ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು: ಮುಗಿಲಿನತ್ತ ರೈತರ ಚಿತ್ತ

ಹುರುಳಿ, ಅವರೆ, ಮುಸುಕಿನ ಜೋಳ, ರಾಗಿ ಬಿತ್ತನೆ: ಆರಂಭದಲ್ಲೇ ಮಳೆ ಕೊರತೆ
Last Updated 30 ಸೆಪ್ಟೆಂಬರ್ 2021, 4:09 IST
ಅಕ್ಷರ ಗಾತ್ರ

ಮೈಸೂರು: ಅಕ್ಟೋಬರ್‌ನಿಂದ ಹಿಂಗಾರು ಹಂಗಾಮು ಆರಂಭವಾಗಲಿದ್ದು, ಮಳೆಯ ಕೊರತೆ ಜಿಲ್ಲೆಯ ರೈತರನ್ನು ಕಾಡುತ್ತಿದೆ.

ಗೌರಿ–ಗಣೇಶ ಹಬ್ಬದಿಂದಲೂ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಮಳೆಯಾಗಿಲ್ಲ. ಉತ್ತರಾ ಮಳೆ ಸುರಿಯದೆ, ಬಿತ್ತಿದ್ದ ಬೆಳೆ ಬಾಡುತ್ತಿವೆ. ಹಿಂಗಾರು ಬಿತ್ತನೆಗೂ ಪೂರಕ ವಾತಾವರ
ಣವಿಲ್ಲ. ಸೆ.27ರಿಂದ ‘ಹಸ್ತಾ’ ಮಳೆ ನಕ್ಷತ್ರ ಶುರುವಾಗಿದ್ದು, ಕಪ್ಪು ಮೋಡಗಳು ದಟ್ಟೈಸಿದರೂ ಪ್ರಯೋಜನವಾಗಿಲ್ಲ.

ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆ ಕಡಿಮೆ. ಪೂರ್ವ ಮುಂಗಾರು, ಮುಂಗಾರು ಹಂಗಾಮಿನಲ್ಲೇ ಚುರುಕಿರುತ್ತವೆ. ಇದೀಗ 1 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಭತ್ತದ ಬೆಳೆಯಿದೆ.

ಮುಂಗಾರಿನಲ್ಲಿ ಹೆಸರು, ಉದ್ದು, ಸೂರ್ಯಕಾಂತಿ, ಜೋಳ, ತಂಬಾಕು ಬೆಳೆಯುವ ರೈತರು ಫಸಲನ್ನು ಪಡೆದ ಬಳಿಕ ಹಿಂಗಾರಿನಲ್ಲಿ ಅದೇ ಜಮೀನಿನಲ್ಲಿ ಹುರುಳಿ, ರಾಗಿ, ಮುಸುಕಿನ ಜೋಳವನ್ನು ಬಿತ್ತುತ್ತಾರೆ. ‘ಜಿಲ್ಲೆಯಾದ್ಯಂತ ಹಿಂಗಾರು ಬೆಳೆಗಳ ವಿಸ್ತೀರ್ಣ 60 ಸಾವಿರ ಹೆಕ್ಟೇರ್‌ನಷ್ಟಿರಲಿದೆ’ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಮುಂಗಾರಿನ ಫಸಲು ಪಡೆದ ರೈತರು, ಮಳೆ ಸುರಿದಾಗ ಹಿಂಗಾರು ಬಿತ್ತನೆಗಾಗಿಯೇ ಜಮೀನು ಹದಗೊಳಿಸುತ್ತಾರೆ. ಮಳೆಯಾದಾಗ ಬಿತ್ತನೆ ನಡೆಸುತ್ತಾರೆ. ಈ ಬಾರಿ ಹಲವರು ಸೆಪ್ಟೆಂಬರ್‌ನಲ್ಲೇ ಬಿತ್ತಿದ್ದಾರೆ.

ಹುರುಳಿಗೂ ಮಳೆಯಿಲ್ಲ: ‘ಗೌರಿ ಹಬ್ಬದ ಹಿಂದೆ ಮಳೆ ಸುರಿದಾಗ 2 ಎಕರೆಯಲ್ಲಿ ಹುರುಳಿ ಬಿತ್ತಿದ್ದೆ. ಬಿಸಿಲು ಕಾದರೂ ಉತ್ತರೆ ಮಳೆ ಸುರಿಯಲಿಲ್ಲ. ಮೊಳಕೆಯೊಡೆದಿದ್ದ ಹುರುಳಿ ಭೂಮಿಯಲ್ಲೇ ಉರಿದು ಹೋಗುತ್ತಿದೆ’ ಎಂದು ನಂಜನ
ಗೂಡು ತಾಲ್ಲೂಕಿನ ಕೃಷ್ಣಾಪುರದ ರೈತ ನಂಜುಂಡಸ್ವಾಮಿ ‘ಪ್ರಜಾವಾಣಿ’ ಯೊಂದಿಗೆ ಅಳಲು ತೋಡಿಕೊಂಡರು.

‘ಉಳಿದ ಜಮೀನಿನಲ್ಲೂ ಬಿತ್ತನೆಯ ಸಿದ್ಧತೆ ನಡೆಸಿದ್ದೆ. ಮಹಾನವಮಿ ಒಳಗೆ ಮಳೆಯಾದರೆ ಬಿತ್ತಬಹುದು. ಇಲ್ಲದಿದ್ದರೆ ಈ ವರ್ಷದ ಹಿಂಗಾರನ್ನು ಮರೆತಂತೆ’ ಎಂದು ವಿಷಾದಿಸಿದರು.

‘ನಮ್ಮ ಭಾಗದಲ್ಲೂ ಮಳೆಯಿಲ್ಲ. ನೀರಾವರಿ ಆಶ್ರಯದವರು ರಾಗಿ, ಮುಸುಕಿನ ಜೋಳ ಬಿತ್ತಿದ್ದಾರೆ. ಮಳೆ ನಂಬಿಕೊಂಡು ಎರಡನೇ ಬೆಳೆ ಬೆಳೆಯುವ ವಿಶ್ವಾಸ ಯಾರೊಬ್ಬರಲ್ಲೂ ಇಲ್ಲ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಕುಂದನಹಳ್ಳಿಯ ನಾಗೇಶ್ ಹೇಳಿದರು.

‘ನಾಲ್ಕು ಎಕರೆಯಲ್ಲಿ ದೊಡ್ಡ ಅವರೆ, ಎರಡು ಎಕರೆಯಲ್ಲಿ ಮೂರು ತಿಂಗಳ ಅವರೆ ಬಿತ್ತಿದ್ದು, ಸಕಾಲಕ್ಕೆ ಮಳೆಯಾಗದೆ ಬೆಳವಣಿಗೆಯಾಗಿಲ್ಲ. ಇಳುವರಿಗೂ ಇದು ಹೊಡೆತ ನೀಡಲಿದೆ’ ಎಂದು ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆಯ ಯುವ ರೈತ ಸಚಿನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT