ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ: ಬೈಲಕುಪ್ಪೆ ಟಿಬೆಟನ್ ಶಿಬಿರ, ಅನನ್ಯ ಸಂಸ್ಕೃತಿಯ ಪ್ರತಿಬಿಂಬ

Published 5 ಮೇ 2024, 7:10 IST
Last Updated 5 ಮೇ 2024, 7:10 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನ ಬೈಲಕುಪ್ಪೆಯಲ್ಲಿ ನೆಲೆಸಿರುವ ಟಿಬೆಟನ್ ನಿರಾಶ್ರಿತರು ತಮ್ಮ ಕಲೆ, ಸಂಸ್ಕೃತಿ ಆಚಾರ ವಿಚಾರ, ಉಡುಗೆ ತೊಡುಗೆ ಎಲ್ಲವನ್ನು ಕಾಪಾಡಿಕೊಳ್ಳುತ್ತಾ, ಸಂಪ್ರದಾಯವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವ ನಿರಾಶ್ರಿತರ ಶಿಬಿರದ ಒಳಹೊಕ್ಕರೆ ಪುಟ್ಟ ಟಿಬೆಟ್ ದೇಶದ ನಗರವೊಂದಕ್ಕೆ ಹೋದಂತೆ ಭಾಸವಾಗುತ್ತದೆ. ಟಿಬೆಟಿಯನ್ ಕಲೆ, ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಿಸಿರುವ ಗೋಲ್ಡನ್ ಟೆಂಪಲ್ ಅಪಾರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 

ಟಿಬೆಟನ್ ಕಲೆ ಸಂಸ್ಕೃತಿಯನ್ನು ಈ ಕಟ್ಟಡದ ವಾಸ್ತು ವಿನ್ಯಾಸದಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಗೋಲ್ಡನ್ ಟೆಂಪಲ್ ಒಳಭಾಗದಲ್ಲಿರುವ ಬುದ್ಧನ ಪ್ರತಿಮೆ ಚಿನ್ನಲೇಪಿತವಾಗಿರುವುದು ವಿಶೇಷ. ಇಲ್ಲಿ ನಡೆಸುವ ಲೋಸರ್ ಹಬ್ಬದಲ್ಲಿ ಅವರ ಕಲೆ ಸಂಸ್ಕೃತಿಯ ಅನಾವರಣದ ಜೊತೆಗೆ ಬುದ್ಧನ ಚಿತ್ರವುಳ್ಳ ಬೃಹತ್ ಪರದೆಯ ಪ್ರದರ್ಶನ ವೀಕ್ಷಿಸಲು ‌ಸುತ್ತಮುತ್ತಲ ಗ್ರಾಮಗಳ ಜನರಷ್ಟೇ ಅಲ್ಲದೆ ದೂರದ ಊರುಗಳ ಪ್ರವಾಸಿಗರೂ ಬರುತ್ತಾರೆ.

ಹಬ್ಬ, ಮದುವೆ, ಬೌದ್ಧ ಧರ್ಮಗುರು ದಲೈಲಾಮ ಅವರ ಹುಟ್ಟುಹಬ್ಬದ ದಿನ ಸೇರಿದಂತೆ ವಿಶೇಷ ದಿನಗಳಲ್ಲಿ ಧರಿಸುವ ವಿಶೇಷ ಉಡುಗೆಗಳನ್ನು ಸ್ಥಳೀಯ ವಸ್ತ್ರ ವಿನ್ಯಾಸಕರು ಮತ್ತು ಸ್ಥಳೀಯ ಕೈಮಗ್ಗಗಳಲ್ಲೆ ತಯಾರಿಸಲಾಗುತ್ತದೆ.

ಪ್ರತ್ಯೇಕ ಆಸ್ಪತ್ರೆ: ಟಿಬೆಟನ್ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡುವ ಪ್ರತ್ಯೇಕ ಆಸ್ಪತ್ರೆಯೂ ಇಲ್ಲಿದೆ. ಸ್ಥಳೀಯ ಸಾರ್ವಜನಿಕರು ಸಹ ಅತಿ ಕಡಿಮೆ ದರದಲ್ಲಿ ಟಿಬೆಟನ್ ವೈದ್ಯಕೀಯ ಪದ್ಧತಿಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.

ಸಮಾಜ ಸೇವೆಯೆಲ್ಲೂ ಮುಂದು: ಟಿಬೆಟನ್ ನಿರಾಶ್ರಿತರು ಟ್ರಸ್ಟ್ ರಚಿಸಿಕೊಂಡು ಬುದ್ಧಿಮಾಂದ್ಯ ಟಿಬೆಟನ್ ಮಕ್ಕಳಿಗೆ ಆಶ್ರಯ ತಾಣ ಸ್ಥಾಪಿಸಿದ್ದಾರೆ. ಮಹಿಳೆಯರು ಸ್ಥಾಪಿಸಿರುವ ಬೀದಿ ನಾಯಿಗಳ ಆರೈಕೆ ಕೇಂದ್ರವೂ ಇಲ್ಲಿದೆ.

ಟಿಬೆಟನ್ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಯುವ ಗಾಯಕರು ವಿಶ್ವದ ವಿವಿಧೆಡೆ ಟಿಬೆಟನ್ ನಿರಾಶ್ರಿತರ ಶಿಬಿರಗಳಿಗೆ ತೆರಳಿ ಪ್ರದರ್ಶನ ನೀಡುತ್ತಾ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿದ್ದಾರೆ.

ಪರಿಸರ ಪ್ರೇಮಿ ಟಿಬೆಟನ್: ನಿರಾಶ್ರಿತ ಶಿಬಿರದಲ್ಲಿರುವ ಕಗ್ಯ್ ನಳಂದ ವಿಶ್ವವಿದ್ಯಾನಿಲಯದ ಆವರಣದಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸತ್ಯಂ ಶಿವಂ ಸುಂದರಂ ಎಂಬ ಪರಿಕಲ್ಪನೆಯಲ್ಲಿ ಔಷಧೀಯ ಸಸ್ಯಗಳು ಸೇರಿದಂತೆ ಪುಟ್ಟ ವನವನ್ನು ನಿರ್ಮಿಸಲಾಗಿದೆ. ಪರಿಸರದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ಕರ್ಮಪಾ ಅವರನ್ನು ಸ್ಥಳೀಯ ಸಂಘ ಸಂಸ್ಥೆಗಳು ಗೌರವಿಸಿವೆ.

ಮಾಹಿತಿ ಕೇಂದ್ರಕ್ಕೆ ಒತ್ತಾಯ: ‘ದೇಶ ವಿದೇಶದಲ್ಲಿ ಪ್ರಖ್ಯಾತವಾದ ಗೋಲ್ಡನ್ ಟೆಂಪಲ್ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಸ್ಥಳೀಯ ಕಲೆ ಸಂಸ್ಕೃತಿ ಪರಿಚಯಿಸುವ ಮಾಹಿತಿ ಕೇಂದ್ರವನ್ನು ರಾಜ್ಯ ಸರ್ಕಾರ ತೆರೆದರೆ ಹೆಚ್ಚಿನ ಅನುಕೂಲವಾಗಲಿದೆ’ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಹಕ ಪ್ರಶಾಂತ್ ಬಾಬು.

ಚಿನ್ನ ಲೇಪಿತ ಬುದ್ಧನ ಪ್ರತಿಮೆ
ಚಿನ್ನ ಲೇಪಿತ ಬುದ್ಧನ ಪ್ರತಿಮೆ
ಟಿಬೆಟನ್ ಶೈಲಿಯಲ್ಲಿ ನಿರ್ಮಿಸಿರುವ ಬೌದ್ಧ ಪಗೋಡಗಳು
ಟಿಬೆಟನ್ ಶೈಲಿಯಲ್ಲಿ ನಿರ್ಮಿಸಿರುವ ಬೌದ್ಧ ಪಗೋಡಗಳು
ಟಿಬೆಟನ್ ಗೋಲ್ಡನ್ ಟೆಂಪಲ್‌ನಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿರುವ ಬೌದ್ಧ ಸನ್ಯಾಸಿಗಳು
ಟಿಬೆಟನ್ ಗೋಲ್ಡನ್ ಟೆಂಪಲ್‌ನಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿರುವ ಬೌದ್ಧ ಸನ್ಯಾಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT