ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಸ್ಥಿರ ಅಭಿವೃದ್ಧಿಗೆ ಸ್ಕೌಟ್ಸ್‌ ಗೈಡ್ಸ್‌ ಸಹಕಾರಿ: ಪಿ.ಜಿ.ಆರ್ ಸಿಂಧ್ಯ

Published 17 ಮಾರ್ಚ್ 2024, 6:48 IST
Last Updated 17 ಮಾರ್ಚ್ 2024, 6:48 IST
ಅಕ್ಷರ ಗಾತ್ರ

ಮೈಸೂರು: ‘ಮಕ್ಕಳಲ್ಲಿನ ರಾಷ್ಟ್ರ ಭಕ್ತಿ, ಸಹನೆ, ತಾಳ್ಮೆಯ ಶಕ್ತಿಯನ್ನು ಪರಿಚಯಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಯಾವಾಗಲೂ ಉದಾಹರಣೆಯಾಗಿ ನಿಲ್ಲುತ್ತದೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯ ಹೇಳಿದರು.

ನಗರದ ಗೋಕುಲಂನ ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಮೈಸೂರು ವಿಭಾಗೀಯ ಮಟ್ಟದ ರೋವರ್ಸ್ ಅಂಡ್ ರೆಂಜರ್ಸ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸಕ್ತ ವರ್ಷ ರಾಜ್ಯದಲ್ಲಿ 6 ಲಕ್ಷ ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ದೃಷ್ಟಿಯಾಗಿರಿಸಿ ಚಟುವಟಿಕೆ ಮಾಡಲಿದ್ದೇವೆ. ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಹಲವು ವ್ಯಕ್ತಿಗಳನ್ನು ನಮ್ಮ ಆದರ್ಶವಾಗಿ ಇರಿಸಿಕೊಳ್ಳಬೇಕು. ಸೇವಾ ಮನೋಭಾವವುಳ್ಳ ಶಿಸ್ತುಬದ್ಧ ಸಮಾಜ ನಿರ್ಮಿಸುವುದು. ಅಭಿವೃದ್ಧಿಯನ್ನು ಎಲ್ಲೆಡೆ ಪಸರಿಸುವುದು ನಮ್ಮ ಗುರಿಯಾಗಬೇಕು’ ಎಂದರು.

‘ನಾಡಿನ ಹಲವು ಜಾತ್ರೆಗಳಲ್ಲಿ, ಇತ್ತೀಚಿನ ಹಾಸನಾಂಬಾ ಜಾತ್ರೆಯಲ್ಲೂ ಸ್ಕೌಟ್ಸ್ ಅಂಡ್ ಗೈಡ್ಸ್ ಹುಡುಗರನ್ನು ನಿರ್ವಹಣೆಗೆ ಬಳಸಿಕೊಳ್ಳಲಾಗಿದೆ. ನಮ್ಮ ವಿದ್ಯಾರ್ಥಿಗಳು ಹೊಂದಿರುವ ಸಹನೆ, ತಾಳ್ಮೆ ಮತ್ತು ವಿಧೇಯ ಗುಣದಿಂದ ಈ ಜವಾಬ್ದಾರಿಗಳನ್ನು ನೀಡಲಾಗಿತ್ತು. ಒಂದು ಬೃಹತ್ ಸಂಘಟನೆಯಾಗಿ ನಾವು ಬದ್ಧತೆಯ ಸಮಾಜ ಕಟ್ಟಲು ಶ್ರಮಿಸುತ್ತಿದ್ದೇವೆ’ ಎಂದರು.

ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಹಾಗೂ ಕೊಡಗಿನಿಂದ 55 ಶಾಲೆಗಳ 1,150 ರೇಂಜರ್ಸ್ ಮತ್ತು ರೋವರ್ಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಸುಸ್ಥಿರ ಅಭಿವೃದ್ಧಿ ಗುರಿಗಳು ಎಂಬ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮೂರು ಗೋಷ್ಠಿಗಳು ನಡೆದವು. ಇದೇ ವಿಷಯದಲ್ಲಿ ನಾಟಕ ಸ್ಪರ್ಧೆ ಆಯೋಜಿಸಲಾಗಿತ್ತು. ಸುಮಾರು 20 ತಂಡಗಳು ಭಾಗವಹಿಸಿದವು.

ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಎ.ಎಚ್.ಎಂ.ವಿಜಯಲಕ್ಷ್ಮಿ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಪಿ. ವಿಶ್ವನಾಥ್, ಖಜಾಂಚಿ ಗುರುಮೂರ್ತಿ, ಕಾರ್ಯದರ್ಶಿ ಅಬ್ದುಲ್‌ ಜಮೀಲ್‌, ಪ್ರಾಂಶುಪಾಲ ಎಂ.ಶಿವಲಿಂಗೇಗೌಡ, ಸಂಚಾಲಕ ಚಂದ್ರು, ಕಾಲೇಜಿನ ರೋವರ್ಸ್ ಅಂಡ್ ರೇಂಜರ್ಸ್ ಅಧಿಕಾರಿ ಲಾವಣ್ಯಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT