ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ರೈಲು ನಿಲ್ದಾಣಗಳ ವಿಸ್ತರಣೆ

ವಸತಿ ಗೃಹಗಳ ತೆರವು * ನಾಗನಹಳ್ಳಿ, ಬೆಳಗೊಳ, ಅಶೋಕಪುರಂ ನಿಲ್ದಾಣಗಳೂ ಮೇಲ್ದರ್ಜೆಗೆ: ಪ್ರತಾಪಸಿಂಹ
Last Updated 10 ನವೆಂಬರ್ 2022, 10:48 IST
ಅಕ್ಷರ ಗಾತ್ರ

ಮೈಸೂರು: ‘ನಗರದ ಮುಖ್ಯ ರೈಲು ನಿಲ್ದಾಣ ಸೇರಿದಂತೆ ಅಶೋಕ‍ಪುರಂ, ನಾಗನಹಳ್ಳಿ, ಬೆಳಗೊಳ, ಕಡಕೊಳ ನಿಲ್ದಾಣಗಳನ್ನು ಉನ್ನತೀಕರಿಸಲಾಗುತ್ತಿದ್ದು, ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸುವ ದೂರದೃಷ್ಟಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಇಲ್ಲಿನ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಕಚೇರಿಯಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ‘₹ 493 ಕೋಟಿ ವೆಚ್ಚದಲ್ಲಿ ಮೈಸೂರು ನಿಲ್ದಾಣ ಹಾಗೂ ನಾಗನಹಳ್ಳಿ ಟರ್ಮಿನಲ್‌ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು, ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಮೈಸೂರು– ಬೆಂಗಳೂರು ದಶಪಥ ಹಾಗೂ ನಾಗನಹಳ್ಳಿ ರೈಲ್ವೆ ಸ್ಯಾಟಲೈಟ್ ಟರ್ಮಿನಲ್‌ ನಿರ್ಮಾಣದ ಭರವಸೆ ನೀಡಿದ್ದರು. ಕೋವಿಡ್‌ ಕಾರಣ ಎಲ್ಲ ಕೆಲಸಗಳು ನನೆಗುದಿಗೆ ಬಿದ್ದಿದ್ದವು. ರೈಲು ಹಾಗೂ ವಿಮಾನ ನಿಲ್ದಾಣ ವಿಸ್ತರಣೆಗೆ ರಾಜ್ಯ ಸರ್ಕಾರಕ್ಕೆ ಅನುದಾನ ಕೋರಲಾಗಿತ್ತು.ಹಣಕಾಸಿನ ಕೊರತೆಯಿಂದಾಗಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿವಿಮಾನ ನಿಲ್ದಾಣ ವಿಸ್ತರಣೆಗೆ ಮಾತ್ರ ₹ 319 ಕೋಟಿ ನೀಡಿದ್ದರು’ ಎಂದು ಮಾಹಿತಿ ನೀಡಿದರು.

ವಸತ ಗೃಹ ತೆರವುಗೊಳಿಸಿ ವಿಸ್ತರಣೆ: ‘ನಾಗನಹಳ್ಳಿ ಸ್ಯಾಟಲೈಟ್‌ ರೈಲ್ವೆ ಟರ್ಮಿನಲ್‌ ಯೋಜನೆಗೆ ಅನುದಾನಕ್ಕಾಗಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಭೂಸ್ವಾಧೀನಕ್ಕೆ ಹೆಚ್ಚು ಹಣ ಬೇಕಾದ್ದರಿಂದ ರೈಲ್ವೆ ಸಿಬ್ಬಂದಿ ವಸತಿ ಗೃಹಗಳನ್ನು ತೆರವುಗೊಳಿಸಿ ಮೈಸೂರಿನಲ್ಲಿ 3 ರನ್ನಿಂಗ್‌, 4ಸ್ಟಾಬಲ್‌, 4 ಪಿಟ್‌ ಲೇನ್‌ ಹಾಗೂ 1 ಶಂಟಿಂಗ್‌ ನೆಕ್‌ ಸ್ಥಾಪಿಸಲಾಗುತ್ತಿದೆ. ನಾಗನಹಳ್ಳಿಯಲ್ಲೂ ತಲಾ ಒಂದು ರನ್ನಿಂಗ್‌, ಪಿಟ್‌, ಸ್ಟಾಬಲ್ ಲೇನ್‌ ನಿರ್ಮಾಣಗೊಳ್ಳಲಿದೆ. ಒಂದು ಮೆಮು ಷೆಡ್‌ ನಿರ್ಮಾಣಕ್ಕೆ 7 ಎಕರೆ ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ’ ಎಂದು ಪ್ರತಾಪ ಸಿಂಹ ವಿವರಿಸಿದರು.

‘ವಸತಿ ಗೃಹಗಳಲ್ಲಿ ವಾಸವಿರುವವರನ್ನು ಸಿಎಫ್‌ಟಿಆರ್‌ಐ, ಡಿಎಫ್‌ಆರ್‌ಎಲ್‌ ಸೇರಿದಂತೆ ವಿವಿಧ ಸಂಸ್ಥೆಗಳ ವಸತಿ ಗೃಹಗಳಿಗೆ ಸ್ಥಳಾಂತರಿಸಿ ಆಯಾ ಸಂಸ್ಥೆಗಳಿಗೆ ಬಾಡಿಗೆಯನ್ನೂ ನೀಡಲಾಗುತ್ತದೆ. ಖಾಸಗಿ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆ ಪಡೆಯಲಾಗುತ್ತಿದೆ. ಇದೆಲ್ಲದರ ಡಿಪಿಆರ್‌ ಆಗಸ್ಟ್‌ನಲ್ಲಿಯೇ ರೂಪುಗೊಂಡಿದ್ದು, ಟೆಂಡರ್‌ ಪ್ರಕ್ರಿಯೆ ಜ.15ರಂದು ನಡೆಯಲಿದೆ’ ಎಂದರು.

‘ಗತಿಶಕ್ತಿ ಕಚೇರಿ ಮೈಸೂರಿನಲ್ಲಿ ಸ್ಥಾಪನೆಯಾಗಿದ್ದು, ಇಲಾಖೆಯಡಿ 17 ಕಾಮಗಾರಿ ನಡೆಯುತ್ತಿವೆ. ಬೆಂಗಳೂರಿನ ಯಶವಂತಪುರ, ಬೈಯಪ್ಪನಹಳ್ಳಿ ಟರ್ಮಿನಲ್‌ ಮಾದರಿಯಲ್ಲಿ ಯಾದವಗಿರಿಯಲ್ಲೂ ಟರ್ಮಿನಲ್‌ ನಿರ್ಮಿಸಲಾಗುವುದು.ಬೆಳಗೊಳದಲ್ಲಿ 4 ಸೆಬ್ಲಿಂಗ್‌ ಲೇನ್‌, 4 ಪಿಟ್‌ ಲೇನ್‌,ಅಶೋಪುರಂನಲ್ಲಿ ಮೂರು ಹೊಸ ಪ್ಲಾಟ್‌ಫಾರಂ, 2 ಸ್ಟೆಬ್ಲಿಂಗ್ ಲೇನ್‌ ಮಾಡಲಾಗುತ್ತಿದೆ. ಪಾದಚಾರಿ ಸೇತುವೆ ಕೂಡ ನಿರ್ಮಿಸಲಾಗುವುದು’ ಎಂದರು.

‘ಅಶೋಕಪುರಂ ನಿಲ್ದಾಣ ನವೀಕರಣಕ್ಕೆಮೊದಲ ಹಂತದಲ್ಲಿ ₹ 15.17 ಕೋಟಿ, ಎರಡನೇ ಹಂತದಲ್ಲಿ ₹ 13.39 ಕೋಟಿ ಬಿಡುಗಡೆಯಾಗಲಿದೆ. ಜೂನ್‌ 2023ರಲ್ಲಿ ಕಾಮಗಾರಿ ಮುಗಿಯಲಿದ್ದು,ಮೂರು ಪ್ಲಾಟ್‌ಫಾರ್ಮ್‌ ನಿರ್ಮಾಣಗೊಳ್ಳಲಿದೆ. ಅದಕ್ಕಾಗಿ5,310 ಚ.ಮೀ ಸರ್ಕಾರಿ ಭೂಮಿ ಹಾಗೂ 344 ಚ.ಮೀ ಖಾಸಗಿ ಭೂಮಿ ಬೇಕಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಸ್ಥಳ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕ ರಾಹುಲ್‌ ಅಗರ್‌ವಾಲ್‌,ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾದ ಇ.ವಿಜಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT