ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ; ಕಾದ ಮಣ್ಣಿನಲ್ಲಿ ತೊಡೆತಟ್ಟಿದ ಪೈಲ್ವಾನರು

ಸಾಹುಕಾರ್‌ ಚೆನ್ನಯ್ಯ ಕುಸ್ತಿ ಅಖಾಡ: ಗೆಲುವಿನ ನಗೆ ಬೀರಿದ 7 ಮಂದಿ
Last Updated 11 ಅಕ್ಟೋಬರ್ 2021, 8:09 IST
ಅಕ್ಷರ ಗಾತ್ರ

ಮೈಸೂರು: ದೊಡ್ಡಕೆರೆ ಮೈದಾನ ದಲ್ಲಿರುವ ಸಾಹುಕಾರ್‌ ಚೆನ್ನಯ್ಯ ಕುಸ್ತಿ ಅಖಾಡವು ಭಾನುವಾರ ರಂಗೇರಿತ್ತು. ಸುರಿಯುತ್ತಿದ್ದ ಪ್ರಖರ ಬಿಸಿಲಿಗೆ ಅರಿಶಿಣ– ಎಣ್ಣೆ ಮಿಶ್ರಿತ ಮಣ್ಣಿನ ಕಣ ಕಾದ ಹೆಂಚಾಗಿತ್ತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪೈಲ್ವಾನರು ಗೆಲ್ಲಲು ಬೆವರು ಹರಿಸಿದರು.

ಸಾಂಪ್ರದಾಯಿಕ ದಸರಾ ಕುಸ್ತಿಗೆ ಜಿಲ್ಲಾಡಳಿತ ಅವಕಾಶ ನೀಡದಿದ್ದರೂ ಆ ಪರಂಪರೆಯನ್ನು ಮುಂದುವರಿಸಲೆಂದೇ ಮೈಸೂರು ಜಿಲ್ಲಾ ಭಾರತೀಯ ಶೈಲಿ ಕುಸ್ತಿ ಸಂಘ, ಜಯಚಾಮರಾಜೇಂದ್ರ ಒಡೆಯರ ಗರಡಿ ಸಂಘ, ಪಡುವಾರಹಳ್ಳಿಯ ಹೊಂಬಾಳೇಗೌಡರ ಗರಡಿ ವತಿಯಿಂದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. 10 ವರ್ಷದ ಬಾಲಕರಿಂದ 35 ವರ್ಷದವರೆಗಿನ ಪೈಲ್ವಾನರು ಫೈನಲ್‌ ಹಣಾಹಣಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು.

ಶಿವಮೊಗ್ಗ, ಬೆಳಗಾವಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ 14 ಮಂದಿ ಪೈಲ್ವಾನರನ್ನು ಕಳೆದೆರಡು ದಿನದ ‍ಪಂದ್ಯಾವಳಿಗಳಲ್ಲಿ ಗೆದ್ದ ಮೈಸೂರು ಭಾಗದವರು ಎದುರಾದರು. 14 ಕುಸ್ತಿ ನಡೆದವು. ಪೈಲ್ವಾನರು ಮದಗಜಗಳಂತೆ ಸೆಣೆಸುತ್ತಿದ್ದರೆ ಪ್ರೇಕ್ಷಕರಿಂದ ಚಪ್ಪಾಳೆ ಹೊಮ್ಮುತ್ತಿತ್ತು. ಎರಡೂ ಭುಜಗಳನ್ನು ಒಟ್ಟಿಗೆ ಮಣ್ಣನ್ನು ಸ್ಪರ್ಶಿಸಿ ಚಿತ್‌ ಮಾಡಲು ಪೈಲ್ವಾನರು ಸಾಹಸ ನಡೆಸಿದರು.

ಮೈಸೂರಿನ ವಿಷ್ಣು ಬಾಲಾಜಿ ಮತ್ತು ಶಿವಮೊಗ್ಗದ ಪೈಲ್ವಾನ್ ಅಕ್ರಂ ನಡುವಿನ ಕಾಳಗವು ಜಿದ್ದಾಜಿದ್ದಿನಿಂದ ಕೂಡಿತ್ತು. ಪಟ್ಟು ಬಿಡದೇ ಹೋರಾಡಿದ ಇಬ್ಬರೂ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದರು. ಬಿರುಸಿನ ಪಟ್ಟುಗಳಿಗೆ ವಿಷ್ಣು ಮಣಿಯಬೇಕಾಯಿತು. ಶಿವಮೊಗ್ಗದ ಜಾವೀದ್‌ ಕುಂಬಾರ ಕೊಪ್ಪಲಿನ ನಂದನ್‌ ವಿರುದ್ಧ ಜಯ ಸಾಧಿಸಿದರು.

ಮೈಸೂರಿನ ಭೈರನಾಯ್ಕ, ಕೆಸರೆಯ ಗವಿರಂಗಪ್ಪ ಕ್ರಮವಾಗಿ ಫಯಾಜ್‌ ಖುರೇಶಿ, ಪಡುವಾರಹಳ್ಳಿಯ ಮಾಯಂಕ ವಿರುದ್ಧ ಜಯ ಸಾಧಿಸಿದರೆ, ಆಲನಹಳ್ಳಿ ಖಯ್ಯಾಮ್‌ ವಿರುದ್ಧ ಆರ್‌.ಕೆ.ನಿತಿನ್‌ ಗೆಲುವು ಪಡೆದರು. 6 ನಿಮಿಷಗಳ ಹಣಾಹಣಿಯಲ್ಲಿ ಖಯ್ಯಾಮ್‌ ಗಾಯಗೊಂಡರು. ರಕ್ಷಣೆಗೆ ಮೊಣಕೈ ಒಡ್ಡಿದಾಗ ಮೂಳೆ ಮುರಿಯಿತು. ಪೈಲ್ವಾನ್‌ ಅಹ್ಮದ್‌ ಚಿಕಿತ್ಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT