ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣದಿಂದ ಆಯೋಜನೆ; ದಸರೆಯಲ್ಲಿ 10 ನಾಟಕ ಪ್ರದರ್ಶನ

‘ಭಾರತೀಯ ರಂಗಸಂಗೀತೋತ್ಸವ’ 19ರಿಂದ
Last Updated 14 ಸೆಪ್ಟೆಂಬರ್ 2022, 13:19 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ರಂಗಭೀಷ್ಮ ಬಿ.ವಿ.ಕಾರಂತರ ಜನ್ಮೋತ್ಸವದ ಅಂಗವಾಗಿ ಸೆ.19ರಿಂದ 23ರವರೆಗೆ ‘ಭಾರತೀಯ ರಂಗಸಂಗೀತೋತ್ಸವ’ ಆಯೋಜಿಸಲಾಗಿದೆ’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

‘ಭಾರತೀಯ ರಂಗ ಸಂಗೀತಕ್ಕೆ ಕಾರಂತರು ನೀಡಿದ ಕೊಡುಗೆ ಅಪಾರವಾದುದು. ಅವರ ಜನ್ಮದಿನವಾದ ಸೆ.19ನ್ನು ಭಾರತೀಯ ರಂಗ ಸಂಗೀತ ದಿನವೆಂದು ಘೋಷಿಸಿ ಎರಡು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಅವರ ನೆನಪಿನಲ್ಲಿ ‘ಭಾರತೀಯ ರಂಗಸಂಗೀತೋತ್ಸವ’ ನಡೆಸಲಾಗುತ್ತಿದೆ. ನಿತ್ಯ ಸಂಜೆ 6.30ಕ್ಕೆ ಕಾರ್ಯಕ್ರಮ ನಡೆಯಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

‘ಸೆ.19ರಂದು ಸಂಜೆ 6ಕ್ಕೆ ಮುಂಬೈನ ರಂಗ ಸಂಗೀತ ನಿರ್ದೇಶಕ ಅಮೋದ್‌ ಭಟ್‌ ಉದ್ಘಾಟಿಸಲಿದ್ದಾರೆ. ನಟ ಅರುಣ್‌ ಸಾಗರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 20ರಂದು ಶ್ರೀನಿವಾಸ ಭಟ್ (ಚೀನಿ), 21ರಂದು ವೃತ್ತಿರಂಗಭೂಮಿ ಸಂಗೀತ ನಿರ್ದೇಶಕ ವೈ.ಎಂ.ಪುಟ್ಟಣ್ಣಯ್ಯ, 22ರಂದು ಕೇರಳದ ಸೋಪಾನಂ ಪ್ರದರ್ಶಕ ಕಲೆಗಳ ಕೇಂದ್ರದ ಸಂಗೀತ ನಿರ್ದೇಶಕಿ ಕಲ್ಯಾಣಿ ಕಾರ್ಯಕ್ರಮ ನೀಡಲಿದ್ದಾರೆ’ ಎಂದು ಹೇಳಿದರು.

‘ಸೆ.23ರಂದು ಮಧ್ಯಾಹ್ನ 3.30ಕ್ಕೆ ‘ಕಾರಂತರ ನೆನಪಿನಲ್ಲಿ...’ ವಿಚಾರಸಂಕಿರಣ ನಡೆಯಲಿದೆ. ಉಡುಪಿಯ ರಂಗನಿರ್ದೇಶಕ ಗುರುಪಾದ ಮಾರ್ಪಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ‘ರಂಗಭೂಮಿಯ ಆಸ್ತಿ ಬಿ.ವಿ.ಕಾರಂತ’ ಬಗ್ಗೆ ವಿಮರ್ಶಕ ನಾರಾಯಣ ರಾಯಚೂರ್ ಮತ್ತು ‘ಗಡಿಯಾಚೆ ಕಾರಂತ ರಂಗ ಚಳವಳಿ’ ವಿಷಯದ ಕುರಿತು ಕಾಸರಗೋಡಿನ ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಲಿದ್ದಾರೆ’ ಎಂದು ತಿಳಿಸಿದರು.

‘ಸೆ.24ರಂದು ರಂಗಾಯಣದ ರೆಪರ್ಟರಿ ತಂಡದವರು ಬಿ.ವಿ.ಕಾರಂತ ಸಂಗೀತ ನಿರ್ದೇಶನದ ‘ಮೂಕನ ಮಕ್ಕಳು’ ನಾಟಕ ಪ್ರಸ್ತುತಪಡಿಸಲಿದ್ದಾರೆ’ ಎಂದರು.

ದಸರಾ ರಂಗೋತ್ಸವ:

‘ನಾಡಹಬ್ಬದ ಅಂಗವಾಗಿ, ಮೈಸೂರಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಕೃಷ್ಣರಾಜೇಂದ್ರ ಒಡೆಯರ್‌ ನೆನಪಿನಲ್ಲಿ ಸೆ.25ರಿಂದ ಅ.4ರವರೆಗೆ ‘ದಸರಾ ರಂಗೋತ್ಸವ–2022’ ಆಯೋಜಿಸಲಾಗಿದೆ. ಯುವ ನಿರ್ದೇಶಕರ ನಾಟಕಗಳಿಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ’ ಎಂದು ಅಡ್ಡಂಡ ಹೇಳಿದರು.

‘ರಂಗಾಯಣದಿಂದ ಹವ್ಯಾಸಿ ಕಲಾವಿದರಿಗಾಗಿ ಸುಬ್ಬಯ್ಯನಾಯ್ಡು ಹಾಗೂ ನಾಗರತ್ನಮ್ಮ ಹೆಸರಿನಲ್ಲಿ ಅಲ್ಪಾವಧಿಯ ಅಭಿನಯ ರಂಗ ತರಬೇತಿ ಶಿಬಿರವನ್ನು ಅ.5ರಿಂದ ಆರಂಭಿಸಲಾಗುವುದು. 18ರಿಂದ 40 ವರ್ಷ ವಯಸ್ಸಿನವರಿಗೆ 45 ದಿನಗಳ ತರಬೇತಿ ನೀಡಲಾಗುವುದು. ತರಗತಿಗಳನ್ನು ಸಂಜೆ 5ರಿಂದ ರಾತ್ರಿ 8ರವರೆಗೆ ನಡೆಸಲಾಗುವುದು. ನಾಟಕ ಸಿದ್ಧ‍ಪಡಿಸಿ ಪ್ರದರ್ಶಿಸಲಾಗುವುದು. ಪೂರ್ಣಗೊಳಿಸಿದವರಿಗೆ ಅಧಿಕೃತ ಪ್ರಮಾಣಪತ್ರ ನೀಡಲಾಗುವುದು’ ಎಂದು ತಿಳಿಸಿದರು.

ಉಪನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು.

ದಸರಾ ರಂಗೋತ್ಸವದ ವಿವರ

(ನಿತ್ಯ ಸಂಜೆ 6.30ಕ್ಕೆ, ಭೂಮಿಗೀತ ರಂಗಮಂದಿರದಲ್ಲಿ)

ದಿನಾಂಕ;ನಾಟಕ;ನಿರ್ದೇಶನ;ತಂಡ

ಸೆ.25; ಕೃಷ್ಣೇಗೌಡನ ಆನೆ;ಆರ್.ನಾಗೇಶ್;ರಂಗಾಯಣ ರೆಪರ್ಟರಿ

ಸೆ.26;ಸಮರಕಥಾ;ನಂದಕುಮಾರ್‌ ಜಿ.ಕೆ.;ರಂಗಾಯಣದ ಭಾರತೀಯ ರಂಗ ವಿದ್ಯಾಲಯ

ಸೆ.27;ಪೊಲೀಸರಿದ್ದಾರೆ ಎಚ್ಚರಿಕೆ;ನಾಗಾರ್ಜುನ ಆರಾಧ್ಯ; ಮೈಸೂರಿನ ಆಯಾಮ ತಂಡ

ಸೆ.28;ಮಾಧವಿ;ಶ್ರೀಪಾದ ಭಟ್;ಕೈವಲ್ಯ ಕಲಾ ತಂಡ

ಸೆ.29;ದಟ್ಸ್ ಆಲ್ ಯುವರ್ ಆನರ್;ಶಶಿರಾಜ್‌ ಕಾವೂರ್;ಮಂಗಳೂರಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ

ಸೆ.30;ಈ ಕೆಳಗಿನವರು;ವೀಣಾ ಶರ್ಮ ಭೂಸನೂರಮಠ;ಬೆಂಗಳೂರಿನ ಎನ್‌ಎಸ್‌ಡಿ

ಅ.1;ಮಾರೀಚನ ಬಂಧುಗಳು;ವಾಲ್ಟರ್‌ ಡಿಸೋಜಾ;ಬೆಂಗಳೂರಿನ ಸ್ನೇಹ ರಂಗ

ಅ.2;ಹಲಗಲಿ ಸಮರ;ಅಡ್ಡಂಡ ಸಿ.ಕಾರ್ಯಪ್ಪ;ರಂಗಾಯಣ ರೆಪರ್ಟರಿ

ಅ.3;ವಿಶಾಂಕೇ;ಮಂಜುನಾಥ ಎಲ್.ಬಡಿಗೇರ;ಉಡುಪಿ ರಂಗಭೂಮಿ

ಅ.4;ಮಮತೆಯ ಸುಳಿ;ಗಣೇಶ ಮಂದಾರ್ತಿ;ಮಂಗಳೂರಿನ ಕಲಾಭಿ ಥಿಯೇಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT