ಮೈಸೂರು: ಕೆ.ಆರ್. ಆಸ್ಪತ್ರೆ ‘ಡಿ’ ದರ್ಜೆ ನೌಕರರ ಕೊರತೆ ಎದುರಿಸುತ್ತಿದ್ದು, ಯಾವುದೇ ಕೆಲಸವೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಹೊರಗುತ್ತಿಗೆ ನೌಕರರ ಮೇಲೆ ತೀವ್ರ ಒತ್ತಡ ಬಿದ್ದಿದೆ.
ಆಸ್ಪತ್ರೆಯಲ್ಲಿ ಪ್ರಸ್ತುತ ಸ್ವಚ್ಛತಾ ಸಿಬ್ಬಂದಿ, ವಾರ್ಡ್ ಬಾಯ್, ಕಾವಲು ಸಿಬ್ಬಂದಿ ಸೇರಿ 250 ಮಂದಿಯಷ್ಟೇ ಇದ್ದಾರೆ. ಅವರೂ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇವರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ.
‘ಆಸ್ಪತ್ರೆಯ ವೈದ್ಯರು ಹೇಳುವ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಿದ್ದೇವೆ. ಸಿಬ್ಬಂದಿ ಕಡಿಮೆ ಇರುವುದರಿಂದ ಒತ್ತಡವೂ ಹೆಚ್ಚಿದೆ. ಆಸ್ಪತ್ರೆ ಕಾಮಗಾರಿ ಆರಂಭವಾದ ಬಳಿಕವಂತೂ ನಮ್ಮ ಕೆಲಸವೂ ದುಪ್ಪಟ್ಟಾಗಿದೆ. ನಮ್ಮನ್ನು ಕಾಯಂ ಸಿಬ್ಬಂದಿಗಳಾಗಿ ನೇಮಿಸಿದರೆ ಕೆಲಸದ ಭದ್ರತೆಯೂ ದೊರೆಯುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾಯಂ ಸಿಬ್ಬಂದಿ ಇಲ್ಲದಿರುವುದರಿಂದ ಹೆಚ್ಚಿನ ಸಂದರ್ಭದಲ್ಲಿ ನಾವು ಹೇಳಿದ ಕೆಲಸವನ್ನು ಹೊರಗುತ್ತಿಗೆ ನೌಕರರು ಮಾಡುತ್ತಿಲ್ಲ. ಹೆಚ್ಚು ಕೆಲಸ ಬಂದರೆ ಸ್ಪಂದಿಸುತ್ತಿಲ್ಲ’ ಎಂದು ವೈದ್ಯರೊಬ್ಬರು ದೂರಿದರು.
ಮೂಡದ ಸಮನ್ವಯ: ಹೊರಗುತ್ತಿಗೆ ನೌಕರರು ಹಾಗೂ ವೈದ್ಯ ಸಿಬ್ಬಂದಿ ನಡುವೆ ಸಮನ್ವಯವೇ ಇಲ್ಲವಾಗಿದೆ. ಈಚೆಗೆ ಆಸ್ಪತ್ರೆಯಲ್ಲಿ ಗಾಲಿಕುರ್ಚಿ ಹಾಗೂ ಲಿಫ್ಟ್ ವ್ಯವಸ್ಥೆ ಸರಿಯಿಲ್ಲದೆ ವೃದ್ಧೆಯೊಬ್ಬರನ್ನು ಪ್ಲಾಸ್ಟಿಕ್ ಚೇರ್‌ನಲ್ಲಿ ಹೊತ್ತೊಯ್ಯಲಾಗಿತ್ತು. ಆಗ ಶಾಸಕ ಕೆ.ಹರೀಶ್ ಗೌಡ ಭೇಟಿ ನೀಡಿ, ಪರಿಶೀಲಿಸಿ ವೈದ್ಯರು ಹಾಗೂ ಸಿಬ್ಬಂದಿ ನಡುವಿನ ಸಂವಹನ ಕೊರತೆ ಬಗ್ಗೆ ತರಾಟೆ ತೆಗೆದುಕೊಂಡಿದ್ದರು.
ಕಾವಲು ಸಿಬ್ಬಂದಿ ನಿಯೋಜಿಸಿ: ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿಯೇ ಕಾವಲು ಸಿಬ್ಬಂದಿ ನಿಯೋಜಿಸಬೇಕೆಂಬುದು ವೈದ್ಯರು ಹಾಗೂ ಸಿಬ್ಬಂದಿಯ ಆಗ್ರಹ. ಅದರಲ್ಲೂ ರಾತ್ರಿ ವೇಳೆ ಆವರಣದ ಒಳಸೇರುವ ಕುಡುಕರು ಹಾಗೂ ಇತರರನ್ನು ತಡೆಯುವ ಕೆಲಸ ಆಗಬೇಕಿದೆ. ಆದರೆ, ಆಸ್ಪತ್ರೆಯಲ್ಲಿ 60 ಕಾವಲು ಸಿಬ್ಬಂದಿಯಷ್ಟೇ ಇದ್ದಾರೆ. ಅವರನ್ನು ಮೂರು ಪಾಳಿಯಲ್ಲಿ ಹಂಚಲಾಗಿದೆ.
‘ಕಾವಲು ಸಿಬ್ಬಂದಿಯನ್ನು ಆಸ್ಪತ್ರೆಯ ವಾರ್ಡ್‌ಗಳ ಭದ್ರತೆಗೆ ನೇಮಿಸಲಾಗಿದೆ. ಹೀಗಾಗಿ ಹೊರ ಆವರಣದಲ್ಲಿ ಸಿಬ್ಬಂದಿಯೇ ಇಲ್ಲ. ಬೆಳಿಗ್ಗೆಯಷ್ಟೇ ಹೊರ ಆವರಣದಲ್ಲಿ ಒಂದಿಬ್ಬರು ಕಾವಲು ಸಿಬ್ಬಂದಿ ಇರುತ್ತಾರೆ. ಹೆಚ್ಚುವರಿ ಸಿಬ್ಬಂದಿ ನೇಮಿಸಿ ಭದ್ರತೆ ಒದಗಿಸಬೇಕು’ ಎಂಬುದು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಆಗ್ರಹ.
‘ಈಗ 60 ಕಾವಲು ಸಿಬ್ಬಂದಿಯಿದ್ದು, ಇನ್ನೂ 30 ಜನರ ಅವಶ್ಯಕತೆಯಿದೆ. ಆಸ್ಪತ್ರೆಯಲ್ಲಿ ಒಟ್ಟು 250 ಸಿಬ್ಬಂದಿಗಳಿದ್ದು, ಹೆಚ್ಚುವರಿಯಾಗಿ ಇನ್ನೂ 100 ಸಿಬ್ಬಂದಿ ಅವಶ್ಯಕತೆಯಿದೆ. ನೇಮಕಾತಿಯಾದರೆ ಆಸ್ಪತ್ರೆಯ ಕೆಲಸಗಳನ್ನು ಸರಾಗವಾಗಿ ನಿರ್ವಹಿಸಲು ಸಾಧ್ಯ’ ಎಂದು ಆಸ್ಪತ್ರೆಯ ಸೂಪರಿಟೆಂಡೆಂಟ್ ಡಾ.ಶೋಭಾ ಹೇಳಿದರು.
ನಿತ್ಯ ಸಾವಿರಾರು ಜನ ಭೇಟಿ ನೀಡುವ ಆಸ್ಪತ್ರೆಯಲ್ಲಿ ಭದ್ರತೆ ಹಾಗೂ ಉತ್ತಮ ಸೇವೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ‘ಡಿ’ ದರ್ಜೆ ನೌಕರರ ನೇಮಕಾತಿ ಅತ್ಯಗತ್ಯವಾಗಿದ್ದು, ಅದರಿಂದ ನಮ್ಮ ಕೆಲಸಕ್ಕೂ ಸಹಕಾರಿಯಾಗಲಿದೆ. ಸರ್ಕಾರ ತ್ವರಿತವಾಗಿ ಈ ಬಗ್ಗೆ ಗಮನಹರಿಸಲಿ ಎಂಬುದು ವೈದ್ಯರ ಆಗ್ರಹ.
ಡಿ ದರ್ಜೆ ನೌಕರರ ಕೊರತೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆಡಾ.ಶೋಭಾ ಕೆ.ಆರ್. ಆಸ್ಪತ್ರೆಯ ಸೂಪರಿಟೆಂಡೆಂಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.