ಮೈಸೂರು: ‘ದಲಿತರಿಗೆ ಭೂಮಿಯ ಹಕ್ಕನ್ನು ಮೊದಲು ನೀಡಿದ್ದು ಟಿಪ್ಪು ಸುಲ್ತಾನ್. ರಾಜ್ಯವಷ್ಟೇ ಅಲ್ಲದೇ ಆಳ್ವಿಕೆ ನಡೆಸಿದ ಕೇರಳ, ತಮಿಳುನಾಡು, ಆಂಧ್ರದಲ್ಲಿ ಎಲ್ಲ ದಲಿತರು ಭೂಮಿಯ ಮಾಲೀಕತ್ವವನ್ನು ಪಡೆದರು’ ಎಂದು ಬಸವಲಿಂಗ ಸ್ವಾಮೀಜಿ ಹೇಳಿದರು.
ಅಶೋಕರಸ್ತೆಯ ಮಿಲಾದ್ ಭಾಗ್‌ನಲ್ಲಿ ಹಜ್ರತ್ ಟಿಪ್ಪು ಸುಲ್ತಾನ್ ಶಹೀದ್ ವೆಲ್‌ಫೇರ್ ಮತ್ತು ಉರುಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ 230ನೇ ಗಂಧ ಉರುಸ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಟಿಪ್ಪು ಕರ್ನಾಟಕದ ಕೀರ್ತಿಯನ್ನು ಬೆಳಗಿದವರು. ನಂಜನಗೂಡಿಗೆ ಶ್ರೀಕಂಠೇಶ್ವರ ದೇಗುಲಕ್ಕೆ ಪಚ್ಚೆ ಲಿಂಗ ನೀಡಿದರು. ಶೃಂಗೇರಿಯನ್ನು ಮರಾಠರು ಲೂಟಿ ಮಾಡಿದಾಗ, ಅಲ್ಲಿನ ಸ್ವಾಮೀಜಿಗೆ ರಕ್ಷಣೆ ಕೊಟ್ಟದ್ದಲ್ಲದೆ, ಧನ ಕನಕ ನೀಡಿದರು. ಸೌಹಾರ್ದ ಪರಂಪರೆಯನ್ನು ಕಟ್ಟಿದ ಅವರನ್ನು ಕನ್ನಡಿಗರು ನಿತ್ಯ ಸ್ಮರಿಸಬೇಕು’ ಎಂದು ಹೇಳಿದರು.
‘ಚಿಕ್ಕ ಸಂಸ್ಥಾನವಾಗಿದ್ದ ಮೈಸೂರನ್ನು ವಿಸ್ತರಿಸಿದರು. ಕೃಷ್ಣಾ ನದಿಯಿಂದ ತಮಿಳುನಾಡಿನ ದಿಂಡಿಗಲ್‌ವರೆಗೆ ಸಾಮ್ರಾಜ್ಯ ಹಬ್ಬಿತ್ತು. ಮೈಸೂರು ಅರಸರ ಗೌರವಕ್ಕೆ ಅವರೆಂದೂ ಚ್ಯುತಿ ತರಲಿಲ್ಲ. ಆದರೆ, ಕೆಲ ಮೂರ್ಖರು ಅಜ್ಞಾನದಿಂದ ವಿರೋಧಿಸುತ್ತಿದ್ದಾರೆ. ಸರಿಯಾಗಿ ಇತಿಹಾಸ ಓದಿಕೊಳ್ಳಬೇಕು’ ಎಂದರು.
‘ಟಿಪ್ಪು ಕನ್ನಡ ವಿರೋಧಿಯಲ್ಲ. ಶೃಂಗೇರಿ ಮಠದೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿದ್ದ ಪತ್ರಗಳು ಲಭ್ಯವಿವೆ. ಅವುಗಳನ್ನು ಓದಿದರೆ ಟಿಪ್ಪು ಕನ್ನಡದ ಸುಪುತ್ರ ಎಂಬುದು ಅರಿವಾಗುತ್ತದೆ. ಅಬ್ದುಲ್ ಕಲಾಂ ಅವರು ತಮ್ಮ ಪುಸ್ತಕಗಳಲ್ಲಿ ಟಿಪ್ಪು ಹಾಗೂ ರಾಕೆಟ್ ತಂತ್ರಜ್ಞಾನವನ್ನು ಕೊಂಡಾಡಿದ್ದಾರೆ’ ಎಂದರು.
‘ಟಿಪ್ಪು’ ಗಂಧದ ಉರುಸ್; ಮೆರವಣಿಗೆ
ಮೈಸೂರು: ಅಶೋಕರಸ್ತೆಯ ಮಿಲಾದ್ ಭಾಗ್‌ನಲ್ಲಿ ಹಜ್ರತ್ ಟಿಪ್ಪು ಸುಲ್ತಾನ್ ಶಹೀದ್ ವೆಲ್‌ಫೇರ್ ಮತ್ತು ಉರುಸ್ ಸಮಿತಿ ವತಿಯಿಂದ ಟಿಪ್ಪು ಸುಲ್ತಾನ್ ಅವರ 230ನೇ ಗಂಧ ಉರುಸ್ ಆಚರಣೆ ಪ್ರಯುಕ್ತ ಮಂಗಳವಾರ ಸಂದಲ್ (ಗಂಧ) ಮೆರವಣಿಗೆ ನಡೆಯಿತು.
ಮೀನಾ ಬಜಾರ್‌ನ ಟಿಪ್ಪು ಹಾಲ್‌ನಲ್ಲಿ ಬೆಳಿಗ್ಗೆ ಅಹ್ಮದ್ ಷಾಹ ಖಾದ್ರಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಆ ಬಳಿಕ ಪವಿತ್ರ ಗಂಧವನ್ನು ಮೀಲಾದ್ ಬಾಗ್‌ಗೆ ತರಲಾಯಿತು. ಗೌರವಸಮರ್ಪಣೆ ಬಳಿಕ ಶಾಸಕ ತನ್ವೀರ್ ಸೇಠ್ ಗಂಧವನ್ನು ಹೊತ್ತು ಹೆಜ್ಜೆಹಾಕಿದರು.
ದಫ್ ಕಲಾವಿದರು, ಸೂಫಿ ಸಂತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಾರೋಟಿನಲ್ಲಿ ತನ್ವೀರ್ ಸೇಠ್ ಗಂಧವನ್ನು ತಲೆಯ ಮೇಲೆ ಹೊತ್ತು ಅಶೋಕ ರಸ್ತೆ, ಸೇಂಟ್ ಫಿಲೋಮಿನಾ ಚರ್ಚ್ ವೃತ್ತ, ಫೌಂಟೇನ್ ವೃತ್ತ, ಬಡಾಮಕಾನ್, ಟಿಪ್ಪು ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿದರು. ಅಲ್ಲಿಂದ ಪವಿತ್ರ ಗಂಧವನ್ನು ಲಾರಿಯಲ್ಲಿ ಶ್ರೀರಂಗಪಟ್ಟಣದ ದರಿಯಾ ದೌಲತ್ ಭಾಗ್‌ಗೆ ಕೊಂಡೊಯ್ಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.