ಮೈಸೂರು: ‘2025ರ ವೇಳೆಗೆ ರಾಜ್ಯದ ಆರ್ಥಿಕತೆಯ ಗಾತ್ರವನ್ನು ₹ 70 ಲಕ್ಷ ಕೋಟಿಗೆ (1 ಟ್ರಿಲಿಯನ್ ಡಾಲರ್) ಹೆಚ್ಚಿಸಲು ಆಹಾರ ಸಂಸ್ಕರಣಾ ಕ್ಷೇತ್ರದ ಆದಾಯ ದ್ವಿಗುಣಗೊಳಿಸಬೇಕು’ ಎಂದು ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮೊಹಮ್ಮದ್ ಇರ್ಫಾನ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರವು ಉದ್ಯಮಿಗಳಿಗೆ ‘ಆಹಾರ ಸಂಸ್ಕರಣೆ, ಮುನಿಸಿಪಾಲಿಟಿ ಕಾಯ್ದೆ, ಝಡ್‌ಇಡಿ ಪ್ರಮಾಣೀಕರಣ ಹಾಗೂ ಭಾರತೀಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಬ್ಯಾಂಕ್‌ನ (ಎಸ್‌ಐಡಿಬಿಐ) ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಒಟ್ಟು ಆಂತರಿಕ ಉತ್ಪಾದನೆ (ಜಿಎಸ್‌ಡಿಪಿ) ಪ್ರಮಾಣದಲ್ಲಿ ಶೇ 15ರಷ್ಟು ಕೊಡುಗೆಯನ್ನು ಆಹಾರ ಸಂಸ್ಕರಣಾ ಕ್ಷೇತ್ರವು ನೀಡುತ್ತಿದೆ. ಅದನ್ನು ಶೇ 30ಕ್ಕೆ ಹೆಚ್ಚಿಸಲು ಗುರಿ ಹಾಕಿಕೊಳ್ಳಲಾಗಿದೆ. ಹೊಸ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ರೂಪಿಸಿದೆ’ ಎಂದು ಮಾಹಿತಿ ನೀಡಿದರು.
‘ಕಿರು ಆಹಾರ ಸಂಸ್ಕರಣ ಉದ್ದಿಮೆಗಳಿಗಾಗಿ ಫುಡ್ ಪಾರ್ಕ್‌ಗಳನ್ನು ಪ್ರತಿ ಜಿಲ್ಲೆಯಲ್ಲೂ ಸ್ಥಾಪಿಸಲು ಭೂಮಿ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ ನೀಡಿದ್ದಾರೆ’ ಎಂದು ತಿಳಿಸಿದರು.
‘ರೈತರ ಆದಾಯವನ್ನು ದ್ವಿಗುಣಗೊಳಿಸಲು ಆಹಾರ ಸಂಸ್ಕರಣ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕು. ಹೀಗಾಗಿಯೇ ಸಾಲ ಸೌಲಭ್ಯ ಒದಗಿಸುವುದಲ್ಲದೇ ಉದ್ಯಮ ಸ್ಥಾಪನೆಗೆ ಅಗತ್ಯವಾದ ಭೂಮಿ, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ನೀಡಲಾಗುತ್ತಿದೆ’ ಎಂದರು.
‘ಆಹಾರ, ಜವಳಿ ಹಾಗೂ ಮನೆ ನಿರ್ಮಾಣದ ಉದ್ಯಮಗಳಲ್ಲಿ ತೊಡಗಿಸಿಕೊಂಡವರಿಗೆ ನಷ್ಟವಾಗುವುದಿಲ್ಲ. ಅವರಿಗೆ ಯಶಸ್ಸು ಖಂಡಿತ’ ಎಂದು ತಿಳಿಸಿದರು.
ಹೂಟಗಳ್ಳಿ ನಗರಸಭೆ ಆಯುಕ್ತ ಪಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಹೊರೆಯಾಗದಂತೆ ತೆರಿಗೆ ವಿಧಿಸಲಾಗುತ್ತಿದೆ. ಭಾರಿ ಉದ್ಯಮ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ ತೆರಿಗೆ ಶೇ 50ರಷ್ಟು ಕಡಿಮೆ ಇರುತ್ತದೆ. ಕಿರು ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್ ಮಾತನಾಡಿ, ‘ಉದ್ಯಮಿಗಳು ಉತ್ಪಾದನೆಯ ಜೊತೆಗೆ ಪರಿಸರದ ಬಗ್ಗೆಯೂ ಯೋಚಿಸಬೇಕು. ಝಡ್‌ಇಡಿ ಪ್ರಮಾಣ ಪತ್ರವನ್ನು ಪ್ರತಿಯೊಬ್ಬರು ಪಡೆಯಬೇಕು’ ಎಂದರು.
ಭಾರತೀಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಬ್ಯಾಂಕ್‌ನ (ಎಸ್‌ಐಡಿಬಿಐ) ವ್ಯವಸ್ಥಾಪಕ ಲೋಗೇಶ್, ಎಂಎಸ್‌ಎಂಇ ಉಪನಿರ್ದೇಶಕ ಆರ್.ಗೋಪಿನಾಥರಾವ್, ಸಂಘದ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ, ಸಂಘದ ಗ್ರಾಂಈಣ ಅಭಿವೃದ್ಧಿ ಸಮಿತಿ ಮುಖ್ಯಸ್ಥ ಸಿ.ಎಂ.ಸುಬ್ರಹ್ಮಣಿಯನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.