ಮೈಸೂರು: ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದ ಇಲ್ಲಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕ ವೀಸಾ ನಿರಾಕರಿಸಲಾಗಿದೆ.
‘ಅಮೆರಿಕದದಲ್ಲಿ ಆಯೋಜಿಸಲಾಗಿರುವ ಅಕ್ಕ (ಅಮೆರಿಕ ಕನ್ನಡ ಕೂಟಗಳ ಆಗರ) ವಿಶ್ವ ಕನ್ನಡ ಸಮ್ಮೇಳನದಲ್ಲಿ ಸನ್ಮಾನಿಸಲು ಆಯೋಜಕರಿಂದ ಆಹ್ವಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆಯೇ ವೀಸಾಗೆ ಅರ್ಜಿ ಸಲ್ಲಿಸಿದ್ದೆ. ಅದನ್ನು ತಿರಸ್ಕರಿಸಲಾಗಿದೆ ಎಂದು ನನಗೆ ಮಾಹಿತಿ ಬಂದಿದೆ. ‘ಅಮೆರಿಕದ ಕ್ರೈಟೀರಿಯಾಗಳು ಫುಲ್ ಫಿಲ್ ಆಗಿಲ್ಲ’ ಎಂಬ ಕಾರಣವನ್ನು ತಿಳಿಸಲಾಗಿದೆ’ ಎಂದು ಅರುಣ್ ಮಾಧ್ಯಮ ಪ್ರತಿನಿಧಿಗಳಿಗೆ ಗುರುವಾರ ತಿಳಿಸಿದರು.
‘ನಾನು ಇದೇ ಮೊದಲ ಬಾರಿಗೆ ಅಮೆರಿಕಕ್ಕೆ ಹೋಗುವವನಿದ್ದೆ. ಈ ವಿಚಾರದಲ್ಲಿ ನಮ್ಮ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ನನಗೆ ಸಹಕಾರ ದೊರೆತಿತ್ತು. ಆದರೆ, ಅಮೆರಿಕದ ಎಂಬೆಸ್ಸಿಯಿಂದ ಯಾವುದೇ ನೆರವು ಸಿಕ್ಕಿಲ್ಲ. ಇದರಿಂದ ಬೇಸರವಾಗಿದೆ. ಅಕ್ಕ ಸಮ್ಮೇಳನದ ಆಯೋಜಕರು ಕೂಡ ಪ್ರಯತ್ನ ಮಾಡುತ್ತಿದ್ದಾರೆ. ವೀಸಾ ದೊರೆತು ಅವಕಾಶವಾದರೆ ಹೋಗುತ್ತೇನೆ’ ಎಂದು ಹೇಳಿದರು.