊದಲು ಬೆಟ್ಟದ ರಸ್ತೆ ಬದಿಯಲ್ಲೆಲ್ಲ ಪ್ಲಾಸ್ಟಿಕ್‌ ತ್ಯಾಜ್ಯ, ಮದ್ಯ ಬಾಟಲಿಗಳು ಬೀಳುತ್ತಿದ್ದವು. ಪ್ಲಾಸ್ಟಿಕ್‌ ಕಾಳ್ಗಿಚ್ಚಿಗೂ ಕಾರಣವಾಗಿತ್ತು. ಈ ಬಗ್ಗೆ ‘ಚಾಮುಂಡಿ ಬೆಟ್ಟ ಉಳಿಸಿ ಸಮಿತಿ’ ವರ್ಷದಿಂದಲೂ ಪ್ಲಾಸ್ಟಿಕ್‌ ಮುಕ್ತ ಚಾಮುಂಡಿಬೆಟ್ಟ ಅಭಿಯಾನ ನಡೆಸಿತ್ತು. ತಿರುಪತಿ ಮಾದರಿಯಲ್ಲಿ ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಒತ್ತಾಯಿಸಿತ್ತು.

ನಿರಂತರ ಹೋರಾಟದ ಪರಿಣಾಮ, ಕಳೆದ ಸೆ.1ರಿಂದ ಅರಣ್ಯ ಇಲಾಖೆಯು ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದ ಸಂರಕ್ಷಣೆಗಾಗಿ ದಂಡಾಸ್ತ್ರ ಪ್ರಯೋಗಿಸಿದೆ. ತಿಂಗಳಲ್ಲಿಯೇ ಮೀಸಲು ಅರಣ್ಯ ಭಾಗದಲ್ಲಿ ಶೇ 75ರಷ್ಟು ಪ್ಲಾಸ್ಟಿಕ್‌ ಸಮಸ್ಯೆ ಬಗೆಹರಿದಿದೆ. ಆದರೆ, ಬೆಟ್ಟದ ಮೇಲ್ಭಾಗದಲ್ಲಿ ತ್ಯಾಜ್ಯ ಸಮಸ್ಯೆ ಬಗೆಹರಿಯುತ್ತಿಲ್ಲ.

ಬೆಟ್ಟದ ಪಾರ್ಕಿಂಗ್‌ನಲ್ಲಿಯೂ ಕಸದ ಮೂಟೆಗಳನ್ನು ಇಡಲಾಗಿದ್ದು, ವಿಲೇವಾರಿಯಾಗದ ಮೂರ್ನಾಲ್ಕು ದಿನ ಅಲ್ಲಿಯೇ ಇರುತ್ತದೆ. ಮಹಿಷ ಪ್ರತಿಮೆಯ ಬಳಿಯ ಖಾಲಿ ಜಾಗಗಳಲ್ಲಿಯೂ ಕಸದ ರಾಶಿ ಸಂಗ್ರಹವಾಗಿದೆ. ಬೆಟ್ಟದ ಮೆಟ್ಟಿನ ಪಕ್ಕದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳನ್ನು ತೂರುತ್ತಿದ್ದಾರೆ. ತಂತಿ– ಗ್ಯಾಲರಿ ಅಳವಡಿಸಿದ್ದರೂ ಪ್ರಯೋಜನವಾಗಿಲ್ಲ. ಕಸದ ಕ್ಯಾನ್‌ಗಳನ್ನು ಇರಿಸಲಾಗಿದ್ದು, ಕೋತಿಗಳು ಅವನ್ನು ಬೀಳಿಸುತ್ತಿವೆ. ಮೆಟ್ಟಿಲು ಮಾರ್ಗಕ್ಕೆ ಕಸವು ಚೆಲ್ಲುತ್ತಿದೆ.

‘ಬೆಟ್ಟದ ಮೇಲ್ಭಾಗದ ಅಂಚುಗಳಲ್ಲಿ ಭಕ್ತರು ಹಾಗೂ ಪ್ರವಾಸಿಗಳು ಎಸೆಯುವ ತ್ಯಾಜ್ಯ ಅರಣ್ಯ ಭಾಗಕ್ಕೆ ಸೇರುತ್ತಿದೆ. ವನ್ಯಜೀವಿಗಳಿಗೆ ತಿಂಡಿ– ತಿನಿಸು ಹಾಗೂ ತೊಂದರೆ ನೀಡುವುದು ಮುಂದುವರಿದಿದೆ. ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಈಗಲೂ ಸಿಗುತ್ತಿದೆ. ಗ್ರಾಮ ಪಂಚಾಯಿತಿ, ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು’ ಎನ್ನುತ್ತಾರೆ ಗ್ರಾಮದ ನಿವಾಸಿ ಭರತ್.

‘ಬೆಟ್ಟಕ್ಕೆ ತೆರಳುವ ಮಾರ್ಗಗಳಲ್ಲಿ ಅರಣ್ಯ ಇಲಾಖೆಯು ವೀಕ್ಷಣಾ ಸಿಬ್ಬಂದಿಯನ್ನು ನೇಮಿಸಿ‌ದೆ. ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವುದು, ಅನುಮತಿ ಇಲ್ಲದೇ ಅರಣ್ಯದೊಳಗೆ ಅತಿಕ್ರಮ ಪ್ರವೇಶ, ಅರಣ್ಯ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುತ್ತಿರುವುದರಿಂದ ಅರಣ್ಯ ಭಾಗದಲ್ಲಿ ಸಮಸ್ಯೆಯಿಲ್ಲ’ ಎಂದು ಅವರು ಹೇಳಿದರು.

‘ಬೆಟ್ಟದ ಮೇಲಿನ ಅಂಗಡಿಗಳಲ್ಲಿ ಆಟಿಕೆಗಳು ಸೇರಿದಂತೆ ಇತರ ಪರಿಕರಗಳ ಪ್ಲಾಸ್ಟಿಕ್‌ನಲ್ಲೇ ಬರುತ್ತಿವೆ. ಕೆಲವು ಹಣ್ಣು– ಕಾಯಿ, ಪೂಜಾ ಸಾಮಗ್ರಿಗಳು ಪ್ಲಾಸ್ಟಿಕ್ ಕವರ್‌ಗಳಲ್ಲಿ ದೇಗುಲಕ್ಕೂ ಪ್ರವೇಶ ಪಡೆಯುತ್ತವೆ. ಗಂಧದ ಕಡ್ಡಿಯ ಪ್ಲಾಸ್ಟಿಕ್ ಕವರ್‌ಗಳು ದೇಗುಲದ ಹಿಂಭಾಗದಲ್ಲಿರುವ ಕಟ್ಟೆಯಾಚೆಗೆ ಸಿಬ್ಬಂದಿಯೇ ಸುರಿಯುತ್ತಾರೆ’ ಎಂದು ಅವಿನಾಶ್‌ ದೂರಿದರು.

‘ಬಸ್‌ಗಳಲ್ಲಿ ‍ಬರುವವರು ಪ್ಲಾಸ್ಟಿಕ್‌ ಕವರ್‌, ಬಾಟಲಿಗಳೊಂದಿಗೆ ಬರುತ್ತಾರೆ. ಅದನ್ನು ತಡೆಯುತ್ತಿಲ್ಲ. ಅದರಿಂದ ತ್ಯಾಜ್ಯ ಸಂಗ್ರಹ ಹೆಚ್ಚಳವಾಗುತ್ತಿದೆ. ದಂಡವನ್ನು ವಿಧಿಸಬೇಕು. ದೇಗುಲದ ಅಂಗಳದೊಳಕ್ಕೆ ತ‍ಪಾಸಣೆ ಮಾಡಬೇಕು. ಜಾಗೃತಿ ಮೂಡಿಸಬೇಕು’ ಎಂದರು.    

ಪಾರ್ಕಿಂಗ್‌ನಲ್ಲಿ ಬಿದ್ದಿರುವ ಕಸದ ಮೂಟೆಗಳು
ಪಾರ್ಕಿಂಗ್‌ನಲ್ಲಿ ಬಿದ್ದಿರುವ ಕಸದ ಮೂಟೆಗಳು
ಭಕ್ತರು ಪ್ಲಾಸ್ಟಿಕ್‌ ಕವರ್‌ ಸಹಿತ ಎಸೆದ ಆಹಾರ ಪೊಟ್ಟಣ ಹಿಡಿದ ಕೋತಿ
ಭಕ್ತರು ಪ್ಲಾಸ್ಟಿಕ್‌ ಕವರ್‌ ಸಹಿತ ಎಸೆದ ಆಹಾರ ಪೊಟ್ಟಣ ಹಿಡಿದ ಕೋತಿ
ಬಸವರಾಜು
ಬಸವರಾಜು
ಪರಶುರಾಮೇಗೌಡ
ಪರಶುರಾಮೇಗೌಡ

ಕಸ ಸಂಗ್ರಹ ಪ್ರಮಾಣ ಹೆಚ್ಚಳ ನಿರ್ವಹಣೆಯದ್ದೇ ತೊಂದರೆ ಕೆಳಭಾಗಕ್ಕೆ ವಿಲೇವಾರಿ ಕೇಂದ್ರ: ಡಿಸಿಎಫ್ ಪತ್ರ

‘₹ 42 ಸಾವಿರ ದಂಡ ಸಂಗ್ರಹ’ ‘ಬೆಟ್ಟದ ಅರಣ್ಯ ಪ್ರದೇಶದ ಭಾಗದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಬಿಸಾಡುವುದು ಮದ್ಯಪಾನ ವನ್ಯಜೀವಿಗಳಿಗೆ ತಿಂಡಿ– ತಿನಿಸು ಹಾಗೂ ತೊಂದರೆ ನೀಡುವುದು ಸೇರಿದಂತೆ ಅರಣ್ಯದಲ್ಲಿ ನಿಯಮಬಾಹಿರ ಚಟುವಟಿಕೆಗಳನ್ನು ನಡೆಸಿದರೆ ದಂಡ ವಿಧಿಸಲಾಗುತ್ತಿದ್ದು 10 ದಿನದಲ್ಲಿ ₹ 42 ಸಾವಿರ ಸಂಗ್ರಹವಾಗಿದೆ’ ಎಂದು ‘ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗ’ದ ಡಿಸಿಎಫ್‌ ಡಾ.ಬಸವರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ನಿಯಮ ಉಲ್ಲಂಘಿಸಿದರೆ ₹ 500ರಿಂದ ₹ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತಿದೆ. ಸೆ.1ರಿಂದ 6ರವರೆಗೆ ಅರಿವು ಮೂಡಿಸಲಾಗಿತ್ತು. ನಂತರ ದಂಡ ಪ್ರಯೋಗ ಮಾಡಲಾಗುತ್ತಿದೆ. ಬೆಟ್ಟದ ಮಾರ್ಗದುದ್ದಕ್ಕೂ ಅರಣ್ಯ ವೀಕ್ಷಕರ ಕಣ್ಗಾವಲಿದ್ದು ವಾಹನದಿಂದ ಇಳಿಯುವವರನ್ನು ಎಚ್ಚರಿಸುತ್ತಿದ್ದಾರೆ. ತ‍ಪ್ಪೆಸಗಿದವರಿಗೆ ದಂಡ ಹಾಕಲಾಗುತ್ತಿದೆ’ ಎಂದರು. ‘ಬೆಟ್ಟದ ಮೇಲಿನ ಪ್ಲಾಸ್ಟಿಕ್ ನಿಯಂತ್ರಣವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಧಾರ್ಮಿಕ ದತ್ತಿ ಇಲಾಖೆ ಮಾಡಬೇಕು. ಬೆಟ್ಟದಲ್ಲಿರುವ ಕಸ ವಿಲೇವಾರಿ ಘಟಕವನ್ನು ಬೆಟ್ಟದ ಕೆಳಗೆ ತರಬೇಕು ಎಂದು ಇಒ ಅವರಿಗೆ ಪತ್ರ ಬರೆಯಲಾಗಿದೆ’ ಎಂದರು. ‘ರಾತ್ರಿ ವೇಳೆ ಅನಧಿಕೃತವಾಗಿ ಭೇಟಿ ನೀಡುವವರನ್ನು ನಿಯಂತ್ರಿಸಲು ಮುಖ್ಯದ್ವಾರ ಹೊರತುಪಡಿಸಿ ಉಳಿದ ಮೂರು ದ್ವಾರಗಳನ್ನು ಬಂದ್‌ ಮಾಡಲಾಗಿದೆ. ಇಂಥ ಕಟ್ಟುನಿಟ್ಟಿನ ಕ್ರಮಗಳು ಚಾಮುಂಡಿ ಬೆಟ್ಟದ ಪರಿಸರ ಉಳಿವು ಹಾಗೂ ತಾಯಿ ಚಾಮುಂಡಿಗೆ ‘ಅರಣ್ಯ ಇಲಾಖೆಯ’ ಸೇವೆಯಾಗಿದೆ’ ಎಂದು ಹೇಳಿದರು.

‘ತಪಾಸಣೆ ಮಾಡಿಯೇ ಪ್ರವೇಶ ನೀಡಿ’ ‘ಬೆಟ್ಟದಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಹಾಗೂ ಪ್ರವಾಸಿಗರು ಭಕ್ತರು ಬಿಸಾಡುವ ತ್ಯಾಜ್ಯಗಳೆರಡನ್ನು ನಿಯಂತ್ರಿಸಬೇಕು. ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ಲಾಸ್ಟಿಕ್‌ ಕೊಂಡುಹೋಗಲು ಅವಕಾಶವಿಲ್ಲ. ಅಲ್ಲಿಯಂತೆಯೇ ಪ್ರವೇಶದ್ವಾರದಲ್ಲಿಯೇ ತಪಾಸಣೆ ಮಾಡಬೇಕು’ ಎಂದು ಪರಿಸರವಾದಿ ಪರಶುರಾಮೇಗೌಡ ಪ್ರತಿಕ್ರಿಯಿಸಿದರು. ‘ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲು ಎಲ್ಲ ಇಲಾಖೆಗಳೂ ಸಮನ್ವಯದಿಂದ ಕೆಲಸ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT