ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚರಿತ್ರೆಯ ಮರು ರಚನೆ ಅಗತ್ಯ: ಕವಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ

Published 31 ಮಾರ್ಚ್ 2024, 8:19 IST
Last Updated 31 ಮಾರ್ಚ್ 2024, 8:19 IST
ಅಕ್ಷರ ಗಾತ್ರ

ಮೈಸೂರು: ‘ಅನೇಕ ಹೋರಾಟಗಾರರ ಬಗ್ಗೆ ವಾಸ್ತವಾಂಶವನ್ನು ತಿಳಿಸುವ ನಿಟ್ಟಿನಲ್ಲಿ ಚರಿತ್ರೆಯನ್ನು ಮರು ರಚಿಸಬೇಕಾದ ಅಗತ್ಯವಿದೆ’ ಎಂದು ಕವಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿ‍ಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಇಲ್ಲಿನ ವಿಜಯನಗರ 1ನೇ ಹಂತದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳಗಾವಿಯ ಸಂಶೋಧಕ ಸಂತೋಷ ಹಾನಗಲ್ಲ ವಿರಚಿತ ‘ವೀರಸೌದಾಮಿನಿ ಕಿತ್ತೂರು ರಾಣಿ ಚನ್ನಮ್ಮ’ ಚಿತ್ರಸಂಪುಟವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಯಾವ್ಯಾವುದೋ ಉದ್ದೇಶದ ಹುಸಿ ಚರಿತ್ರೆಯನ್ನು ನಂಬಿದರೆ ನಾವು ವಾಸ್ತವಾಂಶ ತಿಳಿದುಕೊಳ್ಳಲಾಗದ ಅಜ್ಞಾನಕ್ಕೆ ಹೋಗುತ್ತೇವೆ. ಅಂತಹ ಚರಿತ್ರೆಯನ್ನು ತಿಳಿಸುವ ಮೂಲಕ ಮಕ್ಕಳಿಗೆ ಹಾಲುಣಿಸುವುದಕ್ಕಿಂತ‌ ವಿಷ ಉಣಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಅದು ಆಗಬಾರದು. ಚರಿತ್ರೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕು’ ಎಂದರು.

‘ಕಳೆದು ಹೋದ ಚರಿತ್ರೆಯ ಕಾಲವನ್ನು ಕಟ್ಟಿಕೊಡುವಲ್ಲಿ ಈ ಚಿತ್ರಸಂಪುಟ ಯಶಸ್ವಿಯಾಗಿದೆ. ರಾಣಿ ಚನ್ನಮ್ಮ ಮೊದಲಾದವರ ಹೋರಾಟ ಅನನ್ಯವಾದುದು. ಜನರಲ್ಲಿ ದೇಶಪ್ರೇಮದ ಕಿಡಿ ಹೊತ್ತಿಸುವುದು ಹಾಗೂ ಬ್ರಿಟಿಷರ ವಿರುದ್ಧ ತೊಡೆ ತಟ್ಟುವಂತೆ ಪ್ರೇರಣೆ ನೀಡುವುದು ಅವರ ಹೋರಾಟದ ಆಶಯವಾಗಿತ್ತು.‌ ಇಂತಹ ಹೋರಾಟವನ್ನು ತಿಳಿಸುವ ನಿಟ್ಟಿನಲ್ಲಿ ಅಕ್ಷರ ರೂಪದಲ್ಲಿರುವ ಚರಿತ್ರೆಗಳೇ ಜಾಸ್ತಿ ಬಂದಿವೆ. ಆದರೆ, ವೀರಸೌದಾಮಿನಿ ಕೃತಿಯಲ್ಲಿ ಚರಿತ್ರೆಯೊಂದಿಗೆ, ಪರಿಚಯಾತ್ಮಕ ಲೇಖನಗಳಿವೆ. ಆಕರ್ಷಕ ಚಿತ್ರಗಳಲ್ಲೂ ಕಟ್ಟಿಕೊಡಲಾಗಿದೆ. ಡ್ರೋನ್‌ ಕ್ಯಾಮೆರಾದಿಂದ ಚಿತ್ರಗಳನ್ನು ತೆಗೆದು ಬಳಸಿರುವುದು ಸೊಗಸಾಗಿದೆ’ ಎಂದು ನುಡಿದರು.

ಹೋರಾಟ ಅನನ್ಯವಾದುದು:

‘ಅಧಿಕಾರಶಾಹಿಯು ಲೇಖಕರಿಗೆ, ಸಂಶೋಧಕರಿಗೆ ತೊಂದರೆ ಕೊಡುವ ಮನೋಭಾವ ಬಿಡಬೇಕು. ಅದು ಸಾಹಿತ್ಯದ ಬೆಳವಣಿಗೆ ಸಹಕಾರಿ ಆಗುತ್ತದೆ’ ಎಂದರು.

‘ಟಿಪ್ಪು ಸುಲ್ತಾನ್‌, ಸುರಪುರದ ವೆಂಕಟಪ್ಪ ನಾಯಕ ಹಾಗೂ ರಾಣಿ ಚನ್ನಮ್ಮ ಮೊದಲಾದವರ ಹೋರಾಟ ಅನನ್ಯವಾದುದು. ಚರಿತ್ರೆಕಾರರು, ಟಿಪ್ಪು ಸುಲ್ತಾನ್‌ ಎನ್ನುತ್ತಿದ್ದಂತೆಯೇ ಧಾರ್ಮಿಕ ಕಣ್ಣುಪಟ್ಟಿ ಕಟ್ಟಿಕೊಂಡು ನೋಡಿ ಅನ್ಯಾಯ ಮಾಡಿದ್ದಾರೆ. ಆದರೆ, ನಮ್ಮ ಜನಪದರು ಟಿಪ್ಪು ಬಗ್ಗೆ ಸತ್ಯನಿಷ್ಠವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಕಟ್ಟಿರುವ ಲಾವಣಿಗಳು ಟಿಪ್ಪು ಎಂತಹ ಹೋರಾಟಗಾರ–ಪರಾಕ್ರಮಿ, ದೇಶಪ್ರೇಮಿ ಎಂಬುದನ್ನು ತಿಳಿಸಿವೆ. ಸಮೂಹ ಪ್ರಜ್ಞೆಯು ವಸ್ತು ನಿಷ್ಠ ಹಾಗೂ ಸತ್ಯನಿಷ್ಠವಾಗಿರುತ್ತದೆ’ ಎಂದು ತಿಳಿಸಿದರು.

‘ಜನಪರವಾಗಿ ಇರುವವರನ್ನು ಜನರು ಎಂದಿಗೂ ಮರೆಯುವುದಿಲ್ಲ’ ಎಂದರು.

ಸಾನ್ನಿಧ್ಯ ವಹಿಸಿದ್ದ ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ರಾಜಗುರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು. ಸಾಹಿತಿ ಸಿ.ಪಿ. ಕೃಷ್ಣಕುಮಾರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿದರು. ಸಾಹಿತಿ ಎಂ.ಎಸ್. ಶಶಿಕಲಾಗೌಡ ಕೃತಿ ಪರಿಚಯಿಸಿದರು.

ಚಿತ್ರಸಂಪುಟದ ಲೇಖಕ ಸಂತೋಷ ಹಾನಗಲ್ಲ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಮ.ನ. ಲತಾ ಮೋಹನ್‌, ಗೌರವ ಕೋಶಾಧ್ಯಕ್ಷ ಜಿ. ಪ್ರಕಾಶ್, ಜಂಟಿ ಕಾರ್ಯದರ್ಶಿ ಕೆ.ಕೆಂ‍ಪಣ್ಣ, ಸಂಚಾಲಕ ಮ.ನ. ಲೋಕೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT