ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಹದ ಮಳೆಗೆ ಇಳೆಯೆಲ್ಲ ಹಸಿರು

ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ 115ರಷ್ಟು ಅಧಿಕ ವರ್ಷಧಾರೆ
Published 31 ಮೇ 2024, 4:45 IST
Last Updated 31 ಮೇ 2024, 4:45 IST
ಅಕ್ಷರ ಗಾತ್ರ

ಮೈಸೂರು: ಮೇ ತಿಂಗಳ ವರ್ಷಧಾರೆಯು ಹರ್ಷ ಹೆಚ್ಚಿಸಿದ್ದು, ಈ ತಿಂಗಳಲ್ಲಿ ವಾಡಿಕೆಗಿಂತ ಶೇ 115ರಷ್ಟು ಅಧಿಕ ಮಳೆಯಾಗಿದೆ. ಇದರಿಂದಾಗಿ ನೆಲ ಹಸಿರಾಗಿದ್ದು, ವಾತಾವರಣ ತಂಪಾಗಿದೆ.

ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆಯ ವೈಫಲ್ಯದಿಂದಾಗಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿತ್ತು. ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಜಿಲ್ಲೆ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಿಸಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿಗೆ ತತ್ವಾರ ಉಂಟಾಗಿತ್ತು. ಆದರೆ ಮೇ ತಿಂಗಳ ಮುಂಗಾರು ಪೂರ್ವ ಮಳೆ ಈ ಆತಂಕ ದೂರ ಮಾಡಿದೆ.

ಈ ತಿಂಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 112 ಮಿಲಿಮೀಟರ್‌ನಷ್ಟು ವಾಡಿಕೆ ಮಳೆ ಇದ್ದು, ಅದಕ್ಕೆ ಪ್ರತಿಯಾಗಿ 241 ಮಿಲಿಮೀಟರ್‌ನಷ್ಟು ಮಳೆಯಾಗಿದೆ. ಹೀಗಾಗಿ ಸದ್ಯ ಕೃಷಿ ಜಮೀನುಗಳು ಹಸಿರು ಹೊದ್ದು ನಿಂತಿವೆ. ಬಹುತೇಕ ಕಡೆಗಳಲ್ಲಿ ಕೃಷಿ ಚಟುವಟಿಕೆಗೆ ಚಾಲನೆ ದೊರೆತಿದೆ. ಕೆರೆ–ಕಟ್ಟೆಗಳಿಗೂ ನೀರು ತುಂಬುತ್ತಿದ್ದು, ನದಿ–ಜಲಾಶಯಗಳಿಗೆ ಮುಂಗಾರಿಗೂ ಮುನ್ನವೇ ಜೀವಕಳೆ ಬಂದಿದೆ.

ಎಲ್ಲೆಲ್ಲಿ ಹೆಚ್ಚು?:  ಪಿರಿಯಾಪಟ್ಟಣ ತಾಲ್ಲೂಕು ಮೇನಲ್ಲಿ 300 ಮಿಲಿಮೀಟರ್‌ನಷ್ಟು ಮಳೆ ಪಡೆದಿದ್ದು, ಶೇ 184ರಷ್ಟು ಅಧಿಕ ವರ್ಷಧಾರೆಯಾಗಿದೆ. ಇದರಿಂದಾಗಿ ತಾಲ್ಲೂಕಿನ ವಿವಿಧೆಡೆ ಕೆಲವು ದಿನ ಕಾಲ ಪ್ರವಾಹ ಪರಿಸ್ಥಿತಿ ಇದ್ದು, ನೂರಾರು ಹೆಕ್ಟೇರ್‌ ಬೆಳೆ ನಷ್ಟವೂ ಆಗಿತ್ತು.

ಹುಣಸೂರು, ನಂಜನಗೂಡು, ತಿ. ನರಸೀಪುರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳು ಈ ತಿಂಗಳಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆ ದಾಖಲಿಸಿವೆ. ಕೆ.ಆರ್. ತಾಲ್ಲೂಕಿನಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಉಳಿದ ತಾಲ್ಲೂಕುಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ ಮಳೆಯಾಗಿದೆ.

ಉತ್ತಮ ಮುಂಗಾರಿನ ನಿರೀಕ್ಷೆ
ಗುರುವಾರ ಮಾನ್ಸೂನ್‌ ಮಾರುತಗಳು ಕೇರಳ ಪ್ರವೇಶಿಸಿದ್ದು ಒಂದೆರಡು ದಿನದಲ್ಲಿ ಕರ್ನಾಟಕಕ್ಕೆ ಕಾಲಿಡಲಿವೆ. ಈ ಬಾರಿ ಅವಧಿಗೂ ಮುನ್ನವೇ ಮುಂಗಾರು ಆರಂಭ ಆಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈ ಮುಂಗಾರಿನಲ್ಲಿ ಮೈಸೂರು ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದೆ ಎನ್ನುತ್ತಾರೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಸಹ ಸಂಶೋಧಕ ಜಿ.ವಿ. ಸುಮಂತ್‌ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT