ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಗ್ರೀಷ್ಮ ರಂಗೋತ್ಸವ

Last Updated 18 ಮೇ 2019, 20:16 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದ ಹವ್ಯಾಸಿ ರಂಗತಂಡಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಂಗಾಯಣವು ಮೇ 19ರಿಂದ ಜೂನ್‌ 23ರವರೆಗೆ ಗ್ರೀಷ್ಮ ರಂಗೋತ್ಸವ ಹಮ್ಮಿಕೊಂಡಿದೆ.

ಇತ್ತೀಚೆಗೆ ನಿಧನರಾದ ರಂಗನಟಿ, ನಿರ್ದೇಶಕಿ ಎಸ್‌.ಮಾಲತಿ ಅವರಿಗೆ ಈ ರಂಗೋತ್ಸವವನ್ನು ಅರ್ಪಿಸಲಾಗಿದೆ.

ಮೇ 19ರಂದು ಸಂಜೆ 6 ಗಂಟೆಗೆ ರಂಗಾಯಣದ ಭೂಮಿಗೀತದಲ್ಲಿ ನಡೆಯುವ ಕಾರ್ಯಕ್ರಮವನ್ನು ರಂಗಕರ್ಮಿ ಪ್ರೊ.ಎಚ್‌.ಎಸ್‌.ಉಮೇಶ್‌ ಉದ್ಘಾಟಿಸಲಿದ್ದಾರೆ. ರಂಗ ನಿರ್ದೇಶಕಿ ಕೆ.ಆರ್‌.ಸುಮತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಮೇ 19ರಂದು ಸಂಜೆ 6.30ಕ್ಕೆ ಭೂಮಿಗೀತದಲ್ಲಿ ಬೆಂಗಳೂರಿನ ದೃಶ್ಯಕಾವ್ಯ ತಂಡ ಅಭಿನಯಿಸುವ ಕೆ.ವೈ.ನಾರಾಯಣಸ್ವಾಮಿ ರಚನೆಯ, ನಂಜುಂಡೇಗೌಡ ನಿರ್ದೇಶನದ ‘ಮಾಯಾಬೇಟೆ’ ನಾಟಕ ಪ್ರದರ್ಶನಗೊಳ್ಳಲಿದೆ. 26ರಂದು ಗಿರೀಶ್‌ ಮಾಚಳ್ಳಿ ನಿರ್ದೇಶನದ ಚಾರ್ವಾಕ ಟ್ರಸ್ಟ್‌ ತಂಡದವರು ಅಭಿನಯಿಸುವ ‘ಬುದ್ಧಯಾನ’ ಪ್ರದರ್ಶನವಿದೆ. ಇದು 6 ಗಂಟೆಗಳ ನಾಟಕವಾಗಿದ್ದು, ಎರಡೂವರೆ ಗಂಟೆಗೆ ಸೀಮಿತಗೊಳಿಸಲಾಗಿದೆ. ಜೂನ್‌ 2ರಂದು ದು.ಸರಸ್ವತಿ ರಚನೆಯ, ದೀಪಕ್‌ ಶ್ರೀನಿವಾಸನ್‌ ನಿರ್ದೇಶನದ ‘ಸಣ್ತಮ್ಮಿಯ ಲವ್‌ ಪುರಾಣ’ ಹಾಗೂ ವಾಣಿ ಪೆರಿಯೋಡಿ ರಚನೆಯ ದೀಪಕ್‌ ಶ್ರೀನಿವಾಸನ್‌ ನಿರ್ದೇಶನದ ‘ಕೌದಿ’ ಎಂಬ ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ವಿವರಿಸಿದರು.

ಜೂನ್‌ 9ರಂದು ರವೀಂದ್ರನಾಥ ಟ್ಯಾಗೋರ್‌ ರಚನೆಯ, ಗುರುರಾಜ ಮಾರ್ಪಳ್ಳಿ ನಿರ್ದೇಶನದ ಉಡುಪಿಯ ಸುಮನಸಾ ಕೊಡವೂರು ತಂಡದ ಕಲಾವಿದರು ಅಭಿನಯಿಸುವ ‘ರಥಯಾತ್ರೆ’, 16ರಂದು ಕುವೆಂಪು ರಚನೆಯ ಪಿಚ್ಚಳ್ಳಿ ಶ್ರೀನಿವಾಸ್‌ ನಿರ್ದೇಶನದಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಸಾರಂಗ ರಂಗ ತಂಡದ ಕಲಾವಿದರು ಅಭಿನಯಿಸುವ ‘ಜಲಗಾರ’ ನಾಟಕ ಪ್ರದರ್ಶನವಿದೆ ಎಂದರು.

22ರಂದು ಮಂಡ್ಯದ ಜನದನಿ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಮಂಜುನಾಥ ಎಲ್‌. ಬಡಿಗೇರ ನಿರ್ದೇಶನದಲ್ಲಿ ಪ್ರಸನ್ನ ಅವರ ರಚನೆಯ ‘ಮಹಿಮಾಪುರ’ ಹಾಗೂ 23ರಂದು ತೀರ್ಥಹಳ್ಳಿಯ ನಟ ಮಿತ್ರರು ತಂಡದಿಂದ ಗೋಪಾಲಕೃಷ್ಣ ಪೈ ಅವರ ಕಾದಂಬರಿ ‘ಸ್ವಪ್ನ ಸಾರಸ್ವತ’ ರಂಗರೂಪ ಪ್ರದರ್ಶನವಿದೆ. ಇದರ ರಂಗರೂಪ ಹಾಗೂ ನಿರ್ದೇಶನವನ್ನು ಎಸ್‌. ಮಾಲತಿ ಮಾಡಿದ್ದಾರೆ. ಎಲ್ಲ ನಾಟಕಗಳು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿವೆ. ಪ್ರತಿ ನಾಟಕಕ್ಕೆ ₹50 ಶುಲ್ಕವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಂಗೋತ್ಸವದ ಸಂಚಾಲಕ ಎಸ್‌.ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT