ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಎಫ್‌ ಮುಚ್ಚಲು ಬಿಜೆಪಿ ಹುನ್ನಾರ: ಪುಷ್ಪಾ ಅಮರನಾಥ್‌ ಆರೋಪ

ರಾಜ್ಯವ್ಯಾಪಿ ‘ನಂದಿನಿ ಉಳಿಸಿ’ ಸೆಲ್ಫಿ ಅಭಿಯಾನಕ್ಕೆ ಕಾಂಗ್ರೆಸ್‌ ಮಹಿಳಾ ಘಟಕ ಕರೆ
Last Updated 10 ಏಪ್ರಿಲ್ 2023, 16:03 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿ ನೇತೃತ್ವದ ಸರ್ಕಾರವು ಕೆಎಂಎಫ್‌– ನಂದಿನಿಯನ್ನು ಮುಚ್ಚುವ ಹುನ್ನಾರ ನಡೆಸಿದ್ದು, ಇದರ ವಿರುದ್ಧ ಕೆಪಿಸಿಸಿ ಮಹಿಳಾ ಘಟಕವು ‘ನಂದಿನಿ ಉಳಿಸಿ’ ಸೆಲ್ಫಿ ಅಭಿಯಾನವನ್ನು ರಾಜ್ಯವ್ಯಾಪಿ ಆರಂಭಿಸಲಿದೆ’ ಎಂದು ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ತಿಳಿಸಿದರು.

‘ರಾಜ್ಯದ ಮಹಿಳೆಯರು ನಂದಿನಿ ಉತ್ಪನ್ನವನ್ನು ಮಾತ್ರ ಖರೀದಿಸಬೇಕು ಹಾಗೂ ಉತ್ಪನ್ನದೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಮೂಲಕ ನಮ್ಮ ಅಭಿಯಾನಕ್ಕೆ ಬೆಂಬಲ ಸೂಚಿಸಬೇಕು. ಜಿಲ್ಲಾ ಘಟಕದಲ್ಲಿ 2 ಸಾವಿರ ಸದಸ್ಯರಿದ್ದು, ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಂದಿನಿ ಕರ್ನಾಟಕದ ಹೆಮ್ಮೆ, ಕನ್ನಡಿಗರ ಅಸ್ಮಿತೆ. ನಂದಿನಿ ಉತ್ಪನ್ನಗಳಿಗೆ ಪುನೀತ್ ರಾಜ್‍ಕುಮಾರ್ ರಾಯಭಾರಿಯಾಗಿದ್ದರು. ಕೆಎಂಎಫ್ ನಮ್ಮ ಮಗುವಾಗಿದ್ದು, ಇಡೀ ರಾಜ್ಯದ ಜನತೆ ಅದನ್ನು ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಅಮುಲ್‌ ಆಗಮನವನ್ನು ಬೆಂಬಲಿಸುತ್ತಿರುವ ಬಿಜೆಪಿಯಿಂದ ಅದರ ಜೀವಕ್ಕೆ ಆಪತ್ತು ಎದುರಾಗಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಾಲಿನ ಪ್ರೋತ್ಸಾಹ ಧನ ಹೆಚ್ಚಿಸಿದ್ದರು. ಶಾಲಾ ಮಕ್ಕಳಿಗೆ ಹಾಲು ನೀಡುವ ಮೂಲಕ ಕೆಎಂಎಫ್‌ ಅಭಿವೃದ್ಧಿಗೆ ಕಾರಣರಾಗಿದ್ದರು. ಲಾಭದಾಯಕ ಉದ್ಯಮವನ್ನು ಮಾರುವ ಉದ್ದೇಶ ಹೊಂದಿರುವ ಬಿಜೆಪಿಯು ಅಮುಲ್ ಜತೆ ನಂದಿನಿಯನ್ನು ವಿಲೀನ ಮಾಡುವ ಸಂಚು ನಡೆಸುತ್ತಿದ್ದು, ಇವರನ್ನು ಜನರು ಧಿಕ್ಕರಿಸಬೇಕು. ನಂದಿನಿ ಉಳಿಸುವ ಕೊನೇ ಅವಕಾಶವಾಗಿ, ಕನ್ನಡಿಗರ ಭವಿಷ್ಯಕ್ಕಾಗಿ ಮೇ 10ನೇ ತಾರೀಖು ಕಾಂಗ್ರೆಸ್‍ಗೆ ಮತ ಹಾಕಿ’ ಎಂದು ಮನವಿ ಮಾಡಿದರು.

ಫೋಟೋಶೂಟ್‌ ಪ್ರಧಾನಿ: ‘ರಾಜ್ಯದಲ್ಲಿ ನೆರೆ ಸಮಸ್ಯೆ ಉಂಟಾದಾಗ, ಸುಳ್ವಾಡಿ ದುರಂತದಲ್ಲಿ ಜನರು ಮೃತಪಟ್ಟಾಗ, ಆಮ್ಲಜನಕ ಇಲ್ಲದೇ ಸಾವು ಸಂಭವಿಸಿದಾಗ ಬಾರದ ಪ‍್ರಧಾನಿ, ಚುನಾವಣೆ ಕಾರಣಕ್ಕೆ ಭೇಟಿ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ದೂರದೃಷ್ಟಿ ಫಲವಾಗಿ 1973ರ ಏ.1ರಂದು ಜಾರಿಯಾದ ಹುಲಿ ಯೋಜನೆಯ ಸುವರ್ಣ ಮಹೋತ್ಸವ ನೆಪದಲ್ಲಿ ಪ್ರಧಾನಿ ಮೋದಿ ಫೋಟೋಶೂಟ್ ನಡೆಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಆಯೋಗಕ್ಕೆ ಪತ್ರ: ಆಧುನಿಕ ಶೈಲಿಯ ಉಡುಪು ಧರಿಸುವ ಮಹಿಳೆಯರನ್ನು ಶೂರ್ಪನಖಿಯರು ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ ವಿರುದ್ಧ ಕೇಂದ್ರ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಈ ಕುರಿತು ಒತ್ತಾಯಿಸಿ ಮಹಿಳಾ ಘಟಕದಿಂದ ಪತ್ರ ಬರೆಯುವುದಾಗಿ ತಿಳಿಸಿದರು. ಇಂತಹ ಮಾತುಗಳು ಮಹಿಳಾ ಮೀಸಲಾತಿ ವಿರೋಧಿಸಿದ್ದ ಬಿಜೆಪಿಯ ಪ್ರಸ್ತುತ ನಿಲುವುಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ’ ಎಂದರು.

ಘಟಕದ ರಾಜ್ಯ ಉಪಾಧ್ಯಕ್ಷೆ ಪುಷ್ಪವಲ್ಲಿ, ಜಿಲ್ಲಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಪ್ರಮುಖರಾದ ಸುಶೀಲಾ ಕೇಶವಮೂರ್ತಿ, ರಾಧಾಮಣಿ, ಲತಾ ಮೋಹನ್, ಮಂಜುಳಾ, ಕಮಲಮ್ಮ ಇದ್ದರು.

‘ಸಿಂಹಿಣಿಯನ್ನು ಎದುರಿಸಿ’

‘ಕುರಿ ಚರ್ಬಿ ತಿಂದು ಸಿದ್ದರಾಮಯ್ಯ ಕೊಬ್ಬಿದ್ದಾರೆ’ ಎಂದು ಹೇಳಿಕೆ ನೀಡಿರುವ ಸಂಸದ ಪ್ರತಾಪ ಸಿಂಹ ಸಿದ್ದರಾಮಯ್ಯ ಅವರ ಉಗುರಿಗೂ ಸಮನಾದ ವ್ಯಕ್ತಿಯಲ್ಲ. ಅವರು ಹೇಳುವ ಗುಜರಾತ್‌ ಸಿಂಹವನ್ನು ಎದುರಿಸಲು ಸಿದ್ದರಾಮಯ್ಯ ಬೇಕಿಲ್ಲ, ಸಿಂಹಿಣಿಯರಾದ ನಾವೇ ಸಾಕು’ ಎಂದು ಡಾ.ಪುಷ್ಪಾ ಅಮರನಾಥ್ ಹೇಳಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ‘ಸಿದ್ದರಾಮಯ್ಯ ಎರಡನೇ ದೇವರಾಜ ಅರಸು. ಅವರನ್ನು ಟೀಕಿಸದಿದ್ದರೆ ಬಿಜೆಪಿಯ ಕೆಲವು ನಾಯಕರಿಗೆ ಅಸ್ತಿತ್ವವೇ ಇಲ್ಲ. ಈ ಚುನಾವಣೆಯಲ್ಲಿ ಸಿಂಹ, ಹುಲಿ, ನರಿಗಳು ಯಾರು ಎಂಬುದನ್ನು ರಾಜ್ಯದ ಜನ ತೀರ್ಮಾನ ಮಾಡುತ್ತಾರೆ’ ಎಂದರು.

‘ಮಹಿಳಾ ಮೀಸಲಾತಿ ನೀಡಿ’

‘ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಶೇ 50ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಬೇಕು. ಇಲ್ಲದಿದ್ದರೆ ಯಾವ ರಾಜಕೀಯ ಪಕ್ಷಗಳೂ ಮಹಿಳೆಯರಿಗೆ ಟಿಕೆಟ್ ಕೊಡುವುದಿಲ್ಲ. 2014, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಮಹಿಳಾ ಮೀಸಲಾತಿ ಜಾರಿಯ ಭರವಸೆ ನೀಡಿದ್ದನ್ನೂ ಮರೆತಿದೆ. ಪ್ರಧಾನಿ ಅವರು ಈಗಾಲಾದರೂ ನೆನಪಿಸಿಕೊಂದು ನಿರ್ಧಾರ ಕೈಗೊಳ್ಳಬೇಕು’ ಎಂದು ಪುಷ್ಪಾ ಅಮರನಾಥ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT