ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕದಲ್ಲಿ ವೈದ್ಯನ ಪಾತ್ರ ಮಾಡಿದ್ದೆ: ಸಿದ್ದರಾಮಯ್ಯ

Last Updated 11 ಜೂನ್ 2022, 13:18 IST
ಅಕ್ಷರ ಗಾತ್ರ

ಮೈಸೂರು: ರಾಜ್ಯಸಭೆ ಚುನಾವಣೆ ಮುಗಿಸಿ ನಿರಾಳರಾಗಿರುವ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಗರದ ಕಲಾಮಂದಿರದಲ್ಲಿ ಮೈಸೂರು ವಕೀಲರ ಸಂಘದವರು ಶನಿವಾರ ಅಭಿನಯಿಸಿದ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನಿಂದ ಆಗಮಿಸಿದ ಅವರು, ಪಕ್ಷದ ಮುಖಂಡರು, ವಕೀಲರು ಹಾಗೂ ಬೆಂಬಲಿಗರೊಂದಿಗೆ ವಕೀಲರು ಅಭಿನಯಿಸಿದ ಕೆಲವು ದೃಶ್ಯಗಳನ್ನು ವೀಕ್ಷಿಸಿ ಖುಷಿಪಟ್ಟರು. ನಾಟಕದ ಮಧ್ಯೆ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘದವರಿಂದ ಸನ್ಮಾನವನ್ನೂ ಸ್ವೀಕರಿಸಿದರು. ಸಂಘಟಕರು ಹಾಗೂ ಪ್ರೇಕ್ಷಕರಲ್ಲಿ ಕೆಲವರು ಹಲವು ಬಾರಿ ಕೋರಿದರೂ ಭಾಷಣ ಮಾಡಲಿಲ್ಲ. ಸನ್ಮಾನದ ಬಳಿಕವೂ ಕೆಲ ಸಮಯ ನಾಟಕ ವೀಕ್ಷಿಸಿದರು. ಮೈಸೂರು ವಕೀಲರ ಸಂಘದ ಆಜೀವ ಸದಸ್ಯರೂ ಆವರಾಗಿದ್ದಾರೆ.

‘ವಕೀಲರ ಸಂಘದವರು ನಾಟಕ ವೀಕ್ಷಿಸುವಂತೆ ಆಹ್ವಾನ ನೀಡಿದ್ದರು. ಆದ್ದರಿಂದ ಬಂದಿದ್ದೆ. ನಾಟಕ ನೋಡಿ ಖುಷಿಯಾಯಿತು. ಹಿಂದೆ ವಕೀಲಿ ಮಾಡುತ್ತಿದ್ದಾಗ ಹಲವು ಕಡೆಗಳಿಗೆ ಹೋಗಿ ನಾಟಕ ನೋಡುತ್ತಿದ್ದೆ. ಕಾನೂನು ಪದವಿ ಓದುವಾಗಲೂ ನಾಟಕದಲ್ಲಿ ಅಭಿನಯಿಸಿದ್ದೆ. ‘ಯಮಧರ್ಮರಾಯನ ಸನ್ನಿಧಿ’ ಎನ್ನುವ ನಾಟಕದಲ್ಲಿ ವೈದ್ಯನ ಪಾತ್ರ ಮಾಡಿದ್ದೆ. ಅದಕ್ಕಾಗಿಯೇ ನಾನು ಡಾಕ್ಟರ್ ಆಗಲಿಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದರಿಂದಲೇ ರಾಜಕುಮಾರ್, ಎನ್.ಟಿ. ರಾಮರಾವ್‌ ಮೊದಲಾದವರು ದೊಡ್ಡ ಕಲಾವಿದರಾದರು. ಅಂತಹ ನಾಟಕಗಳಲ್ಲಿ ಅಭಿನಯಿಸುವುದು ಮತ್ತು ನೋಡುವ ಆಸಕ್ತಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಪ್ರೇಕ್ಷಕರಲ್ಲಿ ಆಸಕ್ತಿ ಕೆರಳಿಸುವಂತೆ ನಾಟಕ ಮಾಡಬೇಕು. ವಕೀಲರ ಸಂಘದವರು ಚೆನ್ನಾಸಗಿ ಅಭ್ಯಾಸ ಮಾಡಿ ನಾಟಕ ಪ್ರದರ್ಶಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮುಖಂಡರಾದ ಡಾ.ಎಚ್.ಸಿ. ಮಹಾದೇವಪ್ಪ, ಎಂ.ಕೆ. ಸೋಮಶೇಖರ್, ಕೆ. ಮರಿಗೌಡ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಅಮರನಾಥ್ ಇದ್ದರು.

ನಾಟಕವನ್ನು ಬೆಳಿಗ್ಗೆ ಶಾಸಕ ಜಿ.ಟಿ. ದೇವೇಗೌಡ ಉದ್ಘಾಟಿಸಿದರು. ಪೌರಾಣಿಕ ನಾಟಕದ ಹಾಡು, ಡೈಲಾಗ್‌ ಹೇಳಿ ಸಭಿಕರನ್ನು ರಂಜಿಸಿದರು. ‘ನಾನೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ’ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಲ್. ರಘುನಾಥ್, ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಮತ್ತು ಅವರ ಕುಟುಂಬದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT