ಮೈಸೂರು: ‘ಪಕ್ಷದ ನೇತಾರ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ನಾವು ಬೆಳಗಾವಿಯಲ್ಲಿ ಈಚೆಗೆ ನಡೆಸಿದ್ದು ಬಿಜೆಪಿ ಅತೃಪ್ತರ ಅಥವಾ ಬಂಡಾಯಗಾರರ ಸಭೆಯಲ್ಲ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣವನ್ನು ಖಂಡಿಸಿ ಸೆ.17ರಿಂದ ಪಾದಯಾತ್ರೆಗೆ ನಿರ್ಧರಿಸಿದ್ದೇವೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ತಿಳಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಮೈಸೂರು ಚಲೋ ಪಾದಯಾತ್ರೆಯ ಅನುಭವವನ್ನು ನಾನು ಅಲ್ಲಿ ಹಂಚಿಕೊಂಡೆ. ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತದೆ. ಯತ್ನಾಳ್ ಅವರಂಥ ದೊಡ್ಡ ನಾಯಕ ಕರೆದ ಕಾರಣ ನಾನು ಹೋಗಿದ್ದೆ’ ಎಂದರು.
‘ನಮ್ಮ ಪಾದಯಾತ್ರೆ ಯಾರ ಮೇಲಾಟದ ಕಾರ್ಯಕ್ರಮವಲ್ಲ; ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಅದಕ್ಕೆ ಹೈಕಮಾಂಡ್ ಅನುಮತಿ ಕೊಡುತ್ತದೆ. ವರಿಷ್ಠರ ಅನುಮತಿಯೊಂದಿಗೇ ನಡೆಸುತ್ತೇವೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಎಲ್ಲರನ್ನೂ ಆಹ್ವಾನಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯನ್ನು ಭೇಟಿಯಾದ ತಮ್ನನ್ನು ಸಚಿವ ದಿನೇಶ್ ಗುಂಡೂರಾವ್ ಟೀಕಿಸಿರುವುದಕ್ಕೆ ತಿರುಗೇಟು ನೀಡಿದ ಪ್ರತಾಪ, ‘ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ ವರ್ಗಾವಣೆ ಆಗುವುದಿಲ್ಲ. ದಿನೇಶ್ ಗುಂಡೂರಾವ್ ವಿಚಾರದಲ್ಲೂ ಅದೇ ಆಗಿದೆ. ಪ್ರಕರಣದ ಆರೋಪಿಯನ್ನು ಮಾತನಾಡಿಸುವುದೇ ತಪ್ಪಾ? ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದ ವಿಚಾರದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಬ್ಬರೂ ಆರೋಪಿಗಳು. ಹೀಗಿರುವಾಗ, ಕಾಂಗ್ರೆಸ್ ನಾಯಕರೇಕೆ ಅವರ ಕಾಲಿಗೆ ಬೀಳುತ್ತಾರೆ?’ ಎಂದು ಕೇಳಿದರು. ‘ತಿಳಿಗೇಡಿ ಹೇಳಿಕೆಗಳನ್ನು ನಿಲ್ಲಿಸಬೇಕು’ ಎಂದರು.
‘ಕೇಂದ್ರಕ್ಕೆ ಹೋಗಬೇಡಿ ರಾಜ್ಯದಲ್ಲೇ ಇರಿ ಎಂಬ ಸಂದೇಶ ವರಿಷ್ಠರಿಂದ ಸಿಕ್ಕಿದೆ. ಹೀಗಾಗಿ ಇಲ್ಲೇ ಇದ್ದೇನೆ. ನಾನು ಅನ್ಯಾಯದ ವಿರುದ್ಧ ಮಾತ್ರವೇ ರೆಬಲ್; ಪಕ್ಷದ ವಿರುದ್ಧವಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತಲೂ ನಾನು ಸೀನಿಯರ್. ಏಕೆಂದರೆ, ನನ್ನಪ್ಪ ಆರ್‌ಎಸ್ಎಸ್‌ನಲ್ಲಿದ್ದರು. ನಾನು ಪಕ್ಷದ ಕಾರ್ಯಕ್ರಮಗಳಲ್ಲಿ ಬ್ಯಾನರ್, ಬಂಟಿಂಗ್ ಕಟ್ಟಿಲ್ಲದಿರಬಹುದು. ಆದರೆ, ಯುವಜನರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು ಸಮರ್ಥಿಸಿಕೊಂಡರು.
‘ಬಿ.ಎಸ್. ಯಡಿಯೂರಪ್ಪ ಅಂಥವರು ನೇಪಥ್ಯಕ್ಕೆ ಸರಿಯುತ್ತಿರುವ ಕಾರಣ ಪಕ್ಷಕ್ಕೆ ನನ್ನಂತಹ ಯಂಗ್ ಬ್ಲಡ್ ಬರಬೇಕಿದೆ. ಹೀಗಾಗಿ ನನ್ನನ್ನು ರಾಜ್ಯದಲ್ಲೇ ಉಳಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
‘ನಾನು ಯಾರನ್ನೋ ಓಲೈಸಲು ಅಥವಾ ಮೆಚ್ಚಿಸಲು ರಾಜಕಾರಣ ಮಾಡುವುದಿಲ್ಲ. ಯಾರ ಮನೆಯ ಬಾಗಿಲನ್ನೂ ತಟ್ಟುವುದಿಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ಬಿಜೆಪಿ ಅಲ್ಲ; ಆರ್‌ಎಸ್‌ಎಸ್ ನೀಡಿತ್ತು. ಕ್ಷೇತ್ರ, ಜಾತಿಯಿಂದಾಚೆ ಜನಪ್ರಿಯತೆಯುಳ್ಳ ಯತ್ನಾಳ್ ಅಂಥವರಲ್ಲಿ ನಾನೂ ಒಬ್ಬ. ಈ ಬಗ್ಗೆ ಯಾರಿಗಾದರೂ ಅನುಮಾನ ಇದೆಯೇ? ಮೈಸೂರು ನೆಲೆ ಹಾಗೂ ಪ್ರೀತಿ ಕೊಟ್ಟಿದೆ. ಆದ್ದರಿಂದ ಮೈಸೂರಿನಲ್ಲೇ ಇರುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.