ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನಿಂದ ಬಂದ ಅದೃಷ್ಟ: ಜವರಪ್ಪ ಸಂತಸ

ಪತ್ರಿಕಾ ವಿತರಕರಾದ ಜವರಪ್ಪಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ
Published 31 ಅಕ್ಟೋಬರ್ 2023, 13:02 IST
Last Updated 31 ಅಕ್ಟೋಬರ್ 2023, 13:02 IST
ಅಕ್ಷರ ಗಾತ್ರ

ಮೈಸೂರು: ‘ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್‌ ನನಗೆ ಅದೃಷ್ಟ ತಂದುಕೊಟ್ಟಿದೆ. ಈ ಪತ್ರಿಕೆಗಳಿಂದ ನನ್ನನ್ನು ಇತ್ತೀಚೆಗಷ್ಟೆ ಸನ್ಮಾನಿಸಲಾಗಿತ್ತು. ಈಗ ನನ್ನನ್ನು ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಬಹಳ ಖುಷಿಯೊಂದಿಗೆ ಹೆಮ್ಮೆಯೂ ಆಗುತ್ತಿದೆ’ ಎಂದು ಇಲ್ಲಿನ ಪತ್ರಿಕಾ ವಿತರಕರಾದ ಜವರಪ್ಪ ಸಂತಸ ಹಂಚಿಕೊಂಡರು.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿ ಗೌರವಿಸಲಾಗಿದೆ. ಮಾಧ್ಯಮ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಪತ್ರಿಕಾ ವಿತರಕಾ ಸಮುದಾಯದಿಂದ ಮೈಸೂರಿನ ಜವರಪ್ಪ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಈ ಶ್ರಮಿಕರ ಕಾರ್ಯಕ್ಷಮತೆ ಮತ್ತು ಶ್ರಮವನ್ನು ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿ ಗುರುತಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜವರಪ್ಪ, ‘ಸರ್ಕಾರವು ದಾಖಲೆ ಬರೆದಿದ್ದು, ಅದು ನನ್ನ ಹೆಸರಿನಲ್ಲಿ ಆಗಿದೆ ಎನ್ನುವುದು ಖುಷಿ. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನನ್ನ ಶ್ರಮ ಗುರುತಿಸಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದರು.

‘ನಾನು 15ನೇ ವಯಸ್ಸಿನಲ್ಲಿದ್ದಾಗಲೇ ಪತ್ರಿಕೆ ವಿತರಣೆ ಆರಂಭಿಸಿದೆ. ಆಗ, ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಷ್ಟೇ ಇದ್ದವು. ಕ್ರಮೇಣ ಬೇರೆ ಬೇರೆ ಪತ್ರಿಕೆಗಳು ಬಂದವು. ಮಳೆ, ಚಳಿ ಎನ್ನದೇ ಈ ಕೆಲಸದಲ್ಲಿ ಮಾಡುತ್ತಾ ಬಂದಿದ್ದೇನೆ. ಕೊರೊನಾ ಸಮಯದಲ್ಲೂ ವಿತರಣೆ ನಿಲ್ಲಿಸಿರಲಿಲ್ಲ. ಈ ಕೆಲಸವೇ ಈಗ ನನ್ನೆ ಕೈಹಿಡಿದಿದೆ. ರಾಜ್ಯೋತ್ಸವ ಪ್ರಶಸ್ತಿಯವರೆಗೂ ತಂದು ನಿಲ್ಲಿಸಿ, ಸಮಾಜದಲ್ಲಿ ಒಳ್ಳೆಯ ಹೆಸರನ್ನೂ ತಂದುಕೊಟ್ಟಿದೆ’ ಎಂದು ಹೇಳಿದರು.

10ನೇ ತರಗತಿ ವಿದ್ಯಾರ್ಹತೆಯ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಕಥೆ ಪುಸ್ತಕ ಓದುವುದು ಅವರ ಹವ್ಯಾಸ. ಸದ್ಯ ಚಾಮುಂಡಿಪುರಂನ ಮೇದರಕೇರಿ 3ನೇ ಕ್ರಾಸ್‌ನಲ್ಲಿ ವಾಸವಿದ್ದಾರೆ.

‘ನಾವು ಮೊದಲು ಚಾಮರಾಜ ಜೋಡಿ ರಸ್ತೆಯಲ್ಲಿದ್ದೆವು. ಈಗ ಮೇದರಕೇರಿಯಲ್ಲಿ ಬಾಡಿಗೆ ಮನೆಯಲ್ಲಿದ್ದೇವೆ. ಸ್ವಂತ ಮನೆ ಮಾಡಿಕೊಳ್ಳಲಾಗಿಲ್ಲ ಎಂಬ ಕೊರಗು ಇದೆ. ಪತ್ರಿಕೆ ವಿತರಣೆ ಕೆಲಸ ನನಗೆ ಜೀವನ ನೀಡಿದೆ. ಅದರಿಂದಲೇ ಇಬ್ಬರು ಮಕ್ಕಳನ್ನು ಓದಿಸಿದೆ, ಮದುವೆ ಮಾಡಿದೆ. ಈಗ ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ನಿತ್ಯವೂ ಕೆ.ಆರ್‌. ವೃತ್ತದಲ್ಲಿ ಪತ್ರಿಕೆ ಸಂಗ್ರಹಿಸಿಕೊಂಡು ಹೋಗಿ ಮನೆಗಳಿಗೆ ಹಾಕುತ್ತೇನೆ. ಇಂದಿಗೂ ಸೈಕಲ್‌ನಲ್ಲೇ ಮನೆ ಮನೆಗೆ ಪತ್ರಿಕೆ ವಿತರಣೆ ಮಾಡುತ್ತಿದ್ದೇನೆ. ಒಮ್ಮೆ ಅಪಘಾತಕ್ಕೆ ಒಳಗಾಗಿದ್ದೆ. ಆದರೂ ನನ್ನ ವೃತ್ತಿ ಬಿಟ್ಟಿಲ್ಲ’ ಎನ್ನುತ್ತಾರೆ ಅವರು.

‘ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಸರ್ಕಾರದಿಂದ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ. ನನ್ನಂತೆ ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಕಟ್ಟಿಸಿಕೊಡಲು ಕ್ರಮ ವಹಿಸಬೇಕು’ ಎಂದು ಕೋರುತ್ತಾರೆ ಅವರು.

ಜವರಪ್ಪ ಅವರನ್ನು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ನಿಂದ ಇದೇ ನವರಾತ್ರಿ ಸಂದರ್ಭದಲ್ಲಿ ‘ಹೆಮ್ಮೆಯ ವಿತರಕ’ ಎಂದು ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT