ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರಿಗೆ ಬಿಜೆಪಿ ಕೊಡುಗೆ ಏನು ತೋರಿಸಲಿ: ಸಿದ್ದರಾಮಯ್ಯ ಸವಾಲು

Published 15 ಮಾರ್ಚ್ 2024, 13:36 IST
Last Updated 15 ಮಾರ್ಚ್ 2024, 13:36 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿಯವರು ಮೈಸೂರು ನಗರಕ್ಕೆ ಏನಾದರೂ ಕೊಡುಗೆ ನೀಡಿದ್ದರೆ ತೋರಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಜಿಲ್ಲಾಡಳಿತದಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಆಸ್ಪತ್ರೆ, ಕಾಲೇಜು, ಮಾರುಕಟ್ಟೆ, ರಸ್ತೆ, ನೀರು ಸೇರಿ ಮೈಸೂರಿನ ಎಲ್ಲಾ ಪ್ರಗತಿ ಕಾರ್ಯಕ್ರಮಗಳಿಗೆ ನಮ್ಮ ಸರ್ಕಾರ ನಿರಂತರವಾಗಿ ಅನುದಾನ ನೀಡುತ್ತಿದೆ. ಈ ಬಜೆಟ್‌ನಲ್ಲೂ ಹಲವು ಯೋಜನೆಗಳಿಗೆ ಹಣ ಮೀಸಲಿಟ್ಟಿದ್ದೇವೆ. ಹಲವು ಅಭಿವೃದ್ಧಿ ಕಾರ್ಯಗಳು ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೂ ನಡೆದಿದ್ದವು. ಈಗಲೂ ಆದ್ಯತೆ ಕೊಡುತ್ತಿದ್ದೇನೆ. ಆದರೆ, ಬಿಜೆಪಿ ಸರ್ಕಾರದವರ ಕೊಡುಗೆ ಶೂನ್ಯ’ ಎಂದು ಹೇಳಿದರು.

‘ನಾವು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ ದಿನದಿಂದಲೂ ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿಯನ್ನು ಕೊಡುತ್ತಿದ್ದಾರೆ. ‌ಆದ್ದರಿಂದ ವಸ್ತುಸ್ಥಿತಿಯನ್ನು ತಿಳಿಸಲೆಂದೇ ಎಲ್ಲ ಜಿಲ್ಲೆ–ತಾಲ್ಲೂಕುಗಳಲ್ಲೂ ಫಲಾನುಭವಿಗಳ ಸಮಾವೇಶವನ್ನು ಸರ್ಕಾರದಿಂದಲೇ ನಡೆಸುತ್ತಿದ್ದೇವೆ’ ಎಂದರು.

ಹೇಳಿದ್ದಾಯ್ತು, ಜಾರಿಗೊಳಿಸಿದ್ದೂ ಆಯ್ತು

‘ಬೆಲೆ ಏರಿಕೆಯಿಂದ ಬಡವರು, ರೈತರು, ಮಹಿಳೆಯರು ಹಾಗೂ ಶ್ರಮಿಕ ವರ್ದವರು ಜೀವನ ನಡೆಸುವುದು ಕಷ್ಟವಾಗುತ್ತಿದೆ. ಬಡವರ ಕೈಯಲ್ಲಿ ದುಡ್ಡಿಲ್ಲ. ಪರಿಣಾಮ, ಖರೀದಿಸುವ ಶಕ್ತಿಯೂ ಕಡಿಮೆಯಾಗಿದೆ. ಆದ್ದರಿಂದ ಅವರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬಬೇಕೆಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆವು. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೆ ಖಜಾನೆ ಖಾಲಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಜಾರಿ ಮಾಡಲು ಆಗುವುದಿಲ್ಲ ಎಂದೂ ಸಾರ್ವಜನಿಕರ ಸಭೆಯಲ್ಲೇ ಪ್ರತಿಪಾದಿಸಿದ್ದರು. ಆದರೆ, ನಾವು ಜಾರಿಗೊಳಿಸಿದ್ದೂ ಆಯಿತು’ ಎಂದು ತಿಳಿಸಿದರು.

‘ಗ್ಯಾರಂಟಿ ಯೋಜನೆಗಳು ಜಾರಿಯಾದರೆ ಅಭಿವೃದ್ಧಿ ಕಾರ್ಯಗಳು ನಿಂತು ಹೋಗುತ್ತವೆ ಎಂದು ರಾಜ್ಯದ ಬಿಜೆಪಿ ನಾಯಕರೂ ಹೇಳಿದ್ದರು. ಇದೆಲ್ಲವೂ ಅಪ್ಪಟ ಸುಳ್ಳು. ಜಾರಿಗೊಳಿಸಿರುವುದು ವಾಸ್ತವ. ಬಿಜೆಪಿಯವರು ಹೊಟ್ಟೆಕಿಚ್ಚಿಯಿಂದ ಸುಳ್ಳು ಹೇಳುತ್ತಿದ್ದಾರೆ. ಎಲ್ಲ ಜಾತಿಯ ಬಡವರು ಹಾಗೂ ಧರ್ಮದವರಿಗೂ ಸೌಲಭ್ಯ ಕೊಡುತ್ತಿದ್ದೇವೆ. ಬಿಜೆಪಿಯ ಬಡವರಿಗೂ ಕೊಡುತ್ತಿದ್ದೇವೆ’ ಎಂದು ಹೇಳಿದರು.

‘ಸ್ವತಂತ್ರ ಭಾರತದ‌ ಇತಿಹಾಸದಲ್ಲಿ, ರಾಜ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರ ಮಾತ್ರ. ‘ಶಕ್ತಿ’ ಯೋಜನೆ ಶ್ಲಾಘಿಸಿ ಧರ್ಮಸ್ಥಳದ ಧರ್ಮಾಧಿಕಾರಿ ನನಗೆ ಪತ್ರ ಬರೆದಿದ್ದಾರೆ. ಬಿಜೆಪಿಯಿಂದ ರಾಜ್ಯಸಭೆಗೆ ನಾಮನಿರ್ದೇಶನವಾದ ಅವರು ಸುಮ್ಮನೆ ಪತ್ರ ಬರೆಯುತ್ತಾರೆಯೇ?’ ಎಂದು ಕೇಳಿದರು.

‘ಮೋದಿ ಸರ್ಕಾರದಿಂದ ಒಳ್ಳೆಯ ದಿನಗಳು ಬಂದಿವೆಯೇ, ಜನರ ಖಾತೆಗಳಿಗೆ 15 ಪೈಸೆಯಾದರೂ ಬಂದಿದೆಯೇ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಶಾಸಕ ಕೆ.ಹರೀಶ್‌ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ತನ್ವೀರ್‌ ಸೇಠ್‌, ಅನಿಲ್‌ ಚಿಕ್ಕಮಾದು, ದರ್ಶನ್‌ ಧ್ರುವನಾರಾಯಣ್‌, ಡಿ. ರವಿಶಂಕರ್‌, ಎ.ಆರ್.‌ ಕೃಷ್ಣಮೂರ್ತಿ, ವಿಧಾನಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಡಾ.ಡಿ. ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್‌ ಮತ್ತು ಸೂರಜ್‌ ಹೆಗ್ಡೆ, ವರುಣಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಮುಡಾ ಅಧ್ಯಕ್ಷ ಕೆ. ಮರಿಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್‌, ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್‌, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಮಹಾನಗರಪಾಲಿಕೆ ಆಯುಕ್ತೆ ಎನ್.ಎಸ್. ಮಧು ಪಾಲ್ಗೊಂಡಿದ್ದರು.

ಶೇ 100ರಷ್ಟು ಜಾರಿಗೆ ಸಿಎಂ ಸೂಚನೆ: ವೆಂಕಟೇಶ್

‍ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ‘ನಾವು ಗ್ಯಾರಂಟಿ ಜಾರಿ ಭರವಸೆ ನೀಡಿದಾಗ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದ್ದರು. ಆದರೆ, ಜನರು ನಮ್ಮ ಮೇಲೆ ಭರವಸೆ ಇಟ್ಟು ಅಧಿಕಾರ ನೀಡಿದರು. ಭರವಸೆಯಂತೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಅವು ಶೇ 100ರಷ್ಟು ಜಾರಿಯಾಗಬೇಕು ಎಂಬುದು ಮುಖ್ಯಮಂತ್ರಿ ಸೂಚನೆಯಾಗಿದೆ. ಜನರು ಅಗತ್ಯ ದಾಖಲೆಗಳನ್ನು ನೀಡಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದರು.

‘ಲೋಕಸಭಾ ‌ಚುನಾವಣೆ ಬಳಿಕ ಗ್ಯಾರಂಟಿ ನಿಲ್ಲಿಸುತ್ತಾರೆ ಎಂಬ ಅಪಪ್ರಚಾರವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಅದು ಸುಳ್ಳು. ಬಡವರಿಗಾಗಿ ಮಾಡಿರುವ ಈ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಇರುವವರೆಗೂ ಇರುತ್ತವೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಶಕ್ತಿ ತುಂಬಬೇಕು’ ಎಂದು ಕೋರಿದರು.

ಹೇಳಿದ್ದನ್ನು ಮಾಡಿದ್ದಕ್ಕಾಗಿ ನಮ್ಮನ್ನು ಬೆಂಬಲಿಸಿ: ಡಾ.ಎಚ್‌.ಸಿ.ಮಹದೇವಪ್ಪ

‘ರಾಜ್ಯದ ಜನರು ಹಸಿವು, ಬಡತನದ ಸಂಕಷ್ಟಕ್ಕೆ ಒಳಗಾಗಬಾರದೆಂದು ನಮ್ಮ ಪಕ್ಷ ಹಲವು ಭರವಸೆ ನೀಡಿತ್ತು. ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಏಕೈಕ ಸರ್ಕಾರವಿದ್ದರೆ ಅದು ನಮ್ಮದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

‘ಗ್ಯಾರಂಟಿ ಯೋಜನೆ ನೀಡಿದ್ದರಿಂದ ಅಭಿವೃದ್ಧಿ ಮಾಡಲಾಗುತ್ತಿಲ್ಲ ಎಂದು ಕೆಲವರು ಸುಳ್ಳು ಹೇಳುತ್ತಿದ್ದಾರೆ. ಆದರೆ, ನಾವು ಮಾಡುತ್ತಿರುವ ಈ ಕೆಲಸ ರಾಜಕೀಯ ಪ್ರೇರಿತವಲ್ಲ. ಸಂವಿಧಾನದಲ್ಲಿ ಇರುವಂತೆಯೇ ಸಂಪತ್ತು ಎಲ್ಲರಿಗೂ ಸಮವಾಗಿ ವಿತರಣೆಯಾಗಬೇಕು. ಅಸಮಾನತೆ ತೊಲಗಬೇಕು. ಸಮ ಸಮಾಜದ ನಿರ್ಮಾಣವಾಗಬೇಕು ಎಂಬುದು ನಮ್ಮ ಸರ್ಕಾರದ ಆಶೋತ್ತರವಾಗಿದೆ’ ಎಂದರು.

‘ಹೇಳಿದ್ದನ್ನು ಮಾಡಿರುವುದರಿಂದ ನೀವು ನಮಗೆ ಮುಂದೆಯೂ ಬೆಂಬಲ ನೀಡಬೇಕು’ ಎಂದು ‌ಕೋರಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT