ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು| ಭತ್ತದ ಬೀಜ ವಿತರಣೆಗೆ ತಯಾರಿ: ಚಂದ್ರಶೇಖರ್‌

ಈ ಬಾರಿ ರಾಜ್ಯದಲ್ಲೇ ಮೊದಲ ಬಾರಿಗೆ ಕ್ಯೂಆರ್‌ ಕೋಡ್ ಬಳಕೆ: ಚಂದ್ರಶೇಖರ್‌
Published 25 ಜುಲೈ 2023, 5:49 IST
Last Updated 25 ಜುಲೈ 2023, 5:49 IST
ಅಕ್ಷರ ಗಾತ್ರ

ಮೈಸೂರಿನ ‘ಪ್ರಜಾವಾಣಿ’ ಕಚೇರಿಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್‌.ಚಂದ್ರಶೇಖರ್‌ ಅವರೊಂದಿಗೆ ಸೋಮವಾರ ಆಯೋಜಿಸಿದ್ದ ‘ಫೋನ್‌ಇನ್’ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಇಲಾಖೆಯ ಯೋಜನೆಗಳು, ಬೆಳೆ ವಿಮೆ, ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳಿಗೆ ಸಂಬಂಧಿಸಿ ಅನುಮಾನ–ಗೊಂದಲಗಳಿಗೆ ಓದುಗರು ಉತ್ತರ ಪಡೆದುಕೊಂಡರು. ಎಲ್ಲರಿಗೂ ಸಮಾಧಾನದಿಂದ ಸ್ಪಂದಿಸಿದ ಚಂದ್ರಶೇಖರ್‌, ವೈಜ್ಞಾನಿಕ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಿದರು. ರೈತ ಸಂಪರ್ಕ ಕೇಂದ್ರಗಳಿಗೆ ಆಗಾಗ ಭೇಟಿ ನೀಡಿ, ಅಲ್ಲಿ ಮಾಹಿತಿ–ಮಾರ್ಗದರ್ಶನ ಮೊದಲಾದ ಪ್ರಯೋಜನ ಪಡೆದುಕೊಳ್ಳುವಂತೆಯೂ ಕೋರಿದರು.

ಮೈಸೂರು: ‘ರೈತ ಸಂಪರ್ಕ ಕೇಂದ್ರಗಳ ಮೂಲಕ ಜುಲೈ 26ರಿಂದ ಭತ್ತದ ಬಿತ್ತನೆ ಬೀಜಗಳ ವಿತರಣೆ ಆರಂಭಿಸಲಾಗುವುದು. ಈ ಬಾರಿ ರಾಜ್ಯದಲ್ಲೇ ಇದೇ ಮೊದಲಿಗೆ ‘ಕ್ಯೂಆರ್‌ ಕೋಡ್’ ಬಳಸುವುದರಿಂದ ಅಕ್ರಮಕ್ಕೆ ಹಾಗೂ ಇರುವ ಜಮೀನಿಗಿಂತಲೂ ಹೆಚ್ಚುವರಿಯಾಗಿ ಪಡೆಯಲು ಅವಕಾಶವಿರುವುದಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್.ಚಂದ್ರಶೇಖರ್‌ ತಿಳಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಓದುಗರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ. ಜಿಲ್ಲೆಗೆ 18ಸಾವಿರ ಕ್ವಿಂಟಲ್ ಹಂಚಿಕೆಯಾಗಿದೆ. 13ಸಾವಿರ ಕ್ವಿಂಟಲ್‌ ಸಾಕಾಗುತ್ತದೆ. 1.07 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತದೆ; 45ಸಾವಿರದಿಂದ 48ಸಾವಿರ ರೈತರು ಈ ಕೃಷಿ ಮಾಡುತ್ತಾರೆ. ಬೀಜಗಳನ್ನು ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಕ್ಯೂಆರ್‌ ಕೋಡ್ ಸ್ಕ್ಯಾನ್‌ ಮಾಡುವುದರಿಂದ ಯಾವ ಲಾಟ್ ಯಾರಿಗೆ ಹೋಗಿದೆ, ಯಾವ ತಳಿ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ರೈತವಾರು ಮಾಹಿತಿ ದೊರೆಯುತ್ತದೆ. ಚೀಲದ ಮೇಲೆಯೇ ಕ್ಯೂಆರ್‌ ಕೋಡ್ ಮುದ್ರಿತವಾಗಿರುತ್ತದೆ. ಈ ಬಾರಿ ನೀಡುತ್ತಿರುವ ಬಿತ್ತನೆ ಬೀಜ ಮೊದಲಾದ ಎಲ್ಲ ಪರಿಕರಗಳಿಗೂ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. 1ಸಾವಿರ ಕ್ವಿಂಟಲ್‌ ಬಿತ್ತನೆ ಬೀಜಗಳನ್ನು ಈ ವ್ಯವಸ್ಥೆಯಲ್ಲಿ ವಿತರಿಸಲಾಗಿದೆ’ ಎಂದರು.

‘ಬಹು ಬೇಡಿಕೆ ಇರುವ ‘ಜ್ಯೋತಿ’ ಭತ್ತದ ತಳಿಯೂ ರೈತ ಸಂಪರ್ಕ ಕೇಂದ್ರಗಳಲ್ಲಿ ದೊರೆಯಲಿದೆ. 6ರಿಂದ 7ಸಾವಿರ ಕ್ವಿಂಟಲ್‌ ಕೊಡಲಾಗುತ್ತದೆ. ನಂತರವೂ ಬೇಕಾದರೆ, ಖಾಸಗಿಯವರಿಂದ ಕೊಡಿಸಲಾಗುವುದು. ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಕೊರತೆ ಇಲ್ಲ. ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಧೈರ್ಯ ತುಂಬಿದರು.

******

ಪ್ರಶ್ನೋತ್ತರ

* ಕರ್ಣಕುಮಾರ್‌ ಎಚ್‌.ಪಿ., ಹೆಜ್ಜಿಗೆ, ನಂಜನಗೂಡು ತಾಲ್ಲೂಕು: ರೈತರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ ಯಾವಾಗಿನಿಂದ ಪೂರೈಸುತ್ತೀರಿ?

ಚಂದ್ರಶೇಖರ್‌: ಬುಧವಾರದಿಂದಲೇ ಆರಂಭವಾಗಲಿದೆ. ಅದಕ್ಕಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.

* ಮಹೇಶ್‌, ಗಾವಡಗೆರೆ, ಹುಣಸೂರು ತಾಲ್ಲೂಕು: ತೊಗರಿಗೆ ರೋಗ ಬಾಧೆ ಹೆಚ್ಚಾಗಿದೆ. ಅದಕ್ಕೆ ಏನು ಔಷಧೋಪಚಾರ ಮಾಡಬೇಕು? ಬಿತ್ತನೆ ಬೀಜದ್ದೇ ಸಮಸ್ಯೆ ಆಗಿದೆ. ಸಾಕಷ್ಟು ಮುಂಚಿತವಾಗಿಯೇ ಕೊಡಬಾರದೇಕೆ?

ಮೋಡ ಮುಸುಕಿದ ವಾತಾವರಣ ಇದ್ದಷ್ಟು ಬೆಳೆಗಳಿಗೆ ರೋಗ ಸಹಜ. ರೋಗಪೀಡಿತವಾದ ಒಂದೆರಡು ಗಿಡ ಕಿತ್ತು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ. ಅಲ್ಲಿ ಔಷಧೋಪಚಾರದ ಸಲಹೆ ದೊರೆಯುತ್ತದೆ. ಇಲಾಖೆಯಿಂದ ಈ ವರ್ಷ ಏಪ್ರಿಲ್‌ 4ರಿಂದಲೇ ಉದ್ದು, ಹೆಸರು, ಅಲಸಂದೆ, ಮುಸುಕಿನಜೋಳ ಮೊದಲಾದ ಬಿತ್ತನೆ ಬೀಜಗಳನ್ನು ವಿತರಿಸಿದ್ದೇವೆ. ಹತ್ತಿ ಬೀಜದ ವಿತರಣೆಗೂ ವ್ಯವಸ್ಥೆ ಮಾಡಿದ್ದೇವೆ. ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ.

* ಕೃಷ್ಣ, ಕುಪ್ಪೆ, ಹುಣಸೂರು ತಾಲ್ಲೂಕು: ಹನಿ ನೀರಾವರಿ ಪದ್ಧತಿ ಅಡಿ ಟೊಮೆಟೊ, ಬದನೆಗೆ ರಸಗೊಬ್ಬರ ಪೂರೈಸುತ್ತಿದ್ದೇನೆ. ಇದರಿಂದ ಏನಾದರೂ ತೊಂದರೆ ಇದೆಯೇ?

ಇಲ್ಲ. ಹನಿ ನೀರಾವರಿಗೆ ಫಿಲ್ಟರ್‌ ಅಳವಡಿಸಿಕೊಂಡು ಪೂರೈಸಿ. ಉತ್ತಮ ಇಳುವರಿ ಪಡೆಯಬಹುದು.

* ಪ್ರಭಾಕರ್, ನಿಲುವಾಗಿಲು: ರೈತರು ತಾವು ಬೆಳೆದ ರಾಗಿಯನ್ನು ಖಾಸಗಿಯವರಿಗೆ ಮಾರಿದ ನಂತರ ಸರ್ಕಾರ ಖರೀದಿ ಕೇಂದ್ರ ತೆರೆಯುತ್ತದೆ. ಇದರಿಂದ ಮಧ್ಯವರ್ತಿಗಳಿಗೆ ಉಪಯೋಗ ಆಗುತ್ತಿದೆಯೇ ಹೊರತು ರೈತರಿಗೆ ಹೆಚ್ಚು ಪ್ರಯೋಜನ ಆಗುತ್ತಿಲ್ಲ.

ರೈತರ ಆರ್‌ಟಿಸಿ, ಬೆಳೆ ಮಾಹಿತಿ ಎಲ್ಲವನ್ನೂ ಪಡೆದೇ ಅವರಿಂದ ಖರೀದಿಸಲಾಗುತ್ತದೆ. ಹೀಗಾಗಿ ಬೆಳೆದ ರೈತರಿಂದ ಮಾತ್ರವೇ ಖರೀದಿ ಆಗುತ್ತಿದ್ದು, ಅದನ್ನು ಫ್ರೂಟ್ಸ್‌ ಗುರುತಿನ ಸಂಖ್ಯೆ ಅಡಿ ಪರಿಶೀಲಿಸಲಾಗುತ್ತಿದೆ. ಇದರಿಂದ ರೈತರಿಗೆ ಮಾತ್ರ ಅನುಕೂಲ. ಈ ಬಗ್ಗೆ ಕೃಷಿ ಇಲಾಖೆ ಜೊತೆಗೆ ಪ್ರಗತಿಪರ ರೈತರೂ ಕೈ ಜೋಡಿಸಿ ಅರಿವು ಮೂಡಿಸಬೇಕು.

* ಸಿದ್ದರಾಜು, ಯಲಚಗೆರೆ: ಎಚ್‌.ಡಿ. ಕೋಟೆ ಹಾಗೂ ನಂಜನಗೂಡು ತಾಲ್ಲೂಕುಗಳಲ್ಲಿ ಹತ್ತಿ ಹೆಚ್ಚು ಬೆಳೆಯುತ್ತಾರೆ. ಖಾಸಗಿಯವರಿಂದ ಕಳಪೆ ಬೀಜ ವಿತರಣೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದಿಂದಲೇ ಬಿತ್ತನೆ ಬೀಜ ಏಕೆ ನೀಡುವುದಿಲ್ಲ?

ದೇಶದಲ್ಲಿ ಆಹಾರ ಧಾನ್ಯ, ಎಣ್ಣೆಕಾಳು, ದ್ವಿಚಳ ಧಾನ್ಯ ಬೆಳೆ ಹೆಚ್ಚಿಸುವ ಸಲುವಾಗಿ ಸರ್ಕಾರ ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ಕಡಿಮೆ ಮಾಡಿದೆ. ಸಬ್ಸಿಡಿ ಅಡಿ ಹತ್ತಿ ಬೀಜ ವಿತರಣೆಯನ್ನು 8–10 ವರ್ಷದ ಹಿಂದೆಯೇ ನಿಲ್ಲಿಸಿದೆ.

* ಆರ್‌. ವೆಂಕಟೇಶ್‌, ಬೆಟ್ಟದಪುರ, ಪಿರಿಯಾಪಟ್ಟಣ: ಕಡಿಮೆ ನೀರಿನಲ್ಲಿ ಉತ್ತಮವಾಗಿ ಬೆಳೆಯುವ ಬೆಳೆಗಳು ಯಾವುವು?

ರೈತರು ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಹೆಚ್ಚು ನೀರು ಬೇಕಾಗಿಲ್ಲ. ತುಂತುರು ಇಲ್ಲವೇ ಹನಿ ನೀರಾವರಿ ಯೋಜನೆಗಳನ್ನು ಅಳವಡಿಸಿಕೊಂಡು ಯಾವುದೇ ಬೆಳೆಯನ್ನು ಉತ್ತಮವಾಗಿ ಬೆಳೆಯಬಹುದು. ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ಉಂಟಾಗುವ ನಷ್ಟ ತಪ್ಪಿಸಲು ಬೆಳೆ ವಿಮೆ ಲಾಭ ಪಡೆಯಬಹುದು. ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ.

* ಮಹದೇವಶೆಟ್ಟಿ, ಸೋಸಲೆ: ನಮ್ಮ ಹೋಬಳಿಗೆ ಯಾವ ಭತ್ತದ ತಳಿ ಶಿಫಾರಸು ಮಾಡಲಾಗಿದೆ?

ಐಆರ್‌ 64, 1011, 1010, ಜ್ಯೋತಿ ತಳಿಗಳನ್ನು ಈ ಹೋಬಳಿಗಳಲ್ಲಿ ಬೆಳೆಯಲು ಅವಕಾಶ ಇದೆ. ಮುಂದಿನ 25 ದಿನದಲ್ಲಿ ನಾಟಿ ಮಾಡಿದರೆ ಒಳ್ಳೆಯದು.

* ಅಪ್ಪಣ್ಣ, ತಿ.ನರಸೀಪುರ: ಒಂದು ಗೊಬ್ಬರ ತೆಗೆದುಕೊಂಡರೆ ಇನ್ನೊಂದು ಗೊಬ್ಬರ ತೆಗೆದುಕೊಳ್ಳಬೇಕು ಎಂದು ಮಾರಾಟಗಾರರು ಹೇಳುತ್ತಾರೆ. ನಿರಾಕರಿಸಿದರೆ ಗೊಬ್ಬರ ಕೊಡುತ್ತಿಲ್ಲ.

ಈ ಬಗ್ಗೆ ರಸಗೊಬ್ಬರ ಸರಬರಾಜು ಕಂಪನಿ, ವರ್ತಕರ ಜೊತೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದೇವೆ. ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಸಣ್ಣ ಚೀಲ ಕೊಡಿ-

* ಜಗದೀಶ್‌, ಕೃಷ್ಣಪುರಗೇಟ್, ಗಾವಡಗೆರೆ ಹೋಬಳಿ: ಸಣ್ಣ ರೈತರಿಗೆ 25 ಕೆ.ಜಿ. ಬಿತ್ತನೆ ಬೀಜ ಬೇಕಾಗುವುದಿಲ್ಲ. ಐದು ಕೆ.ಜಿ. ಚೀಲದಲ್ಲಿ ವಿತರಿಸಿದರೆ ಸಣ್ಣ ರೈತರಿಗೆ ಅನುಕೂಲ ಆಗಲಿದೆ.

ರೈತರಿಗೆ ಪ್ಯಾಕಿಂಗ್‌ ವೆಚ್ಚದ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ 25 ಕೆ.ಜಿ. ಚೀಲಗಳಲ್ಲಿ ವಿತರಿಸಲಾಗುತ್ತಿದೆ. ಸರಾಸರಿ 10 ಕೆ.ಜಿ. ಚೀಲಗಳನ್ನೂ ವಿತರಿಸುವಂತೆ ಈಗಾಗಲೇ ಪ್ರಸ್ತಾವ ಸಲ್ಲಿಸಿದ್ದೇವೆ.

* ಎಂ.ಬಿ. ಕುಮಾರಸ್ವಾಮಿ, ಮಾದಾಪುರ: ಮುಸುಕಿನ ಜೋಳ ಕೆಲವೆಡೆ ಮೊಳಕೆ ಕಟ್ಟುತ್ತಿದ್ದು, ನಷ್ಟ ಎದುರಾಗುವ ಸಾಧ್ಯತೆ ಇದೆ. ರೈತರಿಗೆ ಸರ್ಕಾರದಿಂದ ಏನಾದರೂ ಪರಿಹಾರ ಆಗಲಿದೆಯೇ?

ಬೆಳೆ ವಿಮೆಗೆ ನೋಂದಾಯಿಸುವುದರಿಂದ ರೈತರು ಈ ರೀತಿಯ ನಷ್ಟಕ್ಕೆ ಪರಿಹಾರ ಕಂಡುಕೊಳ್ಳಬಹುದು. ಮುಸುಕಿನ ಜೋಳಕ್ಕೆ ರೈತರು ಎಕರೆಗೆ ₹522 ಕಂತು ಪಾವತಿಸಿದರೆ ಸಾಕು, ವಿಮೆ ಸೌಲಭ್ಯ ಸಿಗುತ್ತದೆ.

* ಯೋಗೇಂದ್ರ ಪ್ರಸಾದ್‌, ಎಲಚಗೆರೆ: ಬೆಳೆ ಸಮೀಕ್ಷೆಯಲ್ಲಿ ಮರ–ಗಿಡಗಳನ್ನು ಸೇರಿಸಲು ಅವಕಾಶ ಇದೆಯೇ?, ಕೊನೆಯ ದಿನಾಂಕ ಯಾವುದು?

ಖಂಡಿತ ಇದೆ. ಪ್ರತಿ ವರ್ಷ ನಾಲ್ಕು ಬಾರಿ ಸರ್ವೆ ನಡೆಯುತ್ತದೆ. ರೈತರೇ ಖುದ್ದಾಗಿ ಸೇರಿಸಬಹುದು. ಪೂರ್ವ ಮುಂಗಾರಿಗೆ ಜುಲೈ 31 ಕಡೆಯ ದಿನವಾಗಿದೆ. ಮುಂಗಾರಿಗೆ ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ನೀವೇ ಸ್ವತಃ ಬೆಳೆ ಸಮೀಕ್ಷೆ ನಡೆಸಬಹುದು.

ಟಾರ್ಪಲಿನ್‌ ವಿತರಣೆಯಲ್ಲಿ ಅಕ್ರ: ಆರೋಪ- * ಕೆ.ಆರ್. ಕುಮಾರ್‌ ಭೋವಿ, ಹುಣಸೂರು: ಮಾರಾಟ ಮಳಿಗೆಗಳಲ್ಲಿ ರಸಗೊಬ್ಬರದ ದರ ಫಲಕ ಆಗಿಲ್ಲ. ಗೊಬ್ಬರ ಖರೀದಿಗೆ ರಸೀದಿ ಕೊಡುತ್ತಿಲ್ಲ. ಟಾರ್ಪಲಿನ್‌ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ. ₹ 1,550ರ ಬದಲಿಗೆ ₹ 1,750 ತಗೊಂಡಿದ್ದಾರೆ.

ರಸಗೊಬ್ಬರ ದರ ಫಲಕ ಹಾಕುವುದು ಕಡ್ಡಾಯ. ಗೊಬ್ಬರ ಖರೀದಿಗೆ ಕಡ್ಡಾಯವಾಗಿ ರಸೀದಿ ನೀಡಲು ಈಗಾಗಲೇ ಸೂಚಿಸಲಾಗಿದೆ. ರೈತರ ಗುರುತಿನ ಸಂಖ್ಯೆ ಆಧರಿಸಿ ಟಾರ್ಪಲಿನ್ ನೀಡಲಾಗುತ್ತದೆ. ಅಕ್ರಮಕ್ಕೆ ಅವಕಾಶ ಆಗುವುದಿಲ್ಲ. ನಿರ್ದಿಷ್ಟ ದೂರಿದ್ದರೆ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

* ಪ್ರದೀಪ್‌, ಹನಗೋಡು: ಪ್ರಾಣಿ ದಾಳಿಯಿಂದ ಬೆಳೆ ನಷ್ಟ ಹೆಚ್ಚಿದೆ. ರೈತರಿಗೆ ಪರಿಹಾರ ನೀಡಲು ಸಾಧ್ಯವೇ?

ಕೃಷಿ ಬೆಳೆಗಳಿಗೆ ನಷ್ಟ ತಪ್ಪಿಸಲು ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದಲ್ಲಿ ಪರಿಹಾರ ಪಡೆಯಬಹುದು. ಮುಸುಕಿನ ಜೋಳಕ್ಕೆ ವಿಮೆ ನೋಂದಣಿಗೆ ಈ ತಿಂಗಳ 31ರವರೆಗೂ ಅವಕಾಶ ಇದೆ. ಹತ್ತಿರದ ರೈತ ಸಂಪರ್ಕ ಕೇಂದ್ರ ಇಲ್ಲವೇ ಗ್ರಾಮ ಒನ್‌ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಬೆಳೆ ನಷ್ಟ ಪರಿಹಾರ ಪರಿಹಾರಕ್ಕೆ ಅರಣ್ಯ ಇಲಾಖೆ ಸಂಪರ್ಕಿಸಿ.

ರಾಮೇಗೌಡ, ಹುಣಸೂರು: ನಮಗೆ ವಿತರಿಸಿದ್ದ ಪೈಪ್ ಕಳಪೆಯಾಗಿದೆ

ಮಾರ್ಚ್‌ನಿಂದ ಏಪ್ರಿಲ್‌ವರೆಗೆ ನೀಡಿದ ಪೈಪ್‌ಗಳ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ದೂರು ಬಂದಿರಲಿಲ್ಲ. ನಿಮ್ಮದೇ ಮೊದಲ ದೂರು. ಪರಿಶೀಲಿಸಲು ಸೂಚಿಸಲಾಗುವುದು.

ಪ್ರಜಾವಾಣಿ ಫೋನ್ಇನ್ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಆರ್.ಚಂದ್ರಶೇಖರ್‌ ಭಾಗವಹಿಸಿದ್ದರು/ ಪ್ರಜಾವಾಣಿ ಚಿತ್ರ.
ಪ್ರಜಾವಾಣಿ ಫೋನ್ಇನ್ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಆರ್.ಚಂದ್ರಶೇಖರ್‌ ಭಾಗವಹಿಸಿದ್ದರು/ ಪ್ರಜಾವಾಣಿ ಚಿತ್ರ.

ಕಣವಿಲ್ಲ ಟಾರ್ಪಲ್‌ ಬಳಸಿ...

ಕೃಷಿ ಉತ್ಪನ್ನಗಳ ಒಕ್ಕಣೆಗೆ ಕಣ ನಿರ್ಮಿಸಿಕೊಡುವ ಯೋಜನೆ ಈಗ ಇಲ್ಲ. ಅದರ ಬದಲಿಗೆ ವಿವಿಧ ಯೋಜನೆಗಳಡಿ ಟಾರ್ಪಲಿನ್‌ಗಳನ್ನು ಕೊಡಲಾಗುತ್ತಿದೆ. ಹಿಂದಿನ ವರ್ಷ 23ಸಾವಿರ ನೀಡಲಾಗಿತ್ತು. ಈ ಬಾರಿ 25ಸಾವಿರ ಕೇಳಿದ್ದೇವೆ. ಅರ್ಹ ಫಲಾನುವಿಗಳು ಪಡೆದುಕೊಳ್ಳಬಹುದು. 6x8 ಮೀಟರ್‌ ಅಳತೆಯ ಇವು ಉತ್ತಮ ಗುಣಮಟ್ಟದವಾಗಿವೆ. ಅವುಗಳನ್ನು ಬಳಸಿ ಒಕ್ಕಣೆ ಮಾಡಬಹುದು. ರಸ್ತೆಯಲ್ಲಿ ಒಕ್ಕಣೆ ಮಾಡಬಾರದು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ರೈತರೂ ಸಹಕರಿಸಬೇಕು’ ಎಂದು ಚಂದ್ರಶೇಖರ್‌ ತಿಳಿಸಿದರು.

ಕೃಷಿ ಭಾಗ್ಯ:

ಕಾರ್ಯಸಾಧ್ಯತೆ ವರದಿ ಸಲ್ಲಿಕೆ ‘ಹಿಂದೆ ಇದ್ದ ಕೃಷಿ ಭಾಗ್ಯ ಮರು ಜಾರಿ ಸಂಬಂಧ ಸರ್ಕಾರದ ಸೂಚನೆಯಂತೆ ‘ಕಾರ್ಯಸಾಧ್ಯತೆ ವರದಿ’ ಸಿದ್ಧಪಡಿಸಿ ಸಲ್ಲಿಸಿದ್ದೇವೆ. ಅದರಿಂದ ಮಳೆಯಾಶ್ರಿತ ಪ್ರದೇಶದವರಿಗೆ ಅನುಕೂಲವಾಗಲಿದೆ. ನೀರು ಸಂಗ್ರಹಿಸಿಕೊಂಡು ಸಮರ್ಪಕವಾಗಿ ಬಳಸುವುದೂ ಸಾಧ್ಯವಾಗುತ್ತದೆ. ಹನಿನೀರಾವರಿ ಮೂಲಕ ಬಳಸಿದರೆ ಮಿತವ್ಯಯ ಸಾಧ್ಯವಾಗುತ್ತದೆ; ಬೆಳೆಗೆ ಬೇಕಾದಷ್ಟೇ ಕೊಡಬಹುದು. ಯೋಜನೆ ಜಾರಿಯಲ್ಲಿದ್ದಾಗ 3500 ಕೃಷಿ ಹೊಂಡ ನಿರ್ಮಿಸಲಾಗಿದೆ’ ಎಂದು ಜಂಟಿ ನಿರ್ದೇಶಕರು ತಿಳಿಸಿದರು. ‘ಇ–ಕೆವೈಸಿ ಪ್ರಕ್ರಿಯೆಯು ಶೇ 76ರಷ್ಟು ಆಗಿದೆ. ಶೇ 24ರಷ್ಟು ಬಾಕಿ ಇದೆ. ನಮ್ಮ ಸಿಬ್ಬಂದಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ರೈತರು ಇದಕ್ಕೆ ಆದ್ಯತೆ ನೀಡಭೇಕು. ಇಲ್ಲದಿದ್ದರೆ ಪಿಎಂ–ಕೃಷಿ ಸಮ್ಮಾನ್‌ ಆರ್ಥಿಕ ನೆರವು ಸಿಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಹನಿ ನೀರಾವರಿ ಪೈಪ್‌ಗಳನ್ನು 7 ವರ್ಷಕ್ಕೊಮ್ಮೆ ಬದಲಿಗೆ 3 ವರ್ಷಕ್ಕೊಮ್ಮೆ ವಿತರಿಸುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದರು.

ಹೆಚ್ಚು ಹೈಬ್ರೀಡ್...

ಹೊಸ ಸಮಸ್ಯೆ! * ರಾಮ್‌ಪ್ರಸಾದ್‌ ಕೆ.ಆರ್‌. ನಗರ: ಕೃಷಿ ಇಲಾಖೆಯಿಂದ ನಾಟಿ ತಳಿಯ ಬಿತ್ತನೆ ಬೀಜ ನೀಡಲಾಗುತ್ತಿದೆ. ‌ಅದರ ಬದಲಿಗೆ ವಿ.ವಿ.ಗಳ ಸಹಯೋಗದಲ್ಲಿ ಹೈಬ್ರೀಡ್‌ ಸಹಯೋಗದಲ್ಲಿ ಬಿತ್ತನೆ ಬೀಜ ವಿತರಿಸಬಹುದು ಅಲ್ಲವೇ? ಚಂದ್ರಶೇಖರ್: ಎಲ್ಲ ಹೈಬ್ರೀಡ್‌ ತಳಿಗಳು ವಿವಿಧ ಪರಿಸರಗಳಿಗೆ ಹೊಂದಿಕೊಳ್ಳುವುದಿಲ್ಲ. ರೋಗ ಸಾಧ್ಯತೆ ಇರುತ್ತದೆ. ವಿ.ವಿ.ಯಿಂದ ಶಿಫಾರಸು ಆಗದ ಹೊರತು ರೈತರಿಗೆ ನೀಡಲಾಗದು.  ಸದ್ಯ ಕೆ.ಆರ್‌. ನಗರಕ್ಕೆ ಪಿಎಸಿ 837 ತಳಿ ಲಭ್ಯ ಇದ್ದು ಅದನ್ನೇ ವಿತರಿಸುತ್ತಿದ್ದೇವೆ. ಹೈಬ್ರೀಡ್‌ ತಳಿಗೆ ಒಮ್ಮೆ ರೋಗ ಬಾಧೆ ಉಂಟಾದರೆ ಸುತ್ತಲಿನ ಜಮೀನುಗಳಿಗೂ ಹರಡಿ ಆಹಾರ ಉತ್ಪಾದನೆಯೂ ಕ್ಷೀಣಿಸಲಿದೆ. ಎಲ್ಲರಿಗೂ ಸಮಸ್ಯೆಯಾಗುತ್ತದೆ. ಕೆ.ಆರ್. ನಗರ ಭಾಗದಲ್ಲಿ ವಿಎನ್‌ಆರ್‌ 3322 ತಳಿ ಸಹ ಖಾಸಗಿ ಅಂಗಡಿಗಳಲ್ಲಿ ಲಭ್ಯ ಇದೆ. ಎಫ್‌ಪಿಒಗಳು ಖರೀದಿಸಿ ರೈತರಿಗೆ ವಿತರಿಸಬಹುದು.

ಒಂದು ಲೋಡ್ ಪೈಪ್‌ ವಿತರಣೆಗೆ ತಡೆ!

* ಕಿರಗಸೂರು ಪ್ರಸಾದ್‌ ನಾಯಕ್‌ ತಿ.ನರಸೀಪುರ: ನಮ್ಮ ತಾಲ್ಲೂಕಿನಲ್ಲಿ ಕೆಲ ರೈತರಿಗೆ ಕಳಪೆ ಪೈಪ್‌ಗಳನ್ನು ಪೂರೈಸಲಾಗಿದೆ. ರಸಗೊಬ್ಬರ ಕಾಳಸಂತೆಯಲ್ಲಿ ಮಾರಲಾಗುತ್ತಿದೆ. ಅದನ್ನು ತಡೆಗಟ್ಟಿ. ಇಲ್ಲಿನ ಅಧಿಕಾರಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ರೈತರ ಸಭೆ ಕರೆಯುತ್ತಿಲ್ಲ. ಚಂದ್ರಶೇಖರ್‌: ರಾಂಚಿಯಿಂದ ಒಂದು ಲೋಡ್‌ (34 ಮಂದಿಗೆ ಕೊಡಬಹುದಾದಷ್ಟು) ಪೈಪ್‌ ಬಂದಿತ್ತು. ದೂರು ಕೇಳಿಬಂದಿದ್ದರಿಂದ ಈಗಾಗಲೇ ಅಂತಹ ಪೈಪ್‌ ವಿತರಣೆ ತಡೆಹಿಡಿಯಲಾಗಿದೆ. ಸಿ–ಪ್ಯಾಟ್‌ ಸಂಸ್ಥೆಗೆ ಗುಣಮಟ್ಟ ಪರಿಶೀಲನೆಗಾಗಿ ಮಾದರಿ ಕಳುಹಿಸಲಾಗಿದೆ. ಗೊಬ್ಬರದ ಅಕ್ರಮ ಮಾರಾಟದ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರು ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಸದ್ಯ ಯಾವುದೇ ರಸಗೊಬ್ಬರದ ಕೊರತೆ ಇಲ್ಲ. ರೈತರ ಸಭೆ ಕರೆಯುವಂತೆ ಅಲ್ಲಿನ ಅಧಿಕಾರಿಗೆ ಸೂಚಿಸಲಾಗುವುದು.

ಬೆಳೆ ವಿಮೆ:

ಶುಂಠಿ ಸೇರಿಸಿ * ರಾಜು ಕಲ್ಕುಂಡಿ ಪಿರಿಯಾಪಟ್ಟಣ: ನಮ್ಮ ಭಾಗದಲ್ಲಿ ಶುಂಠಿ ಹೆಚ್ಚು ಬೆಳೆಯುತ್ತಾರೆ. ಇದು ವಾಣಿಜ್ಯ ಬೆಳೆಯಾದ್ದರಿಂದ ಅದನ್ನು ವಿಮೆಗೆ ಸೇರಿಸಲು ಆಗದು ಎನ್ನುತ್ತಾರೆ. ರೈತರು ಬೆಳೆಯುವ ಎಲ್ಲ ಬೆಳೆಗಳನ್ನೂ ಏಕೆ ಸೇರಿಸಲು ಆಗುವುದಿಲ್ಲ? ರಾಗಿ ಜೊತೆಗೆ ಇತರೆ ಬೆಳೆಗಳನ್ನೂ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿ. ಶುಂಠಿ ವಾಣಿಜ್ಯ ಬೆಳೆಯಾದ್ದರಿಂದ ಬೆಳೆವಿಮೆ ವ್ಯಾಪ್ತಿಗೆ ಸೇರಿಸಲಾಗಿಲ್ಲ. ಅರಿಸಿನ ಆಲೂಗಡ್ಡೆ ಟೊಮೆಟೊ ಎಲ್ಲದಕ್ಕೂ ವಿಮೆ ಇದೆ. ಕಬ್ಬು ಬೆಳೆಯನ್ನೂ ವಿಮೆಗೆ ತರುವ ಪ್ರಸ್ತಾವ ಇದೆ. ಮುಂದಿನ ದಿನಗಳಲ್ಲಿ ಶುಂಠಿಯನ್ನೂ ಬೆಳೆಯನ್ನೂ ವಿಮೆ ವ್ಯಾಪ್ತಿಗೆ ತರಲಾಗುವುದು. ತೋಟಗಾರಿಕೆ ಇಲಾಖೆಯವರ ಗಮನಕ್ಕೂ ತರಲಾಗುವುದು. ಭತ್ತ ರಾಗಿ ಜೊತೆಗೆ ಮುಸುಕಿನಜೋಳವನ್ನೂ ಬೆಂಬಲ ಬೆಲೆ ಅಡಿ ಖರೀದಿ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಪಿಎಂಎಫ್‌ಎಂಇ ಯೋಜನೆಯಡಿ ಆಹಾರ ಉತ್ಪನ್ನಗಳ ಸಂಸ್ಕರಣೆ– ಮೌಲ್ಯವರ್ಧನಗೆ ಸಹಾಯಧನ ದೊರೆಯಲಿದೆ. ಯುವಜನರೇ ಸೇರಿ ಇಂತಹ ಘಟಕಗಳನ್ನು ಸ್ಥಾಪಿಸಬಹುದು. ಆಸಕ್ತರು ಕೃಷಿ ಇಲಾಖೆ ಕಚೇರಿಗೆ ಬಂದರೆ ಖಂಡಿತ ಅಗತ್ಯ ಮಾರ್ಗದರ್ಶನ ನೀಡುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT