ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣದ ಬಗ್ಗೆ ಎಚ್‌ಡಿಕೆ ಮಾತನಾಡಲಿಲ್ಲವೇಕೆ?: ಡಿ.ಕೆ.ಶಿವಕುಮಾರ್‌

Published 8 ಆಗಸ್ಟ್ 2024, 16:18 IST
Last Updated 8 ಆಗಸ್ಟ್ 2024, 16:18 IST
ಅಕ್ಷರ ಗಾತ್ರ

ಮೈಸೂರು: ‘ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಮೈಸೂರು ಚಲೋ ಪಾದಯಾತ್ರೆಯುದ್ದಕ್ಕೂ ಮುಡಾ ಹಗರಣದ ಬಗ್ಗೆ ಮಾತಾಡಲೇ ಇಲ್ಲವಲ್ಲ ಏಕೆ?’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಟೀಕಿಸಿದರು.

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶದ ವೇದಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಗುರುವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮುಡಾದಲ್ಲಿ ಅವರು ನಿವೇಶನ ಪಡೆದಿದ್ದು ಹಗರಣವಾಗಿದ್ದರೆ ಹೊರಗೆ ಬರುತ್ತಿತ್ತು. ಆಗಿಯೇ ಇಲ್ಲವಲ್ಲ?’ ಎಂದು ಕೇಳಿದರು.

‘ಸಿದ್ದರಾಮಯ್ಯ ಭಾವನಾ ಜೀವಿ. 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಹಿಂದುಳಿದ ವರ್ಗದ ನಾಯಕನ ತೇಜೋವಧೆ ತಡೆಯಲು, ಇಡೀ ಸರ್ಕಾರ, ಮಲ್ಲಿಕಾರ್ಜುನ ಖರ್ಗೆ ನೇತೃತ್ವ ಮತ್ತು ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಇಡೀ ಪಕ್ಷವೇ ನಿಂತಿದೆ. ಕೆಪಿಸಿಸಿ ಅಧ್ಯಕ್ಷನಾಗಿ ಬಂಡೆಯೋ, ಬಲವೋ ಅಥವಾ ತೋಳಾಗಿಯೋ... ಅವರ ಪರವಾಗಿದ್ದೇನೆ; ಮುಂದೆಯೂ ಇರುತ್ತೇನೆ’ ಎಂದರು.

‘ಪಾದಯಾತ್ರೆ ಅವಶ್ಯಕತೆ ಇಲ್ಲ ಎಂದು ಅವರೇ ಹೇಳಿದ್ದರು. ಒತ್ತಡದಿಂದ, ಸಚಿವ ಸ್ಥಾನ ಹೋದೀತೆಂಬ ಭಯದಲ್ಲಿ ಬಂದಿದ್ದಾರೆ. ಶತ್ರುವಿನ ಶತ್ರು ಮಿತ್ರ ಎಂಬ ಸ್ಥಿತಿಯಲ್ಲಿ ಜೆಡಿಎಸ್–ಬಿಜೆಪಿಯವರಿದ್ದಾರೆ. ಅವರ ಹೋರಾಟದಲ್ಲಿ ಎಲ್ಲೆಡೆಯೂ ಜಗಳವಿದೆ’ ಎಂದರು.

‘ಭ್ರಷ್ಟಾಚಾರಿಗಳಾದ ಬಿಜೆಪಿ–ಜೆಡಿಎಸ್‌ನವರು ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಪಾಪದ ಪಾದಯಾತ್ರೆ ನಡೆಸುತ್ತಿದ್ದಾರೆ. ಅದಕ್ಕೆ ಉತ್ತರ ಕೊಡಲು ಹಾಗೂ ಪ್ರಶ್ನೆಗಳನ್ನು ಕೇಳಲು ಜನಾಂದೋಲನ ಸಮಾವೇಶ ಹಮ್ಮಿಕೊಂಡಿದ್ದೇವೆ. ಬಿಜೆಪಿ ಸರ್ಕಾರದಲ್ಲಿ 25 ಹಗರಣಗಳು, ಕುಮಾರಸ್ವಾಮಿ ಕುಟುಂಬದ ಹಗರಣಗಳಿಗೆ ಸಂಬಂಧಿಸಿದಂತೆ ಉತ್ತರವನ್ನು ಕೊಡುತ್ತೇವೆ’ ಎಂದರು.

‘ನೀವು ಸಮಾವೇಶಕ್ಕೆ ಬರುವುದು ಬೇಡ, ಜೆಡಿಎಸ್–ಬಿಜೆಪಿಯನ್ನು ನಾವೇ ಎದರಿಸುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ತವರಲ್ಲಿ ನಡೆಯುತ್ತಿರುವ ಕಾರಣದಿಂದ ಪಾಲ್ಗೊಳ್ಳಲಿದ್ದಾರೆ. ಬಹಳಷ್ಟು ವಿಚಾರಗಳನ್ನು ಹೇಳಲಿದ್ದಾರೆ. ವಿರೋಧಪಕ್ಷಗಳ ವಿರುದ್ಧ ಹೇಳಲು ನಮಗೂ ಬಹಳಷ್ಟು ವಿಷಯಗಳಿವೆ. ಅದೆಲ್ಲವನ್ನೂ ಒಂದೊಂದಾಗಿ ತಿಳಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT