ಮೈಸೂರು: ‘ರಾಜ್ಯದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬೊಬ್ಬೆ ಹೊಡಿಯುವ ಸಿದ್ದರಾಮಯ್ಯ ಅವರು ಹಳೆ ಗಂಡನ ಪಾದವೇ ಗತಿ ಎನ್ನುವ ರೀತಿಯಲ್ಲಿ ವರುಣಾ ಕ್ಷೇತ್ರಕ್ಕೆ ಬಂದಿದ್ದಾರೆ’ ಎಂದು ಸಂಸದ ಪ್ರತಾಪ ಸಿಂಹ ಲೇವಡಿ ಮಾಡಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುಕ್ಕಲತನದಿಂದ ಹಾಗೂ ಬೇರೆ ಕಡೆ ನಿಂತರೆ ಸೋಲುವ ಭಯದಿಂದ ವರುಣಾಕ್ಕೆ ಬಂದಿದ್ದಾರೆ. ನಮ್ಮ ಪಕ್ಷ ವರುಣಾದಲ್ಲಿ ಯಾರನ್ನು ನಿಲ್ಲಸಬೇಕು ಎನ್ನುವುದನ್ನು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ’ ಎಂದರು.
‘ಮುಖ್ಯಮಂತ್ರಿ ಆಗುವ ಕನಸು ಕಾಣುವ ವ್ಯಕ್ತಿ ತನ್ನ ಪ್ರಭಾವದ ಮೂಲಕ ಕನಿಷ್ಠ 30–40ಜನ ಗೆಲ್ಲಿಸಿಕೊಂಡು ಬರುವಂತಹ ಶಕ್ತಿ ಹೊಂದಿರಬೇಕು. ಆದರೆ, ತಾನೇ ಕ್ಷೇತ್ರ ಹುಡುಕಿಕೊಂಡು ಬಂದಿದ್ದಾರೆ. ತನ್ನ ಮಗನ ನೆಲೆ ಕಳೆದು ಕೊನೆಗೆ, ವರುಣಾದಲ್ಲಿ ಬಂದು ನಿಂತುಕೊಳ್ಳುತ್ತಿದ್ದಾರೆ ಎಂದರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದಿದೆ ಎಂಬುದು ಇದರಿಂದ ತಿಳಿದುಕೊಳ್ಳಬಹುದು’ ಎಂದು ವ್ಯಂಗ್ಯವಾಡಿದರು.
‘ಸಿದ್ದರಾಮಯ್ಯನವರು ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋಲುತ್ತೇನೆ ಎಂದು ಭಯ ಶುರುವಾಗಿ, ಬಾದಾಮಿ ಹೋಗಿ ಸಣ್ಣ ಅಂತರದಿಂದ ಗೆದ್ದು ಸೋಲಿನ ದವಡೆಯಿಂದ ಪಾರಾದರು. ಈ ಬಾರಿ ಅವರು ಖಂಡಿತವಾಗಿಯೂ ಕೋಲಾರದಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಕೇವಲ ವರುಣಾದಿಂದಷ್ಟೆ ಸ್ಪರ್ಧಿಸುತ್ತಾರೆ’ ಎಂದರು.
‘ಅವರ ರಾಜಕಾರಣ 2018ರಲ್ಲೇ ಅಂತ್ಯವಾಗಿದ್ದು, ಈ ಬಾರಿ ವರುಣಾದಲ್ಲಿ ಕೊನೆಗೊಳ್ಳಲಿದೆ’ ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಮೇಯರ್ ಶಿವಕುಮಾರ್, ವಕ್ತಾರ ಮೋಹನ್, ಸಹ ವಕ್ತಾರ ಮಹೇಶ್, ಸೋಮಶೇಖರ್ ಇದ್ದರು.
ನಾವು ಭಾಷಣ ಮಾಡುವವರಲ್ಲ: ಪ್ರತಾಪ
‘ನಾವು ಕೇವಲ ಭಾಷಣ ಮಾಡುವವರಲ್ಲ. ನಿಜವಾಗಿಯೂ ಹಿಂದುಳಿದ ಜಾತಿ, ಜನಾಂಗ, ವರ್ಗಗಳ ಪರವಾಗಿ ಇರುವಂತಹವರು ಎಂದು ತೋರಿಸಲಾಗಿದೆ’ ಎಂದು ಪ್ರತಾಪ ಹೇಳಿದರು.
‘ಹಿಂದುಳಿದ ಜಾತಿ, ಜನಾಂಗ ಹಾಗೂ ವರ್ಗಗಳ ಉದ್ದಾರಕರು ಎಂದು ಭಾಷಣ ಮಾಡುವಂತಹ ಪಕ್ಷಗಳು ಕೇವಲ ಭರವಸೆ ನೀಡುತ್ತಾ, ಜಾತಿ–ಜಾತಿ ಮಧ್ಯೆ ದ್ವೇಷ ಬಿತ್ತುವ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. ಬಿಜೆಪಿ, ಸಂಘ ಪರಿವಾರವನ್ನು ಮೀಸಲಾತಿ ವಿರೋಧಿಗಳು, ಸಂವಿಧಾನ ಬದಲಿಸುತ್ತಾರೆ ಎಂದು ಇಲ್ಲಸಲ್ಲದ ಪುಕಾರು ಹಬ್ಬಿಸಿ ರಾಜಕೀಯ ಮಾಡಿಕೊಂಡು ಬಂದರೇ ಹೊರತು ಯಾವತ್ತೂ ಹಿಂದುಳಿದ ವರ್ಗಗಳ ಬಗ್ಗೆ ನೈಜ ಕಾಳಜಿ ತೋರಿಲ್ಲ’ ಎಂದು ದೂರಿದರು.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಹಿಂದುಳಿದ ಜಾತಿ, ಜನಾಂಗ ಮತ್ತು ಇತರ ಹಿಂದುಳಿದ ವರ್ಗಗಳ ಭವಿಷ್ಯದ ದೃಷ್ಟಿಯಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಕಾಂಕ್ಷಿಗಳ ದೃಷ್ಟಿಯಿಂದ ಮೀಸಲಾತಿ ನೀಡಿದ್ದು, ಮಹತ್ತರವಾದ ಮೈಲಿಗಲ್ಲು ಇದಾಗಿದೆ. ಎಲ್ಲ ಸಮಾಜಕ್ಕೂ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡಿದೆ’ ಎಂದು ತಿಳಿಸಿದರು.
‘ಲಕ್ಷಣತೀರ್ಥದಿಂದ ಹುಣಸೂರಿನ 49 ಕೆರೆಗೆ ನೀರು ತುಂಬಿಸುವ ₹ 85 ಕೋಟಿ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ₹ 314 ಕೋಟಿ ವೆಚ್ಚದಲ್ಲಿ 294 ಗ್ರಾಮಗಳಿಗೆ ಏಕಕಾಲಕ್ಕೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದೇವೆ. ಪಿರಿಯಾಪಟ್ಟಣದಲ್ಲಿನ ಗ್ರಾಮಗಳಿಗೆ ₹ 282 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಅಡಿ ಕುಡಿಯುವ ನೀರು ಒದಗಿಸಲಾಗುತ್ತದೆ. ಮುಂದಿನ 18 ತಿಂಗಳಲ್ಲಿ ಹುಣಸೂರು, ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಮೈಸೂರಿನ ಪ್ರತಿ ಮನೆಯ ನಲ್ಲಿಯಲ್ಲಿ ಶುದ್ಧ ಕುಡಿಯುವ ನೀರು ಬರುತ್ತದೆ. ಈ ಎಲ್ಲ ಗಣನೀಯ ನಿರ್ಧಾರ ತೆಗೆದುಕೊಂಡು ಮೈಸೂರಿಗೆ ಬಿಜೆಪಿ ಸರ್ಕಾರ ದೊಡ್ಡ ಕೊಡುಗೆ ಕೊಟ್ಟಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.