ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಪ್ರವಾಸಿ ತಾಣ ಪ್ರಚಾರಕ್ಕೆ ಬ್ಲಾಗರ್ಸ್‌ ‘ಮೊರೆ’

ವಿವಿಧೆಡೆಗೆ ಭೇಟಿ ಇಂದಿನಿಂದ; ಪ್ರವಾಸೋದ್ಯಮ ಇಲಾಖೆಯಿಂದ ಆಯೋಜನೆ
Published : 10 ಸೆಪ್ಟೆಂಬರ್ 2024, 14:13 IST
Last Updated : 10 ಸೆಪ್ಟೆಂಬರ್ 2024, 14:13 IST
ಫಾಲೋ ಮಾಡಿ
Comments

ಮೈಸೂರು: ನಗರ, ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತು ಪ್ರಚಾರ ಮಾಡಿಸುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆಯು ದೇಶದ ವಿವಿಧ ರಾಜ್ಯಗಳ ಬ್ಲಾಗರ್‌ಗಳ ಮೊರೆ ಹೋಗಿದೆ. ಬುಧವಾರದಿಂದ (ಸೆ.11) ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬ್ಲಾಗರ್‌ಗಳಿಗೆ ಅಗತ್ಯ ವ್ಯವಸ್ಥೆಯನ್ನೂ ಇಲಾಖೆಯಿಂದ ಮಾಡಿಕೊಡಲಾಗಿದೆ.

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಬೆಂಗಳೂರು ಕಚೇರಿ, ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಟೂರಿಸಂ ಸೊಸೈಟಿ (ಕೆಟಿಎಸ್‌) ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

‘ಮೈಸೂರಿನ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ವಿವಿಧ ಪ್ರವಾಸಿ ತಾಣಗಳಲ್ಲಿ ‘ಬ್ಲಾಗರ್ಸ್ ಮೀಟ್’ ನಡೆಸಲಾಗುತ್ತಿದೆ. ಇದಕ್ಕಾಗಿ ದೇಶದಲ್ಲಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಬ್ಲಾಗರ್‌ಗಳು ಭೇಟಿ ನೀಡಿ ವಿವಿಧ ಭಾಷೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುವ ಮೂಲಕ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಸಹಕರಿಸಲಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ತಿಳಿಸಿದರು.

ಎಲ್ಲೆಲ್ಲಿಗೆ ಭೇಟಿ?: ಸೆ.11ರಂದು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ, ಬಂಡೀಪುರ, 12ರಂದು ತಿ.ನರಸೀಪುರ ತಾಲ್ಲೂಕಿನ ಚನ್ನಕೇಶವ ದೇವಾಲಯ, ಮೈಸೂರಿನ ಜಗನ್ಮೋಹನ ಅರಮನೆ ಕಲಾ ಗ್ಯಾಲರಿ, ರೋಸ್‌ ವುಡ್‌ ಇನ್ಲೆ ಆರ್ಟ್‌ ವರ್ಕ್‌ಶಾಪ್‌ಗೆ ಭೇಟಿ ನೀಡುವರು. ಸೆ.13ರಂದು ಚಾಮುಂಡೇಶ್ವರಿ ದೇವಾಲಯ, ಕೆಎಸ್‌ಐಸಿ ರೇಷ್ಮೆ ಕಾರ್ಖಾನೆಗೆ ಭೇಟಿ ಕೊಡಲಿದ್ದಾರೆ. ನಂತರ, ನಗರದಲ್ಲಿ ಟಾಂಗಾ ಸವಾರಿಯ ಅನುಭವ ಪಡೆಯಲಿದ್ದಾರೆ. ಮೈಸೂರು ಅರಮನೆಗೆ ಭೇಟಿ ನೀಡುವ ಅವರು, ಸಂಜೆ 4ರಿಂದ 4.45ರವರೆಗೆ ಇಲ್ಲಿನ ಸಂಸದ ಹಾಗೂ ರಾಜವಂಶಸ್ಥರೂ ಆಗಿರುವ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಸಂವಾದ ನಡೆಸುವರು.

ಸೆ.14ರಂದು ಸಂತ ಫಿಲೋಮಿನಾ ಚರ್ಚ್‌ ವೀಕ್ಷಿಸುವರು ಹಾಗೂ ದೇವರಾಜ ಮಾರುಕಟ್ಟೆಯಲ್ಲಿ ಸಂಚರಿಸಿ ವಿಡಿಯೊ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲು ಬೇಕಾಗುವ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ವಿವರ ನೀಡಿದರು.

ಬ್ಲಾಗರ್‌ಗಳಿಗೆ ಆಯ್ದ ಪ್ರವಾಸಿ ತಾಣಗಳ ಮಹತ್ವ ಹಾಗೂ ಚರಿತ್ರೆಯ ಕುರಿತು ಗೈಡ್‌ಗಳು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸಲಾಗುವುದು.
ಎಂ.ಕೆ. ಸವಿತಾ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ

‘ಮೈಸೂರನ್ನು ಅನ್ವೇಷಿಸು’

‘ಮೈಸೂರನ್ನು ಅನ್ವೇಷಿಸು’ ಎಂಬ ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ನವದೆಹಲಿಯ ನಿಹಾರಿಕಾ ಆರೋರ, ಅಮಿತಾ ಪಾಂಡೆ, ಮಹಾರಾಷ್ಟ್ರದ ಇರ್ಫಾನ್‌ ಸಿದ್ದಿಖಿ, ರುಚಿಕಾ ಅಷ್ಟಕರ, ನವೇಲಿ ದೇಶಮುಖ್, ದಿವ್ಯಾಕ್ಷಿ ಗುಪ್ತ, ಕೇರಳದ ದಿನಿ ಎಲ್ದೋ, ಮುಜೀಬ್ ಪಡಿಕ್ಕ, ತಮಿಳುನಾಡಿನ ಕಾರ್ತಿಕ್ ಮುರಳಿ, ಪುದುಚೇರಿಯ ವಸಂತ ಮುರುಗನ್, ತೆಲಂಗಾಣದ ನೀತು ಮತ್ತು ಬಾಲಾಜಿ, ಕರ್ನಾಟಕದ ಲಕ್ಷ್ಮಿ ಶರತ್, ಆಶಿಕ್ ಪಾಳ್ಯಂ, ಸ್ಯಾಂಡಿ ಮತ್ತು ವೈಜಯ್, ಸುಜನ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

‘ಕೇಂದ್ರ ಸರ್ಕಾರದ ಕಾರ್ಯಕ್ರಮ ಇದಾಗಿದೆ. ನಾವು ಆಹ್ವಾನಿಸಿರುವ ಬ್ಗಾಗರ್‌ಗಳು ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಡಿಜಿಟಲ್‌ ಕಟೆಂಟ್‌ ಸಿದ್ಧಪಡಿಸಿ ಅವರವರ ವೇದಿಕೆಗಳಲ್ಲಿ ಹಂಚಿಕೊಳ್ಳಲಿದ್ದಾರೆ. ಈ ಮೂಲಕ ಹೆಚ್ಚಿನ ಪ್ರಚಾರ ದೊರೆಯುವಂತೆ ಮಾಡುವುದು ಇಲಾಖೆಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT