ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದಿಂದ ಸಮೀಕ್ಷೆ

Published 9 ಫೆಬ್ರುವರಿ 2024, 6:44 IST
Last Updated 9 ಫೆಬ್ರುವರಿ 2024, 6:44 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಬುಡಕಟ್ಟು ಸಂಶೋಧನಾ ಸಂಸ್ಥೆ (ಟಿಆರ್‌ಐ)ಯ ಘಟಕವಾದ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದಿಂದ ‘ಕರ್ನಾಟಕದ ನೈಜ ದುರ್ಬಲ ಬುಡಕಟ್ಟುಗಳು ಹಾಗೂ ಅರಣ್ಯಾಧಾರಿತ ಮೂಲ ಆದಿವಾಸಿ ಸಮುದಾಯಗಳ ತಳಮಟ್ಟದ ಅಧ್ಯಯನ ಸಮೀಕ್ಷೆ’ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರವು ಬುಡಕಟ್ಟು ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ– ಜನ್‌ಮನ್) ಕಾರ್ಯಕ್ರಮ ಜಾರಿಗೊಳಿಸಿದೆ. ಮುಂದಿನ ಮೂರು ವರ್ಷಗಳಲ್ಲಿ 18 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿರುವ ಪಿವಿಟಿಜಿ (ನೈಜ ದುರ್ಬಲ ಬುಡಕಟ್ಟು ಸಮುದಾಯಗಳು) ಸಮುದಾಯಗಳ ಜೀವನ ಸುಧಾರಣೆಗಾಗಿ 11 ನಿರ್ಣಾಯಕ ಮೂಲ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ₹ 24ಸಾವಿರ ಕೋಟಿ ಅನುದಾನ ಮೀಸಲಿರಿಸಿದೆ. ಹೀಗಾಗಿ, ದತ್ತಾಂಶ ಸಂಗ್ರಹಕ್ಕಾಗಿ ರಾಜ್ಯದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅವರ ಸೂಚನೆಯ ಮೇರೆಗೆ ಸಮೀಕ್ಷೆ ಆರಂಭಿಸಲಾಗಿದೆ.

ಸದ್ಯ ವಾಸ್ತವ ಮಾಹಿತಿ ಲಭ್ಯವಿಲ್ಲದ ಕಾರಣ ಸಮೀಕ್ಷೆ ಕೈಗೊಳ್ಳಲಾಗಿದೆ. ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಕೃಷ್ಣಮೂರ್ತಿ ಕೆ.ವಿ. ನೇತೃತ್ವದಲ್ಲಿ ಜ.8ರಿಂದ ಪ್ರಕ್ರಿಯೆ ನಡೆಯುತ್ತಿದ್ದು, ಮೂಲ ಆದಿವಾಸಿ ಸಮುದಾಯದವರೇ ಆದ 26 ಯುವಕ–ಯುವತಿಯರನ್ನು ಬಳಸಿಕೊಳ್ಳಲಾಗುತ್ತಿದೆ.

ವಿವಿಧ ಜಿಲ್ಲೆಗಳಲ್ಲಿ: ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ನೈಜ ದುರ್ಬಲ ಬುಡಕಟ್ಟುಗಳಾದ ಕೊರಗ ಮತ್ತು ಜೇನುಕುರುಬ ಹಾಗೂ ಅರಣ್ಯಾಧಾರಿತ ಮೂಲ ಆದಿವಾಸಿ ಸಮುದಾಯಗಳಾದ ಇರುಳಿಗ, ಸೋಲಿಗ, ಯರವ, ಪಣಿಯ, ಕುಡಿಯ, ಹಸಲರು, ಗೌಡಲು, ಬೆಟ್ಟಕುರುಬ, ಮಲೆಕುಡಿಯ ಮತ್ತು ಸಿದ್ಧಿ ಬುಡಕಟ್ಟು ಸಮುದಾಯಗಳ ಸ್ಥಿತಿಗತಿ ಸಮೀಕ್ಷೆ ನಡೆಸಲಾಗುತ್ತಿದೆ. ಈವರೆಗೆ 250ಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆ ಮುಗಿದಿದೆ.

ಆಧಾರ್‌, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬ್ಯಾಂಕ್ ಖಾತೆ, ಆಯುಷ್ಮಾನ್ ಕಾರ್ಡ್, ಪಿಎಂ ಕಿಸಾನ್‌ ಸಮ್ಮಾನ್‌ ಕಾರ್ಡ್, ಕಿಸಾನ್‌ ಕ್ರೆಡಿಟ್ ಕಾರ್ಡ್ ಮೊದಲಾದವು ಇಲ್ಲದವರನ್ನು ಗುರುತಿಸಿ ದಾಖಲೀಕರಣ ಮಾಡಿಕೊಳ್ಳಲಾಗುತ್ತಿದೆ.

‘ಮನೆ, ನಿವೇಶನ ಇಲ್ಲದಿರುವ ಬಗ್ಗೆ ಸಮೀಕ್ಷೆಯಲ್ಲಿ ದಾಖಲಿಸಲಾಗುತ್ತಿದೆ. ಮನೆ ಇಲ್ಲದಿರುವವರು ನೋಂದಾಯಿಸಿದ್ದರೆ ಬ್ಯಾಂಕ್ ಖಾತೆಗೆ ₹ 12ಸಾವಿರ ಜಮೆಯಾಗಿದೆ. ಪಿಡಿಒ ಹಾಗೂ ಫಲಾನುಭವಿಗಳ ಜಂಟಿ ಖಾತೆಗೆ ಹಣ ಬಂದಿರುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಶೈಕ್ಷಣಿಕ ಮಾಹಿತಿಯನ್ನೂ ಪಡೆಯಲಾಗುತ್ತಿದೆ. ದಾಖಲೆಗಳು ಸಿಗದವರನ್ನು ಗುರುತಿಸಿ ಮಾಹಿತಿ ನೀಡಿರುವುದರಿಂದ ಅಧಿಕಾರಿಗಳು ಶಿಬಿರ ನಡೆಸಿ ಒದಗಿಸುತ್ತಿದ್ದಾರೆ’ ಎಂದು ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಕೃಷ್ಣಮೂರ್ತಿ ಕೆ.ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

ನಮ್ಮ ಸಮೀಕ್ಷೆಯ ವರದಿಯು ಸರ್ಕಾರಕ್ಕೆ ಪ್ರಮುಖ ದಾಖಲೆಯಾಗಿದೆ. ಸಮಾಜದ ಅಂಚಿನಲ್ಲಿರುವ ಬುಡಕಟ್ಟು ಜನರ ಸ್ಥಿತಿಗತಿ ತಿಳಿದುಬರಲಿದೆ
- ಕೃಷ್ಣಮೂರ್ತಿ ಕೆ.ವಿ. , ಸಂಶೋಧನಾಧಿಕಾರಿ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರ ಮೈಸೂರು

ವರದಿ ಸಲ್ಲಿಸಲು 3 ತಿಂಗಳು ಸಮಯಾವಕಾಶ

‘ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಇದಕ್ಕಾಗಿ 3 ತಿಂಗಳು ಸಮಯ ನೀಡಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿರುವವರಿಗೆ ದಿನಕ್ಕೆ ₹ 1500 ಕೊಡಲಾಗುವುದು. ಯುವತಿಯರೂ ಈ ಕೆಲಸದಲ್ಲಿ ಭಾಗವಹಿಸುತ್ತಿದ್ದಾರೆ’ ಎನ್ನುತ್ತಾರೆ ಕೃಷ್ಣಮೂರ್ತಿ. ‘ನಮಗೆ ಒಗ್ಗುವ ಆಹಾರ ಕೊಡಬೇಕು. ನಮ್ಮ ಮಕ್ಕಳಿಗೆ 12ನೇ ತರಗತಿವರೆಗೂ ಒಂದೇ ಆಶ್ರಮ ಶಾಲೆಯಲ್ಲೇ ಶಿಕ್ಷಣ ಸಿಗುವಂತಾಗಬೇಕು ಎನ್ನುವುದು ಅವರ ಕೋರಿಕೆಯಾಗಿದೆ. ಇದೆಲ್ಲವನ್ನೂ ಸರ್ಕಾರದ ಗಮನಕ್ಕೆ ತರಲಾಗುವುದು. ಕೇಂದ್ರದಿಂದ ಅನುದಾನ ಪಡೆಯಲೂ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT