ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ಪ್ರವಾಸಿಗರಿಗೆ ಹಳ್ಳ–ಕೊಳ್ಳಗಳ ದರ್ಶನ

Last Updated 12 ಸೆಪ್ಟೆಂಬರ್ 2013, 11:22 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾಕ್ಕೆ ದಿನಗಣನೆ ಆರಂಭವಾಗಿದೆ. ದಸರಾದಲ್ಲಿ ಪಾಲ್ಗೊಳ್ಳಲು ದೇಶ–ವಿದೇಶಗಳಿಂದ ಲಕ್ಷಾಂತರ ಜನ ಸಾಂಸ್ಕೃತಿಕ ನಗರಿ ಮೈಸೂರಿಗೆ ಬರುತ್ತಾರೆ. ಸಹಸ್ರಾರು ವಾಹನಗಳು ಒಮ್ಮೆಲೇ ರಸ್ತೆಗೆ ಇಳಿಯುತ್ತವೆ. ಆದರೆ ಹಳ್ಳ–ಕೊಳ್ಳಗಳಿಂದ ಕೂಡಿದ, ಡಾಂಬರು ಕಾಣದ ರಸ್ತೆಗಳು ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿವೆ!

ದಸರಾಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ಅವಧಿಪೂರ್ವದಲ್ಲಿ ಮುಗಿಸಬೇಕು ಎಂಬುದು ಮಾತಿಗಷ್ಟೇ ಸೀಮಿತವಾಗಿದೆ. ದಸರಾ ಸಮೀಪಿಸುತ್ತಿದ್ದಂತೆ ತರಾತುರಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಪ್ರತಿ ವರ್ಷ ನಡೆದೇ ಇದೆ. ಅದು ಈ ವರ್ಷವೂ ಮುಂದುವರಿದಿದೆ.

ದಸರಾ ಮಹೋತ್ಸವಕ್ಕೆ ಬಿಡುಗಡೆಯಾದ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಸರ್ಕಾರ ರೂ 10 ಕೋಟಿ  ಬಿಡುಗಡೆ ಮಾಡಿದೆ. ದಸರಾಕ್ಕೆ ಮುನ್ನ ಹಳ್ಳ–ಕೊಳ್ಳಗಳಿಂದ ಕೂಡಿದ ರಸ್ತೆಗಳನ್ನು ಡಾಂಬರು ಹಾಕುವ ಕೆಲಸ ಈಗಷ್ಟೇ ಕೈಗೆತ್ತಿಕೊಳ್ಳಲಾಗಿದೆ.

ಅರಮನೆ ವರಾಹ ದ್ವಾರದ ಮುಂಭಾಗ ಹಾದು ಹೋಗಿರುವ ರಸ್ತೆ, ನೀಲಗಿರಿ ರಸ್ತೆ, ಹಾರ್ಡಿಂಜ್‌ ವೃತ್ತ, ಕೆ.ಆರ್‌. ವೃತ್ತ ಸುತ್ತಮುತ್ತಲಿನ ರಸ್ತೆಯಲ್ಲಿ ಹಳ್ಳಗಳು ಬಾಯ್ತೆರೆದು ನಿಂತಿವೆ. ನೀಲಗಿರಿ ರಸ್ತೆಯಲ್ಲಿ ಒಮ್ಮೆ ಹೋದರೆ ‘ಸಾಕಪ್ಪ ಈ ರಸ್ತೆ ಸಹವಾಸ’ ಎಂಬುವಷ್ಟರ ಮಟ್ಟಿಗೆ ಬೇಸರ ತರಿಸುತ್ತದೆ. ಹಳ್ಳಕೊಳ್ಳದ ಜೊತೆಗೆ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ವಾಹನ ಸವಾರರನ್ನು ಮತ್ತಷ್ಟು ಹೈರಾಣ ಮಾಡುತ್ತದೆ.

ಜಂಬೂ ಸವಾರಿ ಮಾರ್ಗ
ಕೇವಲ ಅರಮನೆ ಸುತ್ತಲಿನ ರಸ್ತೆಗಳು ಮಾತ್ರ ಹಾಳಾಗಿಲ್ಲ. ದಸರಾ ಜಂಬೂ ಸವಾರಿ ಹಾದು ಹೋಗುವ ನೂ್ಯ ಸಯ್ಯಾಜಿರಾವ್‌ ರಸ್ತೆಯ ಸ್ಥಿತಿಯಂತು ಹೇಳತೀರದಾಗಿದೆ. ಬಂಬೂ ಬಜಾರ್‌ನ ಬಳಿ ರಸ್ತೆ ಡಾಂಬರು ಕಿತ್ತು ಬಂದಿವೆ. ಜೊತೆಗೆ ಈ ರಸ್ತೆಯಲ್ಲಿ ಸಾಗಿದರೆ ಸಾಕಷ್ಟು ದೂಳು ಮೇಲೇಳುತ್ತದೆ.

ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಸರಸ್ವತಿಪುರಂ ಮುಖ್ಯರಸ್ತೆ, ವಾಣಿವಿಲಾಸ ರಸ್ತೆ, ಎಂ.ಜಿ. ರಸ್ತೆಯ ದುಃಸ್ಥಿತಿ ಹೇಳತೀರದಾಗಿದೆ. ಹತ್ತು ದಿನಗಳ ಹಿಂದೆ ರಸ್ತೆ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗಿದೆ. ಆದರೆ ಶೇ 20ರಷ್ಟು ಕೆಲಸ ಇನ್ನೂ ಆಗಿಲ್ಲ. ದಸರಾಕ್ಕೆ 25 ದಿನಗಳು ಮಾತ್ರ ಬಾಕಿ ಉಳಿದಿವೆ. ಆದರೆ ದಸರಾ ಒಳಗೆ ರಸ್ತೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಳ್ಳುವ ಯಾವುದೇ ಲಕ್ಷ್ಮಣಗಳು ಕಾಣುತ್ತಿಲ್ಲ. 

ಕಳೆದ ವರ್ಷ ದಸರಾ ಒಳಗೆ ರಾಜಮಾರ್ಗ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ದಸರಾ ಮುಗಿದು ಮತ್ತೊಂದು ದಸರಾ ಸಮೀಪಿಸುತ್ತಿದ್ದರೂ ರಾಜಮಾರ್ಗ ಪೂರ್ಣಗೊಳ್ಳುವುದು ಕಷ್ಟ. ಅರಮನೆ ವರಾಹ ದ್ವಾರ ಮುಂಭಾಗದ ರಸ್ತೆ ಮತ್ತು ನೀಲಗಿರಿ ರಸ್ತೆಯನ್ನು ಅಗೆದು ಮಣ್ಣನ್ನು ರಸ್ತೆಯ ಬದಿಯಲ್ಲಿ ಹಾಕಲಾಗಿದೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆ ಕಾಮಗಾರಿಯನ್ನು ದಸರಾ ಒಳಗೆ ಪೂರ್ಣಗೊಳಿಸುವಂತೆ ಸರ್ಕಾರ ಮೊದಲೇ ಹಣ ಬಿಡುಗಡೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದಸರಾ ಒಳಗೆ ಕಾಮಗಾರಿಯನ್ನು ಮುಗಿಸಿದ್ದೇ ಆದಲ್ಲಿ ದೇಶ ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಪ್ರವಾಸಿಗರು ನೆಮ್ಮದಿಯಾಗಿ ರಸ್ತೆಯಲ್ಲಿ ಸಂಚರಿಸಬಹುದು. ಇಲ್ಲವಾದಲ್ಲಿ ಪ್ರವಾಸಿಗರು ಹಿಡಿಶಾಪ ಹಾಕಲಿದ್ದಾರೆ.

‘ವರ್ಕ್‌ ಆರ್ಡರ್‌ ನೀಡಲಾಗಿದೆ’
ದಸರಾಕ್ಕೆ ನಗರದ ಪ್ರಮುಖ ರಸ್ತೆಗಳನ್ನು ಸುಂದರಗೊಳಿಸಲು ಪಾಲಿಕೆ ವತಿಯಿಂದ ರೂ 4.80 ಕೋಟಿ ಟೆಂಡರ್‌ ಕರೆದು, ವರ್ಕ್‌ ಆರ್ಡರ್ ನೀಡಲಾಗಿದೆ. ಗುರುವಾರದಿಂದಲೇ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ. ಇದೇ 25ರ ಒಳಗೆ ಡಾಂಬರೀಕರಣ ಪೂರ್ಣಗೊಳಿಸಲು ಟೆಂಡರ್‌ ಪಡೆದವರಿಗೆ ಗಡುವು ನೀಡಲಾಗಿದೆ. ಗಡುವಿನ ಒಳಗೆ ಕಾಮಗಾರಿ ಮುಗಿಯಲಿದೆ
– ಸಿ. ಶಿಖಾ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT