ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ದಸರಾ ವಸ್ತುಪ್ರದರ್ಶನದ ‘ಶಕ್ತಿ’ ವೃದ್ಧಿ!

ನಾಡಹಬ್ಬದ ಅವಧಿಯಲ್ಲಿ ಉತ್ತಮ ಪ್ರತಿಕ್ರಿಯೆ; 90 ದಿನಗಳವರೆಗೆ ಮುಂದುವರಿಕೆ
Published 26 ಅಕ್ಟೋಬರ್ 2023, 7:26 IST
Last Updated 26 ಅಕ್ಟೋಬರ್ 2023, 7:26 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದಿಂದ ಇಲ್ಲಿನ ದೊಡ್ಡಕೆರೆ ಮೈದಾನದಲ್ಲಿ ಆಯೋಜಿಸಿರುವ ‘ದಸರಾ ವಸ್ತುಪ್ರದರ್ಶನ’ಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಶಕ್ತಿ’ ಯೋಜನೆಯಿಂದಾಗಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ರಾಜ್ಯದ ಮಹಿಳೆಯರು ಕೆಎಸ್‌ಆರ್‌ಟಿಸಿಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ‘ಶಕ್ತಿ’ ಯೋಜನೆ ನೀಡಿದೆ. ಇದನ್ನು ಬಳಸಿಕೊಂಡು ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಮಕ್ಕಳು ಹಾಗೂ ಕುಟುಂಬದವರೊಂದಿಗೆ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಮುಖ್ಯವಾಗಿ ವಸ್ತುಪ್ರದರ್ಶನವನ್ನೂ ಅವರು ವೀಕ್ಷಿಸಿದ್ದಾರೆ.

ದಸರಾ ನಡೆದ ದಿನಗಳಂದು ಅಂದರೆ ಅ.15ರಿಂದ ಅ.24ರವರೆಗೆ ಸಹಸ್ರಾರು ಮಂದಿ ಭೇಟಿ ನೀಡಿದ್ದಾರೆ. ವಸ್ತುಪ್ರದರ್ಶನವು 90 ದಿನಗಳವರೆಗೆ ಮುಂದುವರಿಯಲಿದ್ದು, ವಾರಾಂತ್ಯಗಳಲ್ಲಿ ಹೆಚ್ಚಿನ ಸಂದರ್ಶಕರನ್ನು ನಿರೀಕ್ಷಿಸಲಾಗುತ್ತಿದೆ. ಶಾಲಾ–ಕಾಲೇಜುಗಳಿಗೆ ದಸರಾ ರಜೆಯೂ ಇರುವುದರಿಂದ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ತೀವ್ರ ಬರಗಾಲವಿದ್ದರೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಸಾಂಸ್ಕೃತಿಕ ನಗರಿಗೆ ಬರುತ್ತಿದ್ದಾರೆ. ಅವರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ವರದಾನವಾಗಿದೆ.

15ರಿಂದ ಆರಂಭ: ಅ.15ರಂದು ನಾಡಹಬ್ಬಕ್ಕೆ ಚಾಲನೆ ನೀಡಲಾಯಿತು. ಅಂದು ಸಂಜೆಯೇ ವಸ್ತುಪ್ರದರ್ಶನವನ್ನೂ ಅಧಿಕೃತವಾಗಿ ಉದ್ಘಾಟಿಸಲಾಗಿತ್ತು. ಮೊದಲ ಮೂರು ದಿನಗಳವರೆಗೆ ಸರಾಸರಿ 20 ಸಾವಿರದಿಂದ 22 ಸಾವಿರ ಮಂದಿ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದರು. ಬಳಿಕ ಸಂಖ್ಯೆ ಜಾಸ್ತಿಯಾಯಿತು. ಅ.20ರಿಂದ 23ರವರೆಗೆ ಸರಾಸರಿ 30 ಸಾವಿರದಿಂದ 35 ಸಾವಿರ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ದಸರೆಯ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ಜರುಗಿದ ಅ.24ರಂದು 50 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಇದರಿಂದ, ಟೆಂಡರ್‌ ಪಡೆದಿರುವ ಕಂಪನಿಗೆ ಉತ್ತಮ ವರಮಾನ ಸಂಗ್ರಹವಾಗಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ, ದಸರಾ ಅವಧಿಯಲ್ಲಿ ಹೆಚ್ಚಿನ ಜನ ವಸ್ತುಪ್ರದರ್ಶನಕ್ಕೆ ಬಂದಿದ್ದಾರೆ. ಹೋದ ವರ್ಷ ನಾಡಹಬ್ಬದ ದಿನಗಳಲ್ಲಿ ಸರಾಸರಿ 20 ಸಾವಿರ ಮಂದಿ ಭೇಟಿ ನೀಡಿದ್ದರು. ಕೋವಿಡ್–19 ಸಂಕಷ್ಟಕ್ಕೆ ಒಳಗಾಗಿ, ಸುಧಾರಿಸಿಕೊಳ್ಳುತ್ತಿದ್ದ ಸಂದರ್ಭದ ಅದ್ದೂರಿ ದಸರಾ ಅದಾಗಿತ್ತು. ಈ ಬಾರಿ ‘ಶಕ್ತಿ’ ಯೋಜನೆ ಕಾರಣದಿಂದ ಸಂದರ್ಶಕರ ಸಂಖ್ಯೆಯು ಜಾಸ್ತಿಯಾಲಿದೆ ಎಂದು ನಿರೀಕ್ಷಿಸಿದ್ದೆವು. ಅದು ನಿಜವಾಗುತ್ತಿದೆ’ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ರಾಜೇಶ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚುವರಿ ಆದಾಯ: ಹೋದ ವರ್ಷ ವಸ್ತುಪ್ರದರ್ಶನಕ್ಕೆ 17 ಲಕ್ಷ ಪ್ರವಾಸಿಗರು ಬಂದಿದ್ದರು. ಆಗ ₹8 ಕೋಟಿಗೆ ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಈ ಬಾರಿ ₹11.52 ಕೋಟಿಗೆ ಟೆಂಡರ್‌ ಕೊಡಲಾಗಿದೆ. ಇದರಿಂದ ಪ್ರಾಧಿಕಾರಕ್ಕೆ ಹೆಚ್ಚುವರಿ ಆದಾಯ ಬಂದಿದೆ.

ವಯಸ್ಕರಿಗೆ ₹30 ಹಾಗೂ ಮಕ್ಕಳಿಗೆ ₹20 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರವೇಶವಿದೆ. ವಿವಿಧ ಇಲಾಖೆಗಳ ಮಳಿಗೆಗಳನ್ನು ಹಾಕಲಾಗಿದೆ. ಮರಳು ಶಿಲ್ಪಗಳು ಆಕರ್ಷಣೆಯಾಗಿವೆ. ಮುಂದಿನ ವರ್ಷದ ಜ.12ರವರೆಗೆ ವಸ್ತುಪ್ರದರ್ಶನ ಇರಲಿದೆ.

ಮುಂದಿನ ವರ್ಷ ಜ.12ರವರೆಗೆ ಪ್ರದರ್ಶನ ವಾರಾಂತ್ಯಗಳಲ್ಲಿ ಹೆಚ್ಚಿನ ಸಂದರ್ಶಕರ ನಿರೀಕ್ಷೆ ಮರಳು ಶಿಲ್ಪಗಳು ಆಕರ್ಷಣೆ
‘ಹೊರ ಜಿಲ್ಲೆಗಳವರೇ ಜಾಸ್ತಿ’
‘ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಮಕ್ಕಳು ಹಾಗೂ ಕುಟುಂಬದವರೊಂದಿಗೆ ಬರುತ್ತಿರುವುದನ್ನು ಗಮನಿಸಿದ್ದೇವೆ. ಅವರ ಅನುಕೂಲಕ್ಕಾಗಿಯೇ ಮುಖ್ಯ ದ್ವಾರದ ಬಳಿಯಲ್ಲೇ ಈ ವರ್ಷ ಮೊದಲ ಬಾರಿಗೆ ‘ಲಗೇಜ್‌ ಕೊಠಡಿ’ ಮಾಡಲಾಗಿದೆ. ಅದನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ. ಸಂದರ್ಶಕರಲ್ಲಿ ಮೈಸೂರು ಜಿಲ್ಲೆಯವರಿಗಿಂತ ಬೇರೆ ಜಿಲ್ಲೆಗಳವರೇ ಜಾಸ್ತಿ ಕಂಡುಬರುತ್ತಿದ್ದಾರೆ’ ಎನ್ನುತ್ತಾರೆ ಪ್ರಾಧಿಕಾರದ ಸಿಇಒ ರಾಜೇಶ್‌ ಗೌಡ. ‘ಕಾಳಿಂಗರಾವ್‌ ಸಭಾಂಗಣದಲ್ಲಿ ನಿತ್ಯವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರನ್ನು ಆಕರ್ಷಿಸಲಾಗುವುದು. ಈ ವಾರಾಂತ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಿಂದ ಚಾಲನೆ ಕೊಡಿಸಲಾಗುವುದು. ಸ್ಥಳೀಯ ಕಲಾವಿದರಿಗೆ ವೇದಿಕೆ ಒದಗಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT