ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣ | ಕೈಗಾರಿಕಾ ಪ್ರದೇಶ: ಭೂಮಿ ಕಳೆದುಕೊಂಡ ಕುಟುಂಬಕ್ಕಿಲ್ಲ ಆದ್ಯತೆ!

Published 6 ಜನವರಿ 2024, 5:50 IST
Last Updated 6 ಜನವರಿ 2024, 5:50 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ಘಟಕಗಳಲ್ಲಿ, ‘ಭೂಮಿ ಕಳೆದುಕೊಂಡಿರುವ ರೈತ ಕುಟುಂಬ’ದವರಿಗೆ ಉದ್ಯೋಗ ನೀಡಿರುವುದು ಬೆರಳೆಣಿಕೆಯಷ್ಟು ಪ್ರಮಾಣದಲ್ಲಿ ಮಾತ್ರವೇ ಇದೆ!

‘ತಮ್ಮ ಭಾಗದಲ್ಲಿ ಕೈಗಾರಿಕೆ ಬಂದರೆ ನಮ್ಮ ಕುಟುಂಬದವರಲ್ಲಿ ಕೆಲವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗದ ಅವಕಾಶಗಳು ದೊರೆಯುತ್ತವೆ’ ಎಂಬ ನಿರೀಕ್ಷೆ–ಆಶಯದೊಂದಿಗೆ ರೈತರು ತಮ್ಮ ಅಮೂಲ್ಯ ಜಮೀನುಗಳನ್ನು ಬಿಟ್ಟು ಕೊಟ್ಟಿದ್ದಾರೆ. ಇದರೊಂದಿಗೆ ಸರ್ಕಾರದ ಉದ್ದೇಶವೂ ಈಡೇರಿಕೆಯಾಗಿದೆ. ಕೆಲವು ಕೈಗಾರಿಕೆಗಳು ಕಾರ್ಯನಿರ್ವಹಣೆ ಯನ್ನೂ ಮಾಡುತ್ತಿವೆ. ಆದರೆ, ಬಹುತೇಕ ಉದ್ಯೋಗಗಳು ‘ಬೇರೆಯವರ’ ಪಾಲಾಗಿದೆ. ಇದು ಸ್ಥಳೀಯರು ಹಾಗೂ ಫಲವತ್ತಾದ ಭೂಮಿ ನೀಡಿದವರ ಅಸಮಾಧಾನಕ್ಕೆ ಕಾರಣವಾಗಿದೆ.

ತಮಗೆ ಅನ್ಯಾಯ ಆಗಿರುವುದನ್ನು ಖಂಡಿಸಿ ರೈತರು ಹಾಗೂ ವಿವಿಧ ಸಂಘಟನೆಗಳು ಆ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದರೆ, ಇದಕ್ಕೆ ಪರಿಹಾರ ಕಲ್ಪಿಸುವ ಕೆಲಸ ನಡೆದಿರಲಿಲ್ಲ. ಗಂಭೀರವಾಗಿ ಪರಿಗಣಿಸುವ ಕಾಳಜಿಯನ್ನೂ ಸಂಬಂಧಿಸಿದ ಅಧಿಕಾರಿಗಳು ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಡಕ್‌ ಸೂಚನೆ ಮೇರೆಗೆ, ಕೈಗಾರಿಕಾ ಇಲಾಖೆಯು ಕೈಗಾರಿಕಾ ಘಟಕದವರು ನೀಡಿರುವ ಉದ್ಯೋಗದ ಅಂಕಿ– ಸಂಖ್ಯೆಯನ್ನು ಪಡೆದುಕೊಂಡಿದೆ.

ಬಹಳಷ್ಟು ವ್ಯತ್ಯಾಸ: ಘಟಕಗಳಲ್ಲಿ ಒಟ್ಟು ಕಾರ್ಯನಿರ್ವಹಿಸುತ್ತಿರುವವ ಸಂಖ್ಯೆ ಹಾಗೂ ಭೂಮಿ ಕಳೆದುಕೊಂಡವರಿಗೆ ನೀಡಿರುವ ಉದ್ಯೋಗದ ಪ್ರಮಾಣಕ್ಕೂ ಬಹಳಷ್ಟು ವ್ಯತ್ಯಾಸ ಇರುವುದನ್ನು ಗಮನಿಸಲಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿದ್ಧಿ ಮಂಡಳಿಯು ಸಿದ್ಧಪಡಿಸಿರುವ ವಿವರವು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ದೊರೆಯಬೇಕು ಎನ್ನುವುದು ಗಗನಕುಸುಮವಾಗಿಯೇ ಉಳಿದಿರುವುದಕ್ಕೆ ಈ ಅಂಕಿ–ಅಂಶಗಳು ಕನ್ನಡಿ ಹಿಡಿದಿವೆ.

ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಕೈಗಾರಿಕಾ ಪ್ರದೇಶಗಳು ಬರುತ್ತವೆ. ಇಮ್ಮಾವು, ತಾಂಡ್ಯ, ನಂಜನಗೂಡು, ಬ್ಯಾತಹಳ್ಳಿ (ಕಡಕೊಳ), ಅಳಗಂಚಿ, ಅಡಕನಹಳ್ಳಿ, ಕಡಕೊಳ, ತಾಂಡವ ಪುರದಲ್ಲಿ ಕೈಗಾರಿಕೆಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ ನೂರಾರು ಎಕರೆ ಜಮೀನು ಒದಗಿಸಲಾಗಿದೆ. ನೂರಾರು ಉದ್ಯೋಗಗಳೂ ಸೃಷ್ಟಿಯಾಗಿವೆ. ಆದ್ಯತೆಯ ವಿಷಯದಲ್ಲಿ ‘ಭೂಮಿ ಕಳೆದುಕೊಂಡವರು’ ಕೊನೆ ಸ್ಥಾನದಲ್ಲಿ ಇರುವುದನ್ನು ಗುರುತಿಸಲಾಗಿದೆ.

ಕ್ರಮ ವಹಿಸಲಾಗುತ್ತಿದೆ: ‘ಖಾಸಗಿ ಕಂಪನಿಗಳಲ್ಲಿ ಉದ್ಯೋಗಕ್ಕೆ ಪರಿಗಣಿಸುವಾಗ ನಿರ್ದಿಷ್ಟ ವಿದ್ಯಾರ್ಹತೆ ಹಾಗೂ ಕೌಶಲವನ್ನು ಬಯಸಲಾಗುತ್ತದೆ. ಅಂಥವರು ಸಿಕ್ಕಿರೆ ಖಂಡಿತ ಅವಕಾಶ ಕೊಡಬಹುದು. ಆದರೆ, ಬಹಳಷ್ಟು ಯುವಕರಲ್ಲಿ ಕೌಶಲದ ಕೊರತೆ ಇದೆ. ಇದರಿಂದಾಗಿ ಹಲವರಿಗೆ ಉದ್ಯೋಗ ಕೊಡುವುದಕ್ಕೆ ಆಗುತ್ತಿಲ್ಲ’ ಎಂದು ಕಂಪನಿಯೊಂದರ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರೊಬ್ಬರು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ್, ‘ಯಾರ‍್ಯಾರಿಗೆ ಉದ್ಯೋಗ ಕೊಡುವುದಕ್ಕೆ ಬಾಕಿ ಇದೆಯೋ ಅವರ ಮಾಹಿತಿಯನ್ನೆಲ್ಲಾ ನಿಗದಿತ ಕಂಪನಿಗಳಿಗೆ ಕಳುಹಿಸಲಾಗಿದೆ. ಅವರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕೆಲವರು ಕೆಲಸ ಕೇಳಿಲ್ಲದೆಯೂ ಇರಬಹುದು. ಕೆಲಸ ಕೊಡಿಸಿ ಎಂದು ಮುಂದೆ ಬಂದರೆ ಕ್ರಮ ವಹಿಸಲಾ ಗುವುದು. ಈಚೆಗೆ ಮುಖ್ಯಮಂತ್ರಿ ಸಮ್ಮುಖದಲ್ಲಿ 8 ಮಂದಿಗೆ ಕೆಲಸ ಕೊಡಿಸಲಾಗಿದೆ. ಉಳಿದವರಿಗೂ ದೊರಕಿಸಲು ಫಾಲೋಅಪ್‌ ಮಾಡಲಾಗುವುದು’ ಎಂದು ತಿಳಿಸಿದರು.

ಕೆಲ ಕಂಪನಿಗಳು ಒಂದಂಕಿಯಷ್ಟು ಉದ್ಯೋಗವನ್ನೂ ನೀಡಿಲ್ಲ!

ಜಿಲ್ಲೆಯಲ್ಲಿ ಒಟ್ಟು 16 ಕೈಗಾರಿಕಾ ಪ್ರದೇಶಗಳಿದ್ದರೆ ಅವುಗಳಲ್ಲಿ 8 ವರುಣ ವಿಧಾನಸಭಾ ಕ್ಷೇತ್ರಗಳಲ್ಲೇ ಇವೆ. ಈ ಕ್ಷೇತ್ರದಲ್ಲಿ ಒಟ್ಟು 26 ಪ್ರಮುಖ ಕೈಗಾರಿಕಾ ಘಟಕಗಳಿವೆ. ಅವುಗಳಿಗೆ 1177.32 ಎಕರೆ ಜಮೀನು ನೀಡಲಾಗಿದೆ. ಇವುಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ 14442 ಹಾಗೂ ಭೂಮಿ ಕಳೆದುಕೊಂಡಿರುವ ರೈತ ಕುಟುಂಬಗಳಿಗೆ ಉದ್ಯೋಗ ಒದಗಿಸಿರುವ ಸಂಖ್ಯೆ 448 ಮಾತ್ರ! ಹಲವು ಕಂಪನಿಗಳು ಭೂಮಿ ಕೊಟ್ಟ ರೈತರ ಕುಟುಂಬದವರಿಗೆ ನೀಡಿರುವ ಉದ್ಯೋಗ ಕೇವಲ ಒಂದಂಕಿಯಷ್ಟೇ ಇದೆ. ಇಲ್ಲಿ ಏಷಿಯನ್‌ ಪೇಂಟ್ಸ್‌ ಯುನೈಟೆಡ್ ಬೇವರ್ಜೀಸ್ ಕಾಲ್ಸ್‌ಬರ್ಗ್‌ ಐಟಿಸಿ (ಫುಡ್) ಐಟಿಸಿ (ಅಗ್ರಿ) ನೆಸ್ಲೆ ಇಂಡಿಯಾ ಎಟಿ ಅಂಡ್ ಎಸ್ ಟಿವಿಎಸ್ ಮೋಟಾರ್ಸ್‌ ಕ್ರಿಯಾನ್ ಟೆಕ್ಸ್‌ಕೆಮ್ ಬಣ್ಣಾರಿ ಅಮ್ಮನ್ ಶುಗರ್ಸ್ ಜುಬಿಲಿಯೇಂಟ್ ಜನರಿಕ್ಸ್ ಬಕಾರ್ಡಿ ಬೆವರ್ಜೀಸ್ ಮೌಲ್ಡ್‌ಟೆಕ್ ಆಟೊಲಿವ್ ಚಿಯರ್‌ ಬೇವರ್ಜೀಸ್ (ಬೀರಾ) ಹರಿತ ಫೆರರ್ ಸಿರಿನ್ ಇಂಡಿಯಾ ಎಚ್‌ ಅಂಡ್ ವಿ ಮೆಟೀರಿಯಲ್‌ ಅಡ್ವಾನ್ಸ್‌ ಎಸ್‌ಕೆಎಫ್‌ ಟೆಕ್ನಾಲ ಜೀಸ್ ಟಿ.ಬಿ. ಕವಾಶಿಯಾ ಹೆಕ್ಟರ್‌ ಬೇವರ್ಜೀಸ್ ಬ್ಲೋ ಪ್ಯಾಕಿಂಗ್ ರುಚಾ ಎಂಜಿನಿಯರಿಂಗ್ ಹೈಟೆಕ್ ಕಾರ್ಪೊರೇಷನ್‌ ಸ್ಪಾರ್ಕ್‌ ಮೀಡಾ ಹಾಗೂ ಗ್ರೋಮ್ಯಾಕ್ಸ್‌ ಪೇಪರ್‌ ಅಂಡ್ ಬೋರ್ಡ್‌ ಕಂಪನಿಗಳು ಘಟಕ ನಡೆಸುತ್ತಿವೆ.

ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎಂಬ ದೃಷ್ಟಿಯಿಂದ ಕಾರ್ಖಾನೆಗಳಿಗೆ ಅನುಮತಿ ನೀಡಲಾಗುತ್ತದೆ. ಇದು ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಎಷ್ಟು ಕೆಲಸ ನೀಡಲಾಗಿದೆ ಎಂಬ ವರದಿ ಕೇಳಲಾಗಿದೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು.
ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT