ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಂಟ್‌ ಮೇರಿಸ್‌ ಚರ್ಚ್‌ ದಾಳಿ ಪ್ರಕರಣ: ಆರೋಪಿಯ ಸುಳಿವಿತ್ತ ಕೈಗವಸು

ಪಿರಿಯಾಪಟ್ಟಣ: ಸೇಂಟ್‌ ಮೇರಿಸ್‌ ಚರ್ಚ್‌ ದಾಳಿ ಪ್ರಕರಣ
Last Updated 2 ಜನವರಿ 2023, 15:24 IST
ಅಕ್ಷರ ಗಾತ್ರ

ಮೈಸೂರು: ಚರ್ಚ್‌ನ ಹುಂಡಿಯಲ್ಲಿದ್ದ ಹಣ ಕಳವು ಮಾಡಿ ಆರಾಮವಾಗಿ ಓಡಾಡಿಕೊಂಡಿದ್ದ ಆರೋಪಿಗೆ ಕೃತ್ಯಕ್ಕೆ ಬಳಸಿದ್ದ ನೀಲಿಬಣ್ಣದ ಕೈಗವಸು ಜೈಲು ಸೇರುವಂತೆ ಮಾಡಿದೆ.

ಪಿರಿಯಾಪಟ್ಟಣದ ಸೇಂಟ್‌ ಮೇರಿಸ್‌ ಚರ್ಚ್‌ ಮೇಲೆ ಡಿ.27ರಂದು ನಡೆದಿದ್ದ ದಾಳಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಪಿರಿಯಾಪಟ್ಟಣ ಮಹದೇಶ್ವರ ಬಡಾವಣೆಯ ವಿಶ್ವ (24) ಎನ್ನುವವರನ್ನು ಬಂಧಿಸಲಾಗಿದೆ.

ಘಟನೆ ನಡೆದ ಜಾಗದಿಂದ ಸಮೀಪದಲ್ಲಿ ಪೌರಕಾರ್ಮಿಕರು ಬಳಸುವ ನೀಲಿ ಬಣ್ಣದ ಗ್ಲೌಸ್‌ ಪತ್ತೆಯಾಗಿತ್ತು. ಇದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಸ್ಥಳೀಯರೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಶಂಕೆ ಬಂದಿತ್ತು. ಚರ್ಚ್‌ನಿಂದ 500 ಮೀಟರ್‌ ದೂರದಲ್ಲಿರುವ ಪೌರಕಾರ್ಮಿಕರ ಕಾಲೊನಿಗೆ ತೆರಳಿ ಮಾಹಿತಿ ಕಲೆಹಾಕಿದ್ದರು.

‘ವಿಶ್ವನನ್ನು ವಿಚಾರಣೆಗೆ ಒಳಪಡಿಸಿದಾಗ, ಹಣ ಕಳವು ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ’ ಎಂದು ಎಸ್ಪಿ ಸೀಮಾ ಲಾಟ್ಕರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಚರ್ಚ್‌ನಲ್ಲಿ ಕೆಲಸ ಮಾಡಿದ್ದರೂ ಆಗಿನ ಪಾದ್ರಿ ವೇತನ ನೀಡಿರಲಿಲ್ಲ. ಹಣಕ್ಕಾಗಿ ಬಂದು ವಿಚಾರಿಸುತ್ತಿದ್ದ. ಈ ಮಧ್ಯೆ ಪಾದ್ರಿ ವರ್ಗಾವಣೆಯಾಗಿದ್ದರು. ಚರ್ಚ್‌ನ ಸಂಪೂರ್ಣ ಮಾಹಿತಿ ಅರಿತಿದ್ದ ಆತ ಹಿಂಬಾಗಿಲಿನಿಂದ ಒಳಪ್ರವೇಶಿಸಿ ಕೃತ್ಯ ಎಸಗಿದ್ದಾನೆ’ ಎಂದು ಹೇಳಿದರು.

ಕ್ರಿಸ್‌ಮಸ್‌ನಲ್ಲಿ ಭಾಗಿ: ‘ಕ್ರಿಸ್‌ಮಸ್‌ಗೆ ಹಿಂದಿನ ಪಾದ್ರಿ ಬಂದಿರಬಹುದು ಎಂದು ಆರೋಪಿ ಚರ್ಚ್‌ಗೆ ತೆರಳಿದ್ದ. ಆದರೆ, ಆಗಿರಲಿಲ್ಲ. ಡಿ.27ರಂದು ಚರ್ಚ್‌ ಪ್ರವೇಶಿಸಿದ್ದ. ಹಣಕ್ಕಾಗಿ ಹುಡುಕಾಡುವಾಗ ಬಾಲಯೇಸು ಮೂರ್ತಿ ಬಿದ್ದು ಹಾನಿಗೊಳಗಾಗಿದೆ’ ಎಂದು ವಿವರ ನೀಡಿದರು.

‌‘ಕದ್ದಿರುವ ಮೊತ್ತ ಗೊತ್ತಾಗಿಲ್ಲ. ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತ, ಗುಜರಿ ವಸ್ತುಗಳನ್ನು ಅಕ್ರಮವಾಗಿ ಮಾರಿದ್ದ ಕಾರಣದಿಂದ ಆ ಕೆಲಸದಿಂದಲೂ ಎರಡು ತಿಂಗಳ ಹಿಂದೆ ತೆಗೆದು ಹಾಕಲಾಗಿತ್ತು. ಚರ್ಚ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಇರದ ಕಾರಣ, ಆರೋಪಿಯನ್ನು ಪತ್ತೆ ಹಚ್ಚುವುದು ಸವಾಲಿನಿಂದ ಕೂಡಿತ್ತು’ ಎಂದರು.

ಎಎಸ್ಪಿ ಡಾ.ನಂದಿನಿ ಮಾರ್ಗದರ್ಶನದಲ್ಲಿ ಹುಣಸೂರು ಡಿವೈಎಸ್ಪಿ ಎಂ.ಕೆ.ಮಹೇಶ್‌ ನೇತೃತ್ವದಲ್ಲಿ ಪಿರಿಯಾಪಟ್ಟಣ ಠಾಣೆಯ ಇನ್‌ಸ್ಪೆಕ್ಟರ್‌ ಶೀಧರ, ಬೈಲಕುಪ್ಪೆ ಠಾಣೆಯ ಪ್ರಕಾಶ, ಹುಣಸೂರು ಗ್ರಾಮಾಂತರ ಠಾಣೆಯ ಸಿ.ವಿ.ರವಿ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಲಾಗಿತ್ತು. ಎಸ್‌ಐ ಬಸವರಾಜು, ಪ್ರಕಾಶ್‌ ಎತ್ತಿನಮನಿ, ಗೋವಿಂದ, ಸಿಬ್ಬಂದಿ ಲಿಂಗರಾಜಪ್ಪ, ಸತೀಶ್‌ ಕುಮಾರ್‌, ಅರುಣ್‌ಕುಮಾರ್‌, ಪ್ರಭಾಕರ, ಲತೀಫ್‌, ದೆವರಾಜು, ರವೀಶ, ಪ್ರಸಾದ್‌, ಇರ್ಫಾನ್‌, ಚೇತನ್‌ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT