ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ಧರ್ಮದ ಅನುಸಾರ ಶ್ರೀನಿವಾಸ ಪ್ರಸಾದ್‌ ಅಂತ್ಯಕ್ರಿಯೆ

ಸರ್ಕಾರಿ ಗೌರವ ಸಲ್ಲಿಕೆ l ದರ್ಶನಕ್ಕೆ ಹರಿದು ಬಂದ ಅಭಿಮಾನಿಗಳು
Published 30 ಏಪ್ರಿಲ್ 2024, 19:07 IST
Last Updated 30 ಏಪ್ರಿಲ್ 2024, 19:07 IST
ಅಕ್ಷರ ಗಾತ್ರ

ಮೈಸೂರು: ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಇಲ್ಲಿನ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್‌ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಆವರಣದಲ್ಲಿ ಬೌದ್ಧ ಧರ್ಮದ ವಿಧಾನದಂತೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

ಥೇರಾ ಮಹಾಬೋಧಿ ಸಂಸ್ಥೆಯ ಆನಂದ್‌ ಭಂತೇಜಿ ನೇತೃತ್ವದಲ್ಲಿ 20 ಬಿಕ್ಕುಗಳು ಬೌದ್ಧ ಧರ್ಮದ ವಿಧಾನಗಳನ್ನು ನೆರವೇರಿಸಿದರು. ‍‍ನಂತರ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಈ ವೇಳೆ ಪೊಲೀಸ್ ಬ್ಯಾಂಡ್‌ ರಾಷ್ಟ್ರಗೀತೆ ನುಡಿಸಿತು.

ಇದಕ್ಕೂ ಮುನ್ನ ಪ್ರಸಾದ್ ಹುಟ್ಟಿದ ಅಶೋಕ‍ಪುರಂನಲ್ಲಿ ಅಂತಿಮ ಯಾತ್ರೆ ನಡೆಯಿತು. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಭಾಗದಿಂದ ಹರಿದು ಬಂದ ಸಾವಿರಾರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿ, ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಒಡನಾಡಿ ಪಿಜಿಆರ್‌ ಸಿಂಧ್ಯ, ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಡಾ.ಸಿ.ಎನ್‌.ಮಂಜುನಾಥ್, ಶಾಸಕ ನರೇಂದ್ರಸ್ವಾಮಿ ಅಂತಿಮ ನಮನ ಸಲ್ಲಿಸಿದರು. ಬಳಿಕ ನಡೆದ ಮೆರವಣಿಗೆಯಲ್ಲಿ ಜನರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮನೋರಕ್ಖಿತ ಭಂತೇಜಿ, ಕಲ್ಯಾಣಸಿರಿ ಭಂತೇಜಿ, ಬೋಧಿದತ್ತ ಭಂತೇಜಿ, ನಾಗರತ್ನ ಭಂತೇಜಿ, ಬೋಧಿ ರತ್ನ ಭಂತೇಜಿ, ಸಮನರಿಯ ಭಂತೇಜಿ, ಧರ್ಮಚಾರಿಗಳಾದ ಪುಟ್ಟಸ್ವಾಮಿ, ಬಸವರಾಜು ಹಾಗೂ 20 ಉಪಾಸಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಂಸದ ಪ್ರತಾಪ ಸಿಂಹ, ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್‌‍ ಆಯುಕ್ತ ರಮೇಶ್‌ ಬಾನೋತ್, ಡಿಸಿಪಿ ಜಾಹ್ನವಿ, ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಮಹೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT