ಮೈಸೂರು: ‘ರಾಜ್ಯ ಹಾಲು ಒಕ್ಕೂಟದ ಅಭಿವೃದ್ಧಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ಬೆನ್ನೆಲುಬಾಗಿದ್ದಾರೆ. ಅವರ ಎಲ್ಲ ಬೇಡಿಕೆ ಈಡೇರಿಕೆಗೆ ಶ್ರಮಿಸಲಾಗುವುದು’ ಎಂದು ಮೈಮುಲ್ ಅಧ್ಯಕ್ಷ ಆರ್.ಚಲುವರಾಜು ಭರವಸೆ ನೀಡಿದರು.
ನಗರದ ಬನ್ನೂರು ರಸ್ತೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ‘ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ನಂದಿನಿ ಉತ್ಪನ್ನಗಳು ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಷ್ಟೇ ಅಲ್ಲದೆ ದೆಹಲಿಯಲ್ಲೂ ಮಾರಾಟವಾಗುತ್ತಿವೆ. ಅದನ್ನು ಜಾಗತಿಕ ಬ್ರ್ಯಾಂಡ್ ಆಗಿಸಲು ಕ್ರಮವಹಿಸಲಾಗಿದೆ. ಅದಕ್ಕೆ ಎಲ್ಲ ಹಾಲು ಒಕ್ಕೂಟಗಳು ಸಾಂಘಿಕವಾಗಿ ಶ್ರಮಿಸುತ್ತಿವೆ. ಜೊತೆಯಲ್ಲಿಯೇ ನೌಕರರು, ರೈತರಿಗೆ ಒಕ್ಕೂಟವು ನೆರವಾಗಲಿದೆ’ ಎಂದರು.
‘ರೈತರು ಬೆಳೆದ ಬೆಲೆಗೆ ವೈಜ್ಞಾನಿಕವಾಗಿ ಬೆಲೆ ಸಿಗುತ್ತಿಲ್ಲ. ಹೈನುಗಾರಿಕೆಯು ಅವರಿಗೆ ಆಸರೆಯಾಗಿದೆ. ರೈತರ ಕೆಲಸವು ದೇವರ ಕೆಲಸ. ಸೇವಾ ಮನೋಭಾವದಿಂದ ಸಂಘದ ಸದಸ್ಯರು, ನೌಕರರು ನಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನಿರ್ದೇಶಕ ಎ.ಟಿ.ಸೋಮಶೇಖರ್ ಮಾತನಾಡಿ, ‘ಹಾಲು ಉತ್ಪಾದಕರು ಹಾಲು ಪೂರೈಕೆ ಮಾಡಿದಿದ್ದರೆ ಒಕ್ಕೂಟದ ಅಭಿವೃದ್ಧಿ ಅಸಾಧ್ಯ. ಹೀಗಾಗಿಯೇ ಸಕಾಲದಲ್ಲಿ ಹಣ ಪಾವತಿ ಮಾಡಲಾಗುತ್ತಿದೆ. ರೈತರು ಹಾಗೂ ನೌಕರರ ಬೇಡಿಕೆ ಈಡೇರಿಸಲು ಕ್ರಮವಹಿಸಲಾಗುವುದು’ ಎಂದರು.
ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಂಡಳಿ ಅಧ್ಯಕ್ಷ ಎಸ್.ಶಿವನಾಗಪ್ಪ, ‘ಸಂಘಗಳಲ್ಲಿ ಕೆಲಸ ಮಾಡುವ ನೌಕರರು, ಜೊತೆಯಲ್ಲಿಯೇ ಬೇರೆ ವೃತ್ತಿ ಮಾಡಬೇಕು. ಒಕ್ಕೂಟದ ಸಾಫ್ಟ್‌ವೇರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನ್ಯೂನತೆ ಸರಿಪಡಿಸಬೇಕಿದೆ’ ಎಂದರು.
ಸಂಘದ ಅಧ್ಯಕ್ಷೆ ಆರ್.ಮಂಗಳಾ, ‘ಸಂಘಕ್ಕೆ ಕಚೇರಿಯನ್ನು ಒಕ್ಕೂಟವು ಒದಗಿಸಿಕೊಡಬೇಕು. ಸಹಕಾರ ಸಂಘಗಳ ಸಿಬ್ಬಂದಿಯ ಪ್ರೋತ್ಸಾಹ ಧನವನ್ನು 50 ಪೈಸೆ ಹೆಚ್ಚಿಸಬೇಕು. ವಿಮೆ ಸೌಲಭ್ಯದ ಜೊತೆಗೆ ಅಕಾಲಿಕ ಮರಣ ಹೊಂದಿದ ನೌಕರರಿಗೆ ಪರಿಹಾರ ನೀಡಬೇಕು. ಒಕ್ಕೂಟದ ಲಾಭದಲ್ಲಿ ಒಂದಂಶವನ್ನು ನೌಕರರಿಗೆ ಕೊಡಬೇಕು’ ಎಂದು ಕೋರಿದರು.