ಮೈಸೂರು: ‘ತಿ.ನರಸೀಪುರದ ‘ಯುವ ಬ್ರಿಗೇಡ್’ ಸಂಚಾಲಕ ವೇಣುಗೋಪಾಲ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಯಬೇಕು’ ಎಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಒತ್ತಾಯಿಸಿದರು.
ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಮ್ಮ ಪೊಲೀಸರು ಸಮರ್ಥರಿದ್ದಾರೆ. ಆದರೆ, ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ’ ಎಂದು ಅನುಮಾನ ವ್ಯಕ್ತಪಡಿಸಿದರು. ‘ಸಿಬಿಐ ತನಿಖೆ ಮಾಡಿದರೆ ಸತ್ಯ ಹೊರಬರುತ್ತದೆ’ ಎಂದು ಪ್ರತಿಪಾದಿಸಿದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಕಾರ್ಯಕರ್ತರ ಹತ್ಯೆ ಶುರುವಾಗುತ್ತದೆ. ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಹದಗೆಟ್ಟಿದ್ದು, ಕಾನೂನನ್ನು ಗಂಟು–ಮೂಟೆ ಕಟ್ಟಿ ಬಿಸಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರಲ್ಲೇ ಕಾನೂನು– ಸುವ್ಯವಸ್ಥೆ ಹದೆಗಟ್ಟಿದೆ ಎಂದ ಮೇಲೆ ರಾಜ್ಯದ ಬೇರೆ ಭಾಗಗಳ ಪರಿಸ್ಥಿತಿ ಹೇಗಿರಬೇಡ ಯೋಚಿಸಿ’ ಎಂದು ಕೇಳಿದರು.
‘ಹಿಂದೂ ಕಾರ್ಯಕರ್ತರು, ಸ್ವಾಮೀಜಿಗಳು ಹಾಗೂ ಹಿರಿಯ ನಾಗರಿಕರಿಗೆ ರಕ್ಷಣೆ ಇಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಜಿಹಾದಿ ಮನಸ್ಥಿತಿ ಇರುವವರೆಲ್ಲರೂ ಎದ್ದೇಳುತ್ತಾರೆ. ಹೀಗಾಗಿ ಕೊಲೆಗಳು ನಡೆಯುತ್ತವೆ. ವೇಣುಗೋಪಾಲ ಕೊಲೆ ಪೂರ್ವಯೋಜಿತ ಕೃತ್ಯ. ಜಿಹಾದಿ ಮನೋಭಾವದವರು ಪ್ಲಾನ್ ಮಾಡಿಕೊಂಡು ಹಿಂದೂಗಳನ್ನು ಕೊಲ್ಲುತ್ತಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಗಂಭೀರತೆ ಇಲ್ಲ’ ಎಂದು ದೂರಿದರು.
‘ವೇಣುಗೋಪಾಲ ಹತ್ಯೆ ನಂತರ ಅವರ ಕುಟುಂಬಕ್ಕೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಾಡಿಲ್ಲ. ಮುಖ್ಯಮಂತ್ರಿ ಸಮೇತ ಎಲ್ಲರೂ ಕಣ್ಣು ಮುಚ್ಚಿ ಕುಳಿತಿದ್ದಾರೆ. ಹಿಂದೂಗಳು ಜಾಗರೂಕರಾಗಿರಬೇಕು. ಶವದ ಮೇಲೆ ಬಿಜೆಪಿ ಯಾವತ್ತೂ ರಾಜಕೀಯ ಮಾಡಿಲ್ಲ. ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಯಾದಾಗ ಅವರ ವಿರುದ್ಧ ಧ್ವನಿ ಎತ್ತುವುದು ನಮ್ಮ ಜವಾಬ್ದಾರಿ’ ಎಂದರು.
‘ಜೈನ ಮುನಿ ಕೊಲೆ ಪ್ರಕರಣ ಸಿಬಿಐಗೆ ನೀಡಲ್ಲ’ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 40 ಕೊಲೆಗಳಾಗಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. 2013ರಲ್ಲೂ ಇದೇ ಪರಿಸ್ಥಿತಿ ಇತ್ತು’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.