ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ

ಹೊಮ್ಮರಗಳ್ಳಿಯ ಮಳಿಗೆ: ಗ್ರಾಮಸ್ಥರಿಗೆ ಪ್ರಗತಿಪರ ಸಂಘಟನೆಗಳ ಬೆಂಬಲ
Last Updated 28 ಮಾರ್ಚ್ 2023, 8:50 IST
ಅಕ್ಷರ ಗಾತ್ರ

ಮೈಸೂರು: ಎಚ್‌.ಡಿ.ಕೋಟೆ ತಾಲ್ಲೂಕು ಹೊಮ್ಮರಗಳ್ಳಿಯಲ್ಲಿ 16 ವರ್ಷದಿಂದ ಅನಧಿಕೃತವಾಗಿ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ ನಡೆಯುತ್ತಿದ್ದು, ಕೂಡಲೇ ತೆರವುಗೊಳಿಸಿ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಪ್ರಗತಿಪರ ಸಮಾಜ ವೇದಿಕೆ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮ್ ಮಾತನಾಡಿ, ‘ಗ್ರಾಮಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವಹಿಸಿಲ್ಲ. ಮದ್ಯದಂಗಡಿಯ ನಿವೇಶನ ಕೆ.ಪುಟ್ಟಸ್ವಾಮಿ ಎಂಬುವರ ಹೆಸರಿನಲ್ಲಿದ್ದು, ಬೇರೆ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಪರವಾನಗಿ ಪಡೆದಿದ್ದಾರೆ’ ಎಂದರು.

‘2022ರ ಅ.29ರಂದು ಜಿ.ಪಂ ಸಿಇಒ ಅವರಿಗೆ ಅರ್ಜಿ ಸಲ್ಲಿಸಲಾಗಿತ್ತು. ಉಪಕಾರ್ಯದರ್ಶಿ ಪರಿಶೀಲಿಸಿ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಬಾರ್‌ ಅನಧಿಕೃತವೆಂದು ವರದಿ ನೀಡಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಕೂಡಲೇ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಜಿ.ಎಂ.ಅಂದಾನಿ, ದ್ಯಾವಪ್ಪ ನಾಯಕ, ನಾಗೇಶ್‌, ಯೋಗೇಶ್‌ ಉಪ್ಪಾರ್‌, ರವಿನಂದನ್‌, ಪ್ರಕಾಶ್‌, ಲೋಕೇಶ್‌ಕುಮಾರ್‌, ಸತ್ಯನಾರಾಯಣ ಇದ್ದರು.

ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಆರೋ‍ಪ

ನಕಲಿ ದಾಖಲಾತಿ ಸೃಷ್ಟಿಸಿ ಸಾಲ ಪಡೆದಿರುವವರ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿ ಬೀರಮ್ಮ ಹಾಗೂ ಕುಟುಂಬದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಮೀಪ ಪ್ರತಿಭಟನೆ ನಡೆಸಿದರು.

‘ಟಿ.ಕೆ.ಬಡಾವಣೆಯಲ್ಲಿ 110x40 ಅಡಿ ವಿಸ್ತೀರ್ಣದ ನಿವೇಶನವಿದ್ದು, ತಂದೆಗೆ ಸೇರಿದ ಆಸ್ತಿಯಾಗಿದೆ. ಕುರುಬರಹಳ್ಳಿಯ ತಮ್ಮಣ್ಣ ಸೇರಿದಂತೆ ಐವರು ನಕಲಿ ದಾಖಲೆ ಸೃಷ್ಟಿಸಿ ಸಹಕಾರ ಬ್ಯಾಂಕ್‌ನಿಂದ ₹ 40 ಲಕ್ಷ ಸಾಲ ಪಡೆದಿದ್ದಾರೆ. ವಂಚನೆಯಲ್ಲಿ ಬ್ಯಾಂಕ್‌ ಅಧಿಕಾರಿಗಳೂ ಇದ್ದಾರೆ’ ಎಂದು ಕುರುಬರಹಳ್ಳಿ ನಿವಾಸಿ ಬೀರಮ್ಮ ಆರೋಪಿಸಿದರು.

‘ಎರಡು ದೂರು ಸಲ್ಲಿಸಿದ್ದರೂ ಪೊಲೀಸರು ಯಾವುದೇ ಕ್ರಮವಹಿಸಿಲ್ಲ. ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣವೂ ಇಲ್ಲ. ಸುಳ್ಳು ಹೇಳಿಕೆ ಆಧರಿಸಿ ತೊಂದರೆ ನೀಡುತ್ತಿದ್ದಾರೆ‘ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT