ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಿಗ್ರಾಮ: ದಲ್ಲಾಳಿಗಳಿಂದ ಕಡಿಮೆ ದರಕ್ಕೆ ಭತ್ತ ಖರೀದಿ

ಭತ್ತ ಖರೀದಿ ಕೇಂದ್ರ ತೆರೆದಿಲ್ಲ, ಬೆಂಬಲ ಬೆಲೆಯೂ ಸಿಗುತ್ತಿಲ್ಲ; ನಷ್ಟ ಅನುಭವಿಸುತ್ತಿರುವ ರೈತರು
Last Updated 22 ಡಿಸೆಂಬರ್ 2021, 5:37 IST
ಅಕ್ಷರ ಗಾತ್ರ

ಸಾಲಿಗ್ರಾಮ: ಭತ್ತದ ನಾಡಿನ ರೈತರು ಅತಿವೃಷ್ಟಿ ನಡುವೆ ಕಷ್ಟಪಟ್ಟು ಬೆಳೆದ ಭತ್ತಕ್ಕೆ ಬೆಂಬಲ ಬೆಲೆ ಸಿಗುತ್ತಿಲ್ಲ. ಭತ್ತ ಖರೀದಿ ಕೇಂದ್ರವೂ ತೆರೆಯದ ಕಾರಣ, ರೈತರು ದಲ್ಲಾಳಿಗಳಿಗೆ ಕಣದಲ್ಲೇ ಕಡಿಮೆ ಬೆಲೆಗೆ ಭತ್ತವನ್ನು ಮಾರಾಟ ಮಾಡಿ ನಷ್ಟಕ್ಕೆ ಸಿಲುಕುತ್ತಿದ್ದಾರೆ.

ತಾಲ್ಲೂಕಿಗೆ ಸೇರ್ಪಡೆಗೊಂಡಿರುವ ಮೂರು ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ರೈತರು ಭತ್ತವನ್ನೇ ನಂಬಿದ್ದಾರೆ. ಪ್ರಸಕ್ತ ವರ್ಷ ವಾಡಿಕೆ ಮಳೆಗಿಂತಲೂ ಅಧಿಕ ಮಳೆ ಬಿದ್ದ ಹಿನ್ನೆಲೆಯಲ್ಲಿ ಗದ್ದೆಯಲ್ಲೇ ಭತ್ತ ಮೊಳಕೆ ಬಂದು ಹಲವು ರೈತರು ನಷ್ಟ ಅನುಭವಿಸಿದ್ದರು. ಕೆಲ ರೈತರು ಭತ್ತದ ಬೆಳೆಯನ್ನು ಸಂರಕ್ಷಿಸಿದ್ದು, ಮಾರಾಟ ಮಾಡಲು ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ. ಜಿಲ್ಲಾಡಳಿತ ಭತ್ತ ಖರೀದಿ ಕೇಂದ್ರವನ್ನು ತೆರೆದಿಲ್ಲ. ಇದನ್ನು ಮನಗಂಡ ದಲ್ಲಾಳಿಗಳು ರೈತರ ಜಮೀನಿಗೆ ಹೋಗಿ ಭತ್ತವನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ.

ತಾಲ್ಲೂಕಿನ ಬಹುತೇಕ ರೈತರು ಸಣ್ಣ ಹಿಡುವಳಿದಾರ ರಾಗಿದ್ದು, ಭತ್ತದ ಫಸಲನ್ನು ಸಂಗ್ರಹಿಸಿ ಮಾರಾಟ ಮಾಡುವ ಸ್ಥಿತಿಯಲ್ಲಿ ಇಲ್ಲ. ದಲ್ಲಾಳಿಗಳು ಕ್ವಿಂಟಾಲ್‌ಗೆ ₹1,500ಕ್ಕೆ ಖರೀದಿ ಮಾಡುತ್ತಿದ್ದಾರೆ. ಪ್ರತಿ ದಿನ 5 ಸಾವಿರ ಕ್ವಿಂಟಾಲ್‌ಗೂ ಹೆಚ್ಚು ಭತ್ತವನ್ನು ಖರೀದಿಸಿ ಸಾಗಣೆ ಮಾಡುತ್ತಿದ್ದಾರೆ.

‘ದಲ್ಲಾಳಿಗಳು ಸ್ಥಳದಲ್ಲೇ ಹಣ ನೀಡುತ್ತಿಲ್ಲ. ಭತ್ತವನ್ನು ಮಾರಾಟ ಮಾಡಿದ ನಂತರ ನಿಮ್ಮ ಹಣ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, 2 ತಿಂಗಳು ಕಳೆದರೂ ಹಣ ನೀಡದೆ ಸತಾಯಿಸುತ್ತಿದ್ದಾರೆ’ ಎಂದು ರೈತ ಅರುಣ್‌ ರಾಜ್ ದೂರಿದರು.

***

ಕೆಲವೇ ದಿನಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗುವುದು. ದಲ್ಲಾಳಿಗಳು ಕಡಿಮೆ ಬೆಲೆಗೆ ಭತ್ತ ಖರೀದಿಸುತ್ತಿರುವ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು.

–ಎಸ್.ಸಂತೋಷ್, ತಹಶೀಲ್ದಾರ್

***

ಕೂಡಲೇ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಸೂಚನೆ ನೀಡುತ್ತೇನೆ. ರೈತರು ದಲ್ಲಾಳಿಗಳಿಗೆ ಭತ್ತ ಮಾರಾಟ ಮಾಡಬಾರದು. ಖರೀದಿ ಕೇಂದ್ರಕ್ಕೆ ಮಾರಾಟ ಮಾಡಬೇಕು.

–ಸಾ.ರಾ.ಮಹೇಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT