ಮೈಸೂರು: ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯಿಂದ ಚೀನಾ ಮಹಾಕ್ರಾಂತಿಯ ಶಿಲ್ಪಿ ಮತ್ತು ಕಾರ್ಮಿಕ ವರ್ಗದ ನಾಯಕ ಮಾವೋ ಝೆಡಾಂಗ್ ಅವರ 48ನೇ ಸ್ಮರಣ ವಾರ್ಷಿಕ ಕಾರ್ಯಕ್ರಮ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆಸಲಾಯಿತು.
ಜಿಲ್ಲಾ ಸೆಕ್ರೆಟೇರಿಯಟ್ ಸದಸ್ಯ ಚಂದ್ರಶೇಖರ್ ಮೇಟಿ ಮಾತನಾಡಿ, ‘ಮಾರ್ಕ್ಸ್ ವಾದ ಒಂದು ವಿಜ್ಞಾನಗಳ ವಿಜ್ಞಾನ ಎಂದು ಅರಿತಿದ್ದ ಮಾವೋ ಚೀನಾದಲ್ಲಿ ಮಾರ್ಕ್ಸ್ ವಾದವನ್ನು ಚೀನಾದ ಪರಿಸ್ಥಿತಿಗೆ ತಕ್ಕಂತೆ ಅಳವಡಿಸಿದರು. ಆ ಪರಿಣಾಮವಾಗಿ ಚೀನಾದಲ್ಲಿ ಜನಪ್ರಜಾತಾಂತ್ರಿಕ ಕ್ರಾಂತಿ ಯಶಸ್ವಿಯಾಗಿ ಜರುಗಿತ್ತು’ ಎಂದು ಸ್ಮರಿಸಿದರು.
‘ಸಮಾಜದ ಬದಲಾವಣೆಯಲ್ಲಿ ತೊಡಗುವವರು ಮೊದಲು ಜನರ ಮೇಲೆ ನಂಬಿಕೆ ಇಡಬೇಕು ಎಂಬುದನ್ನು ಕಲಿಸಿಕೊಟ್ಟರು. ಅವರ ವಿಚಾರಗಳನ್ನು ಮಾರ್ಕ್ಸ್ ವಾದಿಗಳು ಮೈಗೂಡಿಸಿಕೊಂಡು ಸಮಾಜವಾದಿ ಕ್ರಾಂತಿಗೆ ಶ್ರಮಿಸಬೇಕು’ ಎಂದರು.
ಜಿಲ್ಲಾ ಸಮಿತಿಯ ಸದಸ್ಯ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಧ್ಯಾ, ಯಶೋಧರ್, ಸುಮಾ, ಬಸವರಾಜ್, ಸುಭಾಷ್, ಚಂದ್ರಕಲಾ, ಪುಷ್ಪಾ, ಆಸಿಯಾ ಬೇಗಂ ಇದ್ದರು.