ಮೈಸೂರು: ತಿ.ನರಸೀಪುರದ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಕೊಲೆ ಖಂಡಿಸಿ ಇಲ್ಲಿನ ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದ ಬಳಿ ಯುವ ಬ್ರಿಗೇಡ್ ಸಂಘಟನೆ ಕಾರ್ಯಕರ್ತರು ಸೋಮವಾರ ಸಂಜೆ ಪ್ರತಿಭಟಿಸಿದರು.
ಮರಣೋತ್ತರ ಪರೀಕ್ಷೆ ಮುಗಿದ ನಂತರ, ಮೃತದೇಹವನ್ನು ಆಂಬುಲೆನ್ಸ್‌ಗೆ ತರುತ್ತಿದ್ದಂತೆಯೇ, ಆಂಬುಲೆನ್ಸ್ ಮುಂಭಾಗದಲ್ಲಿ ಜಮಾ ಯಿಸಿದ ಕಾರ್ಯಕರ್ತರು, ‘ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಜಿಲ್ಲಾಧಿಕಾರಿ ಬರಬೇಕು, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು’ ಎಂದು ಒತ್ತಾಯಿಸಿ ಘೋಷಣೆ ಕೂಗಿದರು. ಪ್ರತಿಭಟನೆ ತೀವ್ರ ವಾಗುತ್ತಿದ್ದಂತೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಯಿತು.
ಸ್ಥಳಕ್ಕೆ ಬಂದ ಉಪ ವಿಭಾಗಾಧಿಕಾರಿ ರಕ್ಷಿತ್ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ‘ನನ್ನ ಪತಿ ಧರ್ಮಕ್ಕಾಗಿ ಹೋರಾಟ ಮಾಡಿದ್ದೇ ತಪ್ಪಾಯಿತೇ? ಸಂಧಾನಕ್ಕೆ ಕರೆದು ಕೊಲೆ ಮಾಡಿದ್ದಾರೆ. ಅವರಿಗೆ ಶಿಕ್ಷೆಯಾಗಲೇಬೇಕು ಅಲ್ಲಿಯವರೆಗೆ ಶವ ತೆಗೆದುಕೊಂಡು ಹೋಗುವುದಿಲ್ಲ’ ಎಂದು ಮೃತರ ಪತ್ನಿ ಪೂರ್ಣಿಮಾ ಪಟ್ಟುಹಿಡಿದರು.
‘ಜಾತಿನಿಂದನೆ ಪ್ರಕರಣದ ಅಡಿ ₹8.25 ಲಕ್ಷ ಪರಿಹಾರ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಒಪ್ಪಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹ 25 ಲಕ್ಷ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ. ಮೃತರ ಪತ್ನಿಗೆ ಕೆಲಸ ಹಾಗೂ ನಿವೃತ್ತಿ ವೇತನದ ಭರವಸೆ ನೀಡಿದ್ದಾರೆ. ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತದೆ ಎನ್ನುವ ನಂಬಿಕೆಯಿಂದ ಪ್ರತಿಭಟನೆ ಕೈಬಿಟ್ಟಿದ್ದೇವೆ’ ಎಂದು ಆರ್‌ಎಸ್‌ಎಸ್ ಮುಖಂಡ ತೋಟದಪ್ಪ ಬಸವರಾಜು
ತಿಳಿಸಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡ ಗಿರಿಧರ್ ಇದ್ದರು.
ಬಿಜೆಪಿ ತಂಡ ಭೇಟಿ ಇಂದು: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಭಾನುವಾರ ಮಧ್ಯರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ, ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ
ಹೇಳಿದರು.
ಘಟನೆಯ ಸತ್ಯಾಸತ್ಯತೆ ಅರಿಯಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಂಡ ರಚಿಸಿದ್ದಾರೆ. ತಂಡದವರು ಸತ್ಯಾಸತ್ಯತೆ ಪರಿಶೀಲಿಸಲು ಜು.11ರಂದು ಮೃತರ ಮನೆಗೆ ಭೇಟಿ ನೀಡಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರತಾಪ ಸಿಂಹ, ಶಾಸಕರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಟಿ.ಎಸ್. ಶ್ರೀವತ್ಸ, ಮುಖಂಡರಾದ ಎನ್.ಮಹೇಶ್, ಪ್ರೀತಂ ಗೌಡ, ಅಪ್ಪಣ್ಣ, ಪ್ರೊ.ಮಲ್ಲಿಕಾರ್ಜುನ, ಮೈ.ವಿ.ರವಿಶಂಕರ್, ಮಂಗಳಾ ಸೋಮಶೇಖರ್ ಈ
ತಂಡದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.