ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

EVM: ವಿವಾದ ಸೃಷ್ಟಿಸಿದ ಎಲಾನ್‌ ಮಸ್ಕ್‌ ಹೇಳಿಕೆ

ರಾಜೀವ್‌ ಚಂದ್ರಶೇಖರ್ ಸಮರ್ಥನೆ * ಮತಪತ್ರಗಳ ಬಳಕೆ ಚರ್ಚೆ ಮತ್ತೆ ಮುನ್ನೆಲೆಗೆ
Published 16 ಜೂನ್ 2024, 15:30 IST
Last Updated 16 ಜೂನ್ 2024, 15:30 IST
ಅಕ್ಷರ ಗಾತ್ರ

ಮುಂಬೈ: ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಹ್ಯಾಕ್‌ ಮಾಡಬಹುದು. ಹೀಗಾಗಿ, ಜಗತ್ತು ಮತ್ತೆ ಮತಪತ್ರಗಳ ವ್ಯವಸ್ಥೆಗೆ ಮೊರೆ ಹೋಗಬೇಕು ಎಂದು ಟೆಸ್ಲಾ ಕಂಪನಿ ಮಾಲೀಕ ಇಲಾನ್‌ ಮಸ್ಕ್‌ ಹೇಳಿರುವುದು ಭಾನುವಾರ ವಿವಾದದ ಕಿಡಿ ಹೊತ್ತಿಸಿದೆ.

ಮಸ್ಕ್‌ ಹೇಳಿಕೆ ಟೀಕಿಸಿ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದರೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. 

ಮಸ್ಕ್‌ ಹೇಳಿದ್ದೇನು?: ಕೆರೀಬಿಯನ್ ದ್ವೀಪದಲ್ಲಿ ಇತ್ತೀಚೆಗೆ ನಡೆದಿದ್ದ ಚುನಾವಣೆ ವೇಳೆ ಇವಿಎಂ ಸಂಬಂಧಿತ ಅಕ್ರಮಗಳು ನಡೆದಿವೆ ಎಂದು ಅಮೆರಿಕದ ರಾಜಕಾರಣಿ ರಾಬರ್ಟ್‌ ಎಫ್‌.ಕೆನಡಿ ಜೂನಿಯರ್ ಹೇಳಿದ್ದರು.

ಬಿಜೆಪಿ ಪ್ರತಿಕ್ರಿಯೆ: ಇವಿಎಂಗಳ ಕುರಿತು ಅಮೆರಿಕ ರಾಜಕಾರಣಿಯ ಮಾತಿಗೆ ಮಸ್ಕ್‌ ಅವರು ಪ್ರತಿಕ್ರಿಯಿಸಿದ್ದರೂ ಮಸ್ಕ್‌ ಅವರ ಮಾತಿಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೇ, ವಾಯವ್ಯ ಮುಂಬೈ ಲೋಕಸಭಾ ಕ್ಷೇತ್ರದ ಮತ ಎಣಿಕೆ ವೇಳೆ ಹಲವು ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದ ಸಂದರ್ಭದಲ್ಲಿಯೇ, ಇವಿಎಂ ಸುರಕ್ಷತೆ–ಕ್ಷಮತೆ ಬಗ್ಗೆ ವಿವಾದ ಎದ್ದಿದೆ.

ಈ ಹಿಂದಿನ ಸರ್ಕಾರದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ ಖಾತೆ ರಾಜ್ಯ ಸಚಿವರಾಗಿದ್ದ ರಾಜೀವ್‌ ಚಂದ್ರಶೇಖರ್, ‘ಮಸ್ಕ್‌ ಅವರ ಅಭಿಪ್ರಾಯವು ಇವಿಎಂಗಳ ಕುರಿತು ಬಿಡುಬೀಸಾಗಿ ನೀಡಿರುವ ಸಾಮಾನ್ಯೀಕರಣಗೊಳಿಸಿದ ಹೇಳಿಕೆ ಎನಿಸುತ್ತದೆ. ಒಂದು ಅತ್ಯಂತ ಸುರಕ್ಷಿತವಾದ ಡಿಜಿಟಲ್‌ ಹಾರ್ಡ್‌ವೇರ್‌ ಅನ್ನು ಯಾರಿಂದಲೂ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದಂತಿದೆ, ಅದು ತಪ್ಪು ಅಭಿಪ್ರಾಯ’ ಎಂದಿದ್ದಾರೆ.

‘ಮಸ್ಕ್‌ ಅವರ ಅಭಿಪ್ರಾಯ ಅಮೆರಿಕ ಮತ್ತು ಇತರ ದೇಶಗಳಿಗೆ ಅನ್ವಯಿಸಬಹುದು. ಆ ದೇಶಗಳಲ್ಲಿ ಇಂಟರ್‌ನೆಟ್‌ ಸಂಪರ್ಕದ ಇವಿಎಂ ಅಭಿವೃದ್ಧಿಪಡಿಸುವುದಕ್ಕಾಗಿ ರೂಢಿಯಲ್ಲಿರುವ ಕಂಪ್ಯೂಟರ್‌ ವೇದಿಕೆಗಳನ್ನು ಬಳಸಲಾಗುತ್ತದೆ’ ಎಂದು ಹೇಳಿದ್ದಾರೆ.

‘ಭಾರತದಲ್ಲಿ ಬಳಸುವ ಇವಿಎಂಗಳನ್ನು ನಿರ್ದಿಷ್ಟ ಉದ್ದೇಶಕ್ಕೆ ಅಗತ್ಯವಿರುವಂತೆ ವಿನ್ಯಾಸಗೊಳಿಸಲಾಗಿದೆ. ಇವು ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ನೆಟ್‌ವರ್ಕ್ ಅಥವಾ ಮಾಧ್ಯಮದ ಸಂಪರ್ಕ ಇಲ್ಲದೆ, ಪ್ರತ್ಯೇಕವಾಗಿಯೇ ಇರುತ್ತವೆ. ಬ್ಲೂಟೂಥ್‌, ವೈಫೈ ಸಂಪರ್ಕವೂ ಸಾಧ್ಯವಾಗದಂತೆ ವಿನ್ಯಾಸಗೊಳಿಸಲಾಗಿದೆ’ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ರಾಜೀವ್‌ ಚಂದ್ರಶೇಖರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಸ್ಕ್‌, ‘ಯಾವುದೇ ಯಂತ್ರವನ್ನಾದರೂ ಹ್ಯಾಕ್‌ ಮಾಡಬಹುದು’ ಎಂದಿದ್ದಾರೆ.

ಈ ಮಾತಿಗೆ, ‘ತಾಂತ್ರಿಕವಾಗಿ ನಿಮ್ಮ ವಾದ ಸರಿ. ಕ್ವಾಂಟಮ್ ಕಂಪ್ಯೂಟ್‌ ತಂತ್ರಜ್ಞಾನ ಬಳಸಿ ಎಷ್ಟೇ ಜಟಿಲವಾದ ರಹಸ್ಯವನ್ನು ನಾನು ಭೇದಿಸಬಲ್ಲೆ. ವಿಮಾನವೊಂದರ ಗಾಜಿನ ಕಾಕ್‌ಪಿಟ್‌ನಲ್ಲಿರುವ ವಿಮಾನ ನಿಯಂತ್ರಿಸುವ ಸಾಧನಗಳನ್ನು ಸೇರಿದಂತೆ ಯಾವುದೇ ಡಿಜಿಟಲ್ ಹಾರ್ಡ್‌ವೇರ್/ಸಿಸ್ಟಮ್‌ ಅನ್ನು ನಾನು ಹ್ಯಾಕ್ ಮಾಡಬಲ್ಲೆ’ ಎಂದು ಚಂದ್ರಶೇಖರ್ ಹೇಳಿದ್ದಾರೆ. 

ಭಾರತವು ಅಭಿವೃದ್ಧಿಪಡಿಸಿರುವ ರೀತಿಯಲ್ಲಿ ಇವಿಎಂಗಳನ್ನು ತಯಾರಿಸಬಹುದು. ಈ ಸಂಬಂಧ ಇಲಾನ್ ಮಸ್ಕ್‌ ಅವರಿಗೆ ಈ ಕುರಿತು ತಿಳಿವಳಿಕೆ ನೀಡಲು ನಾವು ಸಿದ್ಧರಿದ್ದೇವೆ
ರಾಜೀವ್‌ ಚಂದ್ರಶೇಖರ್ ಕೇಂದ್ರದ ಮಾಜಿ ಸಚಿವ
ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ತಂತ್ರಜ್ಞಾನ ಇದೆ. ಒಂದು ವೇಳೆ ತಂತ್ರಜ್ಞಾನವೇ ಸಮಸ್ಯೆಯಾದಾಗ ಅದರ ಬಳಕೆಯನ್ನು ನಿಲ್ಲಿಸಬೇಕು
ಅಖಿಲೇಶ್‌ ಯಾದವ್‌ ಎಸ್‌ಪಿ ನಾಯಕ
ನಾವು ಇವಿಎಂಗಳನ್ನು ತೆಗೆದು ಹಾಕಬೇಕು. ಮನುಷ್ಯನಿಂದ ಅಥವಾ ಕೃತಕ ಬುದ್ಧಿಮತ್ತೆ ಮೂಲಕ ಇವುಗಳನ್ನು ಹ್ಯಾಕ್‌ ಮಾಡುವ ಅಪಾಯ ಇದ್ದೇ ಇದೆ
ಇಲಾನ್‌ ಮಸ್ಕ್‌ ಸ್ಪೇಸ್‌ಎಕ್ಸ್‌ನ ಸಂಸ್ಥಾಪಕ

ವಿಶ್ವಾಸಾರ್ಹತೆ ಪ್ರಶ್ನಿಸಿದ ರಾಹುಲ್‌ ಅಖಿಲೇಶ್

‘ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕುರಿತು ಗಂಭೀರವಾದ ಅತಂಕಗಳು ವ್ಯಕ್ತವಾಗುತ್ತಿವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಹೇಳಿದ್ದಾರೆ. ಇವಿಎಂ ಕುರಿತು ಇಲಾನ್‌ ಮಸ್ಕ್‌ ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ಈ ರೀತಿ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್‌ ಮಿತ್ರ ಪಕ್ಷವಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಕೂಡ ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಪ್ರಶ್ನಿಸಿದ್ದಾರೆ. ಭವಿಷ್ಯದಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿ ಮತಪತ್ರಗಳನ್ನೇ ಬಳಕೆ ಮಾಡಬೇಕು ಎಂದು ಅಖಿಲೇಶ್ ಆಗ್ರಹಿಸಿದ್ದಾರೆ. ರಾಹುಲ್‌ ಗಾಂಧಿ ಅವರು ಶಿವಸೇನಾ ಅಭ್ಯರ್ಥಿಯ ಸಂಬಂಧಿಯೊಬ್ಬರು ವಾಯವ್ಯ ಮುಂಬೈ ಕ್ಷೇತ್ರದಿಂದ 48 ಮತಗಳಿಂದ ಆಯ್ಕೆಯಾಗಿದ್ದು ಅವರ ಬಳಿ ಇವಿಎಂ ತೆರೆಯಬಲ್ಲ ಫೋನ್‌ ಇದೆ ಎಂಬ ಬಗ್ಗೆ ಮಾಧ್ಯಮವೊಂದರ ವರದಿಯನ್ನು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಇವಿಎಂಗಳನ್ನು ತೆಗೆದು ಹಾಕಬೇಕು ಎಂಬ ಇಲಾನ್‌ ಮಸ್ಕ್‌ ಅವರ ಮಾತುಗಳಿರುವ ಪೋಸ್ಟ್‌ ಅನ್ನು ಸಹ ರಾಹುಲ್‌ ಗಾಂಧಿ ಹಂಚಿಕೊಂಡಿದ್ದಾರೆ. ‘ಸಂಬಂಧಿಸಿದ ಸಂಸ್ಥೆಗಳಲ್ಲಿ ಉತ್ತರದಾಯಿತ್ವದ ಕೊರತೆ ಇದ್ದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಕಪಟ ಎನಿಸುತ್ತದೆ ಹಾಗೂ ವಂಚನೆಗೆ ಅವಕಾಶ ಮಾಡಿಕೊಡುತ್ತದೆ’ ಎಂದೂ ರಾಹುಲ್‌ ಗಾಂಧಿ ಹೇಳಿದ್ದಾರೆ.

‘ಇವಿಎಂ ತೆರೆಯಲು ಒಟಿಪಿ ಅಗತ್ಯವಿಲ್ಲ’

‘ಇವಿಎಂ ಅತ್ಯಂತ ಸುರಕ್ಷಿತವಾದ ವ್ಯವಸ್ಥೆ. ಅದಲ್ಲಿನ ದತ್ತಾಂಶವನ್ನು ಯಾವುದೇ ರೀತಿಯಿಂದ ಬದಲಿಸಲು ಆಗದಂತೆ ರೂಪಿಸಲಾಗಿದೆ. ಈ ಮತಯಂತ್ರವನ್ನು ತೆರೆಯುವುದಕ್ಕೆ ಒಟಿಪಿಯ ಅಗತ್ಯ ಇಲ್ಲ’ ಎಂದು ವಾಯವ್ಯ ಮುಂಬೈ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿದ್ದ ವಂದನಾ ಸೂರ್ಯವಂಶಿ ಭಾನುವಾರ ಹೇಳಿದ್ದಾರೆ. ಈ ಕ್ಷೇತ್ರದಿಂದ ಕೇವಲ 48 ಮತಗಳ ಅಂತರದಿಂದ ಗೆಲುವು ಸಾಧಿಸಿದ ಶಿವಸೇನಾ (ಶಿಂದೆ ಬಣ) ಅಭ್ಯರ್ಥಿ ರವೀಂದ್ರ ವಾಲ್ಕರ್‌ ಅವರ ಸಂಬಂಧಿಯೊಬ್ಬ ಮತ ಎಣಿಕೆ ನಡೆದ ಜೂನ್‌ 4ರಂದು ಇವಿಎಂ ಜೊತೆ ಮೊಬೈಲ್‌ ಫೋನ್‌ ಸಂಪರ್ಕ ಸಾಧಿಸಿದ್ದ ಎಂದು ‘ಮಿಡ್‌ ಡೇ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ‘ವೈರ್‌ಲೆಸ್‌ ತಂತ್ರಜ್ಞಾನದ ಮೂಲಕ ಸಂಪರ್ಕ ಸಾಧಿಸುವಂತಹ ವ್ಯವಸ್ಥೆಯನ್ನು ಇವಿಎಂ ಹೊಂದಿಲ್ಲ. ಪತ್ರಿಕೆಯು ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಐಪಿಸಿ ಸೆಕ್ಷನ್ 499 505 ಅಡಿ ಮಿಡ್‌ ಡೇ ಪತ್ರಿಕೆಗೆ ನೋಟಿಸ್‌ ಜಾರಿ ಮಾಡಿದ್ದೇವೆ’ ವಂದನಾ ಹೇಳಿದ್ದಾರೆ.

ನನ್ನ ಅಭ್ಯರ್ಥಿ ಗೆದ್ದಿದ್ದಕ್ಕೆ ಈ ಪ್ರಶ್ನೆಗಳೇ?: ಶಿಂದೆ

‘ನನ್ನ ಪಕ್ಷದ ಅಭ್ಯರ್ಥಿ ವಾಯವ್ಯ ಮುಂಬೈ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕೆ ಇವಿಎಂಗಳ ಪಾವಿತ್ರ್ಯ ಹಾಗೂ ವಿಶ್ವಾಸಾರ್ಹತೆ ಬಗ್ಗೆ ಇಷ್ಟೊಂದು ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂಬುದು ಅಚ್ಚರಿ ಮೂಡಿಸುತ್ತದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಭಾನುವಾರ ಹೇಳಿದ್ದಾರೆ. ‘ರಾಜ್ಯದ ಇತರ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಕುರಿತು ಯಾರೂ ಪ್ರಶ್ನೆ ಎತ್ತುತ್ತಿಲ್ಲ... ನನ್ನ ಅಭ್ಯರ್ಥಿ ಗೆದ್ದು ಇತರರು ಪರಾಭವಗೊಂಡಿದ್ದಕ್ಕಾಗಿ ಇಷ್ಟೆಲ್ಲಾ ಸಂಶಯ–ಪ್ರಶ್ನೆಗಳೇ’ ಎಂದಿರುವ ಅವರು ‘ಜನಾದೇಶ ನಮ್ಮ ಅಭ್ಯರ್ಥಿ ವಾಲ್ಕರ್‌ ಪರ ಇದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT