ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಗತಿಪರ ಚಿಂತಕ ಮಹೇಶ್‌ಚಂದ್ರ ಗುರು ಇನ್ನಿಲ್ಲ

Published : 17 ಆಗಸ್ಟ್ 2024, 16:25 IST
Last Updated : 17 ಆಗಸ್ಟ್ 2024, 16:25 IST
ಫಾಲೋ ಮಾಡಿ
Comments

ಮೈಸೂರು: ಪ್ರಗತಿಪರ ಚಿಂತಕ, ಇಲ್ಲಿನ ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಮಹೇಶ್‌ ಚಂದ್ರಗುರು (68) ವಿಜಯನಗರ 2ನೇ ಹಂತದ ಸ್ವಗೃಹದಲ್ಲಿ ಹೃದಯಾಘಾತದಿಂದ ಶನಿವಾರ ನಿಧನರಾದರು.

ಅವರಿಗೆ ಪ್ರಾಧ್ಯಾಪಕರೂ ಆಗಿರುವ ಪತ್ನಿ ಹೇಮಾವತಿ, ಸಹೋದರ ಮತ್ತು ಸಹೋದರಿ ಇದ್ದಾರೆ.

ಹಲವು ದಿನಗಳಿಂದ ವಯೋಸಹಜ ಅನಾರೋಗ್ಯ ಹಾಗೂ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅಂತ್ಯಕ್ರಿಯೆಯನ್ನು ಭಾನುವಾರ (ಆ.18) ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪರಿಚಯ...

ಅಂಬೇಡ್ಕರ್‌ ಅನುಯಾಯಿಯಾಗಿದ್ದ ಅವರು, ಹಲವು ಪ್ರಗತಿಪರ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಪ್ರಖರ ಹೇಳಿಕೆಗಳಿಂದ ವಿವಾದಕ್ಕೆ ಒಳಗಾಗಿದ್ದರು. ಭಾರತದಲ್ಲಿ ಮೊದಲ ದಲಿತ–ಬೌದ್ಧ ಮಾಧ್ಯಮ ಅಧ್ಯಯನ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಎಡಪಂಥೀಯ ಚಿಂತನೆಯನ್ನು ಪ್ರತಿಪಾದಿಸುತ್ತಾ ಸಾಮಾಜಿಕ ಅಸಮಾನತೆಯನ್ನು ಖಂಡಿಸುತ್ತಿದ್ದರು. ನಾಡಹಬ್ಬ ದಸರಾ ಆಚರಣೆ ವೇಳೆ, ಇತ್ತೀಚಿನ ವರ್ಷಗಳಲ್ಲಿ ಕೆಲವು ಸಂಘಟನೆಗಳು ಸೇರಿ ನಡೆಸುತ್ತಿರುವ ಮಹಿಷ ದಸರಾ ಆಚರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಪ್ರಖರ ಚಿಂತಕರಾಗಿಯೂ ಗುರುತಿಸಿಕೊಂಡಿದ್ದರು. ಶೋಷಿತರು ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಲೆಂದು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯವರಾದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ 1980ರಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಬಳಿಕ ಮಂಗಳೂರು ವಿವಿಯಿಂದ ಅಭಿವೃದ್ಧಿ ಸಂವಹನ ವಿಷಯದಲ್ಲಿ ಪಿ.ಎಚ್.ಡಿ. ಪದವಿ ಗಳಿಸಿದ್ದರು. ಮೈಸೂರಿನ ‘ಪಂಚಮ’ ಪತ್ರಿಕೆಯಲ್ಲಿ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು. ಹೈದರಾಬಾದ್‌ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಸಂಶೋಧನಾಧಿಕಾರಿ, ಚಂಡೀಗಢದ ಭಾರತೀಯ ಮಾಪನ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕ ಸಹಾಯಕ ನಿರ್ದೇಶಕ, ಬೆಂಗಳೂರು ವಿವಿ ಸಂವಹನ ವಿಭಾಗದಲ್ಲಿ ಉಪನ್ಯಾಸಕ, ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವಾಚಕ ಮತ್ತು ಮೈಸೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕ ಹಾಗೂ ಎನ್‌ಎಸ್‌ಎಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿಯೂ ಆಗಿದ್ದರು. ಅಪಾರ ಶಿಷ್ಯರನ್ನು ಗಳಿಸಿದ್ದರು. ಶಿಷ್ಯರ ವಲಯದಲ್ಲಿ ‘ಗುರು’ ಎಂದೇ ಖ್ಯಾತರಾಗಿದ್ದರು.

ದಲಿತ, ರೈತ, ಬಂಡಾಯ ಚಳವಳಿಗಳಲ್ಲೂ ಸಕ್ರಿಯವಾಗಿದ್ದರು. ಸಮೂಹ ಸಂವಹನ, ಪತ್ರಿಕೋದ್ಯಮ, ಮಹಿಳಾ ಸಾಹಿತ್ಯ, ಬೌದ್ಧ ಸಾಹಿತ್ಯ, ಅಂಬೇಡ್ಕರ್ ಸಾಹಿತ್ಯ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 23 ಕನ್ನಡ ಹಾಗೂ ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದರು. 120 ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. 200ಕ್ಕೂ ಹೆಚ್ಚು ಲೇಖನಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಮಾರ್ಗದರ್ಶನದಲ್ಲಿ 32 ಸಂಶೋಧನಾ ವಿದ್ಯಾರ್ಥಿಗಳು ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT