ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬೈಸಿಕಲ್‌ ದಿನಾಚರಣೆ ಇಂದು: ‘ಟ್ರಿಣ್‌ ಟ್ರಿಣ್‌–2.0’ಗೆ ನೀರಸ ಪ್ರತಿಕ್ರಿಯೆ

ಸವಾರಿಗೆ ಬೇಕು ಪ್ರತ್ಯೇಕ ‘ಪಥ’
Published 3 ಜೂನ್ 2024, 7:18 IST
Last Updated 3 ಜೂನ್ 2024, 7:18 IST
ಅಕ್ಷರ ಗಾತ್ರ

ಮೈಸೂರು: ನಗರವಾಸಿಗಳು ವೃತ್ತಿಪರ ಸ್ಪರ್ಧೆ ಮತ್ತು ಫಿಟ್‌ನೆಸ್‌ ಉದ್ದೇಶಕ್ಕಾಗಿ ಬೈಸಿಕಲ್‌ಗೆ ಮಾರು ಹೋಗುತ್ತಿದ್ದು, ‘ಸಾರಿಗೆ ಉದ್ದೇಶ’ಕ್ಕಾಗಿ ಒದಗಿಸಲಾಗಿರುವ ‘ಟ್ರಿಣ್ ಟ್ರಿಣ್’ ಸೈಕಲ್‌ಗಳನ್ನು ಬಳಸಲು ನಿರಾಸಕ್ತಿ ತೋರುತ್ತಿದ್ದಾರೆ.

ದೇಶದಲ್ಲಿಯೇ ಪ್ರಥಮವಾಗಿ, 2017ರಲ್ಲಿ ಪಾರಂಪರಿಕ ನಗರದಲ್ಲಿ ಆರಂಭವಾದ ಸಾರ್ವಜನಿಕ ಬೈಸಿಕಲ್‌ ಹಂಚಿಕೆ (ಪಿಬಿಎಸ್‌) ಯೋಜನೆ ‘ಟ್ರಿಣ್‌ ಟ್ರಿಣ್‌’ ಜಾರಿಗೊಂಡಾಗ ಸಾರ್ವಜನಿಕರು ಹೆಚ್ಚಿನ ಉತ್ಸಾಹ ತೋರಿದ್ದರು. ಮೊದಲ ಹಂತದ ಯೋಜನೆ ಮುಗಿದಾಗ ಒಟ್ಟು ಬಳಕೆದಾರರ ಸಂಖ್ಯೆ 18 ಸಾವಿರ ತಲುಪಿತ್ತು.

ನೂತನ ‘ಟ್ರಿಣ್‌ ಟ್ರಿಣ್‌ 2.0’ ಉ‍ಪಕ್ರಮ ಪ್ರಾರಂಭವಾಗಿ ಒಂದು ವರ್ಷ ಕಳೆದರೂ 7,634 ಬಳಕೆದಾರರನ್ನು ಮಾತ್ರ ತಲುಪಲು ಸಾಧ್ಯವಾಗಿದೆ. ಸೈಕಲ್‌ ಸವಾರಿ ಮಾಡಲು ನಗರದಲ್ಲಿ ಸೂಕ್ತವಾದ ಟ್ರ್ಯಾಕ್‌ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

‘ನೂತನ ಸೈಕಲ್‌ಗಳು ಉತ್ತಮ ತಂತ್ರಜ್ಞಾನ ಹೊಂದಿದ್ದು, ಜಿಪಿಎಸ್‌ ಟ್ರ್ಯಾಕ್‌, ಆ್ಯಪ್‌ ನಿಯಂತ್ರಣ ಮುಂತಾದ ವ್ಯವಸ್ಥೆ ಹೊಂದಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಲಭ್ಯವಿರುವುದಿಲ್ಲ. ಸೈಕಲ್‌ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಹೇಳಲಾಗಿತ್ತು. ಆದರೆ, ಯಾವುದೇ ಬದಲಾವಣೆಯಾಗಿಲ್ಲ’ ಎಂದು ಕೃಷ್ಣಮೂರ್ತಿಪುರಂನ ಹರೀಶ್‌ ದೂರಿದರು.

ವೈಜ್ಞಾನಿಕ ಸೈಕಲ್‌ ಪಥ ಬೇಕು: ‘ನಗರದಲ್ಲಿ ಈಗ ನಿರ್ಮಿಸಲಾಗಿರುವ ಸೈಕಲ್‌ ಪಥ ಅವೈಜ್ಞಾನಿಕವಾಗಿದ್ದು, ಹಣದ ದುಂದು ವೆಚ್ಚಕ್ಕೆ ಉದಾಹರಣೆಯಾಗಿದೆ. ಟ್ರಾಫಿಕ್‌ ಕೋನ್ ಬಳಸಿ ನಿರ್ಮಿಸಿರುವ ಸೈಕಲ್‌ ಪಥದೊಳಗೆ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತಿದೆ. ಈ ಪಥಗಳು ಯಾವಾಗಲೂ ಸಾಮಾನ್ಯ ರಸ್ತೆಯಿಂದ ಭಿನ್ನವಾಗಿ ಸ್ವಲ್ಪ ಎತ್ತರದಲ್ಲಿ ನಿರ್ಮಿಸಬೇಕು. ಕ್ರಾಸಿಂಗ್‌ ಹೊರತುಪಡಿಸಿ ಉಳಿದ ಕಡೆ ಯಾವುದೇ ವಾಹನಗಳು ಈ ಪಥದ ಮೇಲೆ ಹತ್ತದಂತೆ ನೋಡಿಕೊಳ್ಳಬೇಕು. ಆದರೆ ಈ ಕೆಲಸ ಪಾಲಿಕೆಯಿಂದ ಆಗುತ್ತಿಲ್ಲ’ ಎಂದು ಜಿಲ್ಲಾ ಅಮೆಚ್ಯೂರ್‌ ಸೈಕ್ಲಿಂಗ್‌ ಅಸೋಸಿಯೇಷನ್‌ ಕಾರ್ಯದರ್ಶಿ ಎನ್‌. ಲೋಕೇಶ್‌ ಆಕ್ರೋಶ ವ್ಯಕ್ತಪಡಿಸಿದರು.

‘ಟ್ರಿಣ್‌ ಟ್ರಿಣ್‌ 2.0 ಯೋಜನೆ ಪ್ರಸ್ತುತ 48 ಡಾಕ್‌ಲೆಸ್‌ ಹಬ್‌ಗಳಿದ್ದು, 500 ಸೈಕಲ್‌ಗಳು ಲಭ್ಯ ಇವೆ. ಸೈಕಲ್‌ ಬಳಕೆ ಹೆಚ್ಚಿಸಲು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವನ್ನು ಮಾಡುತ್ತಿದ್ದೇವೆ’ ಎಂದು ಯೋಜನೆಗೆ ಸಂಬಂಧಿಸಿದ ಅಧಿಕಾರಿ ಪ್ರತಿಕ್ರಿಯಿಸಿದರು.

48 ಸ್ಥಳಗಳಲ್ಲಿ ಸೈಕಲ್‌ ವ್ಯವಸ್ಥೆ 500 ಸೈಕಲ್‌ ಬಳಕೆಗೆ ಲಭ್ಯ ಸುಧಾರಿಸಬೇಕಿದೆ ವ್ಯವಸ್ಥೆ

‘ವೃತ್ತಿಪರ ಸೈಕ್ಲಿಂಗ್‌ಗೆ ದೊರೆಯಲಿ ಚೈತನ್ಯ’ ‘ಯುವ ಜನರಲ್ಲಿ ಫಿಟ್‌ನೆಸ್‌ ಆಸಕ್ತಿ ಹೆಚ್ಚಿದ್ದು ಇದಕ್ಕಾಗಿ ಸೈಕ್ಲಿಂಗ್‌ ಮೊರೆ ಹೋಗುತ್ತಿದ್ದಾರೆ. 2013ರಿಂದ ಸೈಕ್ಲಿಂಗ್‌ ಅಸೋಸಿಯೇಷನ್‌ ಮೂಲಕ ಟ್ರಿಪ್‌ಗಳನ್ನು ಆಯೋಜಿಸುತ್ತಿದ್ದೇನೆ. ಆಗೆಲ್ಲಾ ವಾರಾಂತ್ಯದ ಟ್ರಿಪ್‌ 10 ಜನ ಸೈಕ್ಲಿಸ್ಟ್‌ಗಳು ಆಸಕ್ತಿ ತೋರುತ್ತಿರಲ್ಲ. ಈಗ ಕೆಲವೊಮ್ಮೆ 100ಕ್ಕೂ ಹೆಚ್ಚು ಜನ ಬರುತ್ತಿದ್ದಾರೆ’ ಎಂದು ಎನ್‌.ಲೋಕೇಶ್‌ ಹೇಳಿದರು. ‘ನಗರದಲ್ಲಿ 18ರಿಂದ 20 ನ್ಯಾಷನಲ್‌ ಮೆಡಲಿಸ್ಟ್‌ ಸೈಕ್ಲಿಸ್ಟ್‌ಗಳಿದ್ದು ಅವರಲ್ಲಿ ಸ್ಪರ್ಧೆ ಉದ್ದೇಶದಿಂದ ಸೈಕ್ಲಿಂಗ್‌ ಕಲಿಯಲು ಅನೇಕರು ಆಗಮಿಸುತ್ತಾರೆ. ರಾಜ್ಯ ಬಜೆಟ್‌ನಲ್ಲಿ ಮೈಸೂರಿನಲ್ಲಿ ವೆಲೋಡ್ರೋಮ್‌ ನಿರ್ಮಾಣಕ್ಕೆ ₹10 ಕೋಟಿ ಅನುದಾನ ನೀಡಿದ್ದರೂ ಅನುಷ್ಠಾನಕ್ಕೆ ಕ್ರಮವಾಗಿಲ್ಲ. ಈ ಬಗ್ಗೆ ಕ್ರಮ ವಹಿಸಿದರೆ ವೃತ್ತಿಪರ ಸೈಕ್ಲಿಂಗ್‌ ಅಭಿವೃದ್ಧಿಯಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT