ಮೈಸೂರು: ನಗರದಲ್ಲಿ ಗುರುರಾಘವೇಂದ್ರದ ಉತ್ತರಾರಾಧನೆ ಭಕ್ತಿ–ಭಾವ ಮತ್ತು ಸಂಭ್ರಮದಿಂದ ಗುರುವಾರ ನೆರವೇರಿತು.
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸುಬ್ಬರಾಯನಕೆರೆ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ವಿವಿಧ ಪೂಜಾ ಕಾರ್ಯಕ್ರಮ ನಡೆಯಿತು. ರಾಯರ ಕೃತಿಗಳ ಬಗ್ಗೆ ಪ್ರವಚನ, ವ್ಯಾಖ್ಯಾನ, ರಾಯರ ಬಗ್ಗೆ ರಚಿಸಿದ ಅಷ್ಟೋತ್ತರ ಸ್ತುತಿಗಳ ಪಾರಾಯಣ ನೆರವೇರಿತು. ಸಂಜೆ ಆಕಾಶ್ ಮತ್ತು ತಂಡದಿಂದ ದಾಸವಾಣಿ ಕಾರ್ಯಕ್ರಮ ಜರುಗಿತು.
ಕೃಷ್ಣಮೂರ್ತಿಪುರಂನ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆ ವೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ನೆರವೇರಿತು. ಅಷ್ಟೋತ್ತರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಜರುಗಿದವು. ಪ್ರಧಾನ ಅರ್ಚಕ ಶ್ರೀನಾಥ ಆಚಾರ್ಯ ಮತ್ತು ಶ್ರೀನಿವಾಸ ಆಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಲಂಕೃತ ರಥದಲ್ಲಿ ಪ್ರಹ್ಲಾದ ರಾಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ, ಕೋಲಾಟ, ಭಜನೆ, ವೇದಘೋಷ ಹಾಗೂ ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಅಪಾರ ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಜಯಲಕ್ಷ್ಮಿಪುರಂನ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಉತ್ತರಾರಾಧನೆ ಭಕ್ತಿ ಭಾವದಿಂದ ನೆರವೇರಿತು. ಪ್ರಧಾನ ಅರ್ಚಕ ಆದ್ಯ ಗೋವಿಂದಾಚಾರ್ಯ ಮತ್ತು ಪ್ರದೀಪ ಆಚಾರ್ಯ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಸಂಜೆ ಶಿವಕುಮಾರ ಸ್ವಾಮಿ ಮತ್ತು ತಂಡದಿಂದ ವಿಶೇಷ ತಾಳವಾದ್ಯ ಕಛೇರಿ ಭಕ್ತರನ್ನು ರಂಜಿಸಿತು.
ಅಗ್ರಹಾರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೃಂದಾವನಕ್ಕೆ ವಿಶೇಷ ಪೂಜೆ ನೆರವೇರಿತು. ಕ್ಷೀರಾಭಿಷೇಕ ನಡೆಯಿತು. ಪ್ರಧಾನ ಅರ್ಚಕ ಮತ್ತು ಗಾಯಕ ಪಂಡಿತ ವ್ಯಾಸತೀರ್ಥ ಆಚಾರ್ಯರಿಂದ ಆರಾಧನಾ ಮಹೋತ್ಸವ ಮತ್ತು
ಸಂಗೀತ ಸೇವೆ ನಡೆಯಿತು.
ರಾಮಸ್ವಾಮಿ ವೃತ್ತದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಉಡುಪಿ ಭಂಡಾರಿ ಕೇರಿ ಮಠದ ವೆಂಕಟಾಚಲಧಾಮದಲ್ಲಿ ಬೃಂದಾವನಕ್ಕೆ ಎಳನೀರು ಹಾಗೂ ಪಂಚಾಮೃತ ಅಭಿಷೇಕ ನೆರವೇರಿತು. ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ವಿಶೇಷ ಪುಷ್ಪಾಲಂಕಾರ ಮಾಡಿದ್ದು ಗಮನ ಸೆಳೆಯಿತು.
ಸಂಜೆ ವಿಶೇಷ ಉಪನ್ಯಾಸ ನೀಡಿದ ಕೃಷ್ಣಕುಮಾರ ಆಚಾರ್ಯ, ‘ನಾವು ಆಧ್ಯಾತ್ಮದ ಕಡೆಗೆ, ದೇವರ ಕಡೆಗೆ ಸಾಗಬೇಕು ಎಂದರೆ ಅದಕ್ಕೆ ಪ್ರಧಾನವಾಗಿ ದಾರಿ ತೋರುವವರೇ ರಾಘವೇಂದ್ರ ಗುರುಗಳು’ ಎಂದರು.
‘ನಮಗೆ ಸಂಸಾರದ ಅನೇಕ ತೊಂದರೆಗಳು, ಜಂಜಾಟ, ಕಲಹಗಳು, ಅನಾರೋಗ್ಯ ಸಮಸ್ಯೆ ಸಹಜ. ಈ ಎಲ್ಲವನ್ನೂ ಸಮಗ್ರವಾಗಿ ಪರಿಹರಿಸಿ ಬದುಕನ್ನು ವಿಕಸನಗೊಳಿಸುವ ಶಕ್ತಿ ಇರುವ ಏಕೈಕ ಗುರು ಎಂದರೆ ಅವರು ರಾಘವೇಂದ್ರ ಸ್ವಾಮಿ’ ಎಂದು ಹೇಳಿದರು.
‘ರಾಘವೇಂದ್ರರು ಲೌಕಿಕರು, ಪಾಮರರು, ಪಂಡಿತರು, ಧನಿಕರು, ವಿದ್ಯಾವಂತರು ಹಾಗೂ ಏನೂ ತಿಳಿಯದ ಸಾಮಾನ್ಯರನ್ನೂ ಅನುಗ್ರಹಿಸಿದ್ದಾರೆ. ಅವರ ಅಪೇಕ್ಷೆಗಳನ್ನು ಈಡೇರಿಸಿದ್ದಾರೆ. ಭೌತಿಕ ಮತ್ತು ಪಾರಮಾರ್ಥಿಕ ಸಮಸ್ಯೆಗಳಿಗೆ ರಾಯರ ಗ್ರಂಥಗಳು ಸಮರ್ಥವಾದ ಉತ್ತರ ನೀಡಿವೆ. ರಾಯರು ಎಂದೂ ಅಯೋಗ್ಯವಾದದನ್ನು ತಿಳಿಸಿಲ್ಲ. ವಿಚಾರ ಮಾಡದೇ ಯಾವುದೇ ಸಂಗತಿಯನ್ನು ಒಪ್ಪಿಲ್ಲ. ಒಣ ಚರ್ಚೆಗಳನ್ನು ಮಾಡಿಯೇ ಇಲ್ಲ. ಒಮ್ಮೆ ಹೇಳಿದ್ದನ್ನು ಮತ್ತೆ ಅವರ ಬದುಕಿನಲ್ಲಿ ಎಂದೂ ಉಪದೇಶ ಮಾಡಿಲ್ಲ’ ಎಂದು ತಿಳಿಸಿದರು.
ನಂತರ ಮಠದಲ್ಲಿ ರಾಯರ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ ಮತ್ತು ರಂಗ ಪೂಜೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.