ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ ಪತ್ನಿಗೆ ನೀಡಿದ್ದ 14 ನಿವೇಶನ ವಾಪಸ್‌ ಪಡೆಯಲು ಮನವಿ

Published 5 ಆಗಸ್ಟ್ 2024, 14:37 IST
Last Updated 5 ಆಗಸ್ಟ್ 2024, 14:37 IST
ಅಕ್ಷರ ಗಾತ್ರ

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಅವರಿಗೆ ನೀಡಿರುವ 14 ನಿವೇಶನಗಳನ್ನು ವಾಪಸ್ ಪಡೆಯಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಮುಡಾ ಆಯುಕ್ತ ರಘುನಂದನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಹಾಂ, 'ಮೈಸೂರಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464 ರಲ್ಲಿ 2001ರಲ್ಲಿಯೇ ಮುಡಾ ನಿವೇಶನಗಳನ್ನು ರಚಿಸಿ, ನಂತರದಲ್ಲಿ 19 ಫಲಾನುಭವಿಗಳಿಗೆ ಹಂಚಿದೆ. 2004ರಲ್ಲಿ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅದೇ ಜಮೀನನ್ನು ಖರೀದಿಸಿದ್ದಾರೆ. ಆ ಖರೀದಿಯೇ ಅಕ್ರಮವಾಗಿರುವುದರಿಂದ, ಅವರಿಗೆ ಬದಲಿ ನಿವೇಶನ ನೀಡಲು ಅವಕಾಶವೇ ಇಲ್ಲ. ಹೀಗಾಗಿ ಮುಡಾದಿಂದ ಹಂಚಿಕೆಯಾಗಿರುವ ನಿವೇಶನಗಳನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ ನೀಡುವ ಸಂಬಂಧ ನಡೆದಿದ್ದ ಮುಡಾ ಸಭೆಯಲ್ಲಿ ಅಂದಿನ ಶಾಸಕ ಡಾ. ಯತೀಂದ್ರ ಅವರೂ ಇದ್ದರು’ ಎಂದರು.

'ಮುಡಾ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಜೊತೆಗೆ ಚರ್ಚೆಗೆ ಸಿದ್ಧ. ಕಾಂಗ್ರೆಸ್‌ ನಾಯಕರು ಸಮಯ ಕೊಡಿಸುತ್ತಾರೆಯೇ’ ಎಂದು ಪ್ರಶ್ನಿಸಿದರು.

ತಮ್ಮನ್ನು ಬ್ಲಾಕ್‌ಮೇಲರ್ ಎಂದು ಕರೆದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ‘ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾಗ ಅದೇ ಸಿದ್ದರಾಮಯ್ಯ ಸದನದಲ್ಲೇ ನನ್ನ ಹೆಸರು ಹೇಳಿ ಬೆನ್ನು ತಟ್ಟಿದ್ದರು. ಈಗ ಬ್ಲಾಕ್ ಮೇಲರ್ ಆದೆನೇ' ಎಂದು ಪ್ರಶ್ನಿಸಿದರು.

‘ನನ್ನ ದೂರು ಆಧರಿಸಿ ರಾಜ್ಯಪಾಲರು ಮುಖ್ಯಮಂತ್ರಿಗೆ ನೋಟಿಸ್ ನೀಡಿದ್ದಾರೆ. ಪ್ರಾಸಿಕ್ಯುಶನ್‌ಗೆ ಅನುಮತಿ ಸಿಗುವ ನಿರೀಕ್ಷೆ ಇದೆ.  ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT