ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ದ್ವೇಷದ ರಾಜಕಾರಣ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಆರೋಪ

Last Updated 20 ಜುಲೈ 2022, 13:05 IST
ಅಕ್ಷರ ಗಾತ್ರ

ಮೈಸೂರು:‘ಬಿಜೆಪಿಯಿಂದ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ವಿರೋಧ ಪಕ್ಷಗಳ ನಾಯಕರನ್ನು ರಾಜಕೀಯವಾಗಿ ಮುಗಿಸಲು ಕೇಂದ್ರ ಸರ್ಕಾರವು ಸಾವಿಂಧಾನಿಕ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ (ಐಟಿ) ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಆರೋಪಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬ ಆಚರಣೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ, ದುರಾಡಳಿತ ವಿರುದ್ಧ ಧ್ವನಿ ಎತ್ತುವವರ ಸದ್ದಡಗಿಸಲು ಯತ್ನಿಸಲಾಗುತ್ತಿದೆ. ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ವಿಚಾರ ಮುಂದಿಟ್ಟುಕೊಂಡು ಗುರಿಪಡಿಸಲಾಗುತ್ತಿದೆ. ಇದಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ’ ಎಂದು ಆಕ್ರೋಶ ವ್ಯಕ್ತ‍ಪಡಿಸಿದರು.

ಹಿಂದೆಂದೂ ಕಂಡಿರಲಿಲ್ಲ:

‘ಇಂಥ ದ್ವೇಷದ ರಾಜಕಾರಣವನ್ನು ಹಿಂದೆಂದೂ ಕಂಡಿರಲಿಲ್ಲ. ಐಟಿ ಮತ್ತು ಇಡಿಯವರು ಕೇಂದ್ರ ಸರ್ಕಾರ ಸೂಚಿಸಿದವರ ಮೇಲೆ ದಾಳಿ ಮಾಡುತ್ತಿವೆ’ ಎಂದು ದೂರಿದರು.

‘ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಜಾರಿಗೊಳಿಸಿದ ಜನಪರ ಯೋಜನೆಗಳ ಕುರಿತ ರಚಿತವಾಗಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಜುಲೈ 23ರಂದು ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ಸಿದ್ದರಾಮಯ್ಯ ಆಗಮಿಸಲಿದ್ದಾರೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಜುಲೈ 21ರಂದು ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು. ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಜುಲೈ 22ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪಾದಯಾತ್ರೆ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT