ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನ ಪೂರೈಸಿದ ಕಡಣಿ ಶಾಲೆ

300 ವಿದ್ಯಾರ್ಥಿಗಳು, 9 ಶಿಕ್ಷಕರು; ವಿವಿಧ ಸ್ಪರ್ಧೆ ಆಯೋಜನೆ
Last Updated 4 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಅಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ ಬರೋಬ್ಬರಿ 114 ವರ್ಷ. 1905ರ ಡಿಸೆಂಬರ್ 1ರಂದು ಈ ಶಾಲೆ ಸ್ಥಾಪನೆ ಆಗಿದೆ.

ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಈ ಶಾಲೆ ತಾಲ್ಲೂಕಿನ ಕೆಲವೇ ಶಾಲೆಗಳ ಶತಮಾನ ಕಂಡ ಪಟ್ಟಿಯಲ್ಲಿದೆ. ವಿವಿಧ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಮುಂದಿನ ವರ್ಷ ಶತಮಾನೋತ್ಸವ ಸಂಭ್ರಮವನ್ನು ಆಚರಿಸಲಿದೆ.

ಮಕ್ಕಳ ಸಾಧನೆ: 1ರಿಂದ 7ನೇ ತರಗತಿವರೆಗೆ 300 ವಿದ್ಯಾರ್ಥಿಗಳು ಓದುತ್ತಿದ್ದು, 9 ಜನ ಶಿಕ್ಷಕರು ಇದ್ದಾರೆ. ಆಟ ಪಾಠದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮುಂದಿದ್ದು, ಶಾಲೆಗೆ ಹತ್ತಾರು ಪದಕಗಳನ್ನು ತಂದಿದ್ದಾರೆ. ಪ್ರಸಕ್ತ ವರ್ಷದ ಕ್ರೀಡಾ ಸ್ಪರ್ಧೆಯಲ್ಲಿ ಥ್ರೋಬಾಲ್ ತಂಡ ಜಿಲ್ಲಾ ಮಟ್ಟದ ದ್ವಿತೀಯ ಬಹುಮಾನ ಪಡೆದುಕೊಂಡಿದೆ. 2017ರಲ್ಲಿ ಕೊಕ್ಕೊ ತಂಡ ಮತ್ತು 2018ರಲ್ಲಿ ಹೆಣ್ಣುಮಕ್ಕಳ ಥ್ರೋಬಾಲ್ ತಂಡಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿವೆ.

ಶಿಕ್ಷಕರ ಗರಿಮೆ: ಪ್ರೊಜೆಕ್ಟರ್ ಬಳಸಿ ಮಕ್ಕಳಲ್ಲಿ ಕಲಿಕಾ ಉತ್ಸಾಹ ಮೂಡಿಸಲಾಗುತ್ತಿದೆ. ಅಲ್ಲದೇ, ವಾಚನಾಲಯದಲ್ಲಿ ಸಾವಿರಕ್ಕೂ ಹೆಚ್ಚು ಪುಸ್ತಕಗಳು ಇವೆ. ಪ್ರತಿ ಶನಿವಾರ ಪುಸ್ತಕ ನೀಡಿ ಓದಲು ಪ್ರೇರೆಪಿಸಲಾಗುತ್ತದೆ.

ಇಲ್ಲಿನ ಶಿಕ್ಷಕರಿಗೆ ಶಿಕ್ಷಣ ಇಲಾಖೆಯು ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಮೂರು ವರ್ಷ ಈ ಶಾಲೆಯ ಶಿಕ್ಷಕರಿಗೆ ಪ್ರಶಸ್ತಿ ನೀಡಿದೆ. 2015ರಲ್ಲಿ ಎ.ಕೆ.ಕಲ್ಲೂರಮಠ, 2015ರಲ್ಲಿ ಅಶೋಕ ಬಡಿಗೇರ, 2017ರಲ್ಲಿ ಸುಭಾಸಚಂದ್ರ ನಾವಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕೈ ಬರಹ ಪತ್ರಿಕೆ: ಇಲ್ಲಿನ ಮಕ್ಕಳು 2000 ಮತ್ತು 2001ರಲ್ಲಿ ‘ಬೆಳಕು’ ಮಾಸಿಕ ಕೈ ಬರಹ ಪತ್ರಿಕೆ ತರುತ್ತಿದ್ದರು. ಅಂದು ಚಿನ್ನರ ಬೆಳಕು ವಾರ್ಷಿಕ ಸಂಚಿಕೆಯನ್ನು ರಾಜಶ್ರೀ ಲಾಳಸಂಗಿ, ಭೋಗಪ್ಪ ಕಂಬಾರ, ಇಸ್ಮಾಯಿಲ್ ಮೋರಟಗಿ ತಂಡ ಹೊರತಂದಿದ್ದರು.

‘ಅಂದಿನ ದಿನಗಳಲ್ಲಿ ಇಲ್ಲಿನ ಮಕ್ಕಳು ನಾಡಿನ ಪತ್ರಿಕೆಗಳಿಗೆ ಚುಟುಕ, ಕವಿತೆ, ಕಥೆ ಕಳುಹಿಸುತ್ತಿದ್ದರು’ ಎಂದು ಮುಖ್ಯಶಿಕ್ಷಕ ಜಿ.ಎನ್.ಪಾಟೀಲ ಹೇಳಿದರು. ಇದೇ ಶಾಲೆಯಲ್ಲಿ ಕಲಿತು ಇದೇ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ಶಿವಣ್ಣಮಾಸ್ತರ ಕತ್ತಿ ಮೂರು ಕೃತಿಗಳನ್ನು ರಚಿಸಿದ್ದಾರೆ.

ವಿಶೇಷ ಬಿಸಿಯೂಟ: ಜೂನ್ ತಿಂಗಳಲ್ಲಿ ಸಂತೋಷ ಕ್ಷತ್ರಿ ಎಸ್‌ಡಿಎಂಸಿ ಅಧ್ಯಕ್ಷರಾದ ಬಳಿಕ ಕೈಯಿಂದ ಹಣ ನೀಡಿ ಬಿಸಿಯೂಟದಲ್ಲಿ ಬದಲಾವಣೆ ತಂದಿದ್ದಾರೆ. ಎಲ್ಲಾ 300 ಮಕ್ಕಳಿಗೂ ವಾರದ ಮೊದಲ ದಿನ ಸೋಮವಾರ ಚಪಾತಿ ಊಟ ಮತ್ತು ಕಾಳಿನ ಪಲ್ಯ ಅಥವಾ ಬದನೆಕಾಯಿ ಪಲ್ಯ, ಶುಕ್ರವಾರ ಶಿರಾ ಮತ್ತು ಮಸಾಲೆರೈಸ್, ಶನಿವಾರ ಇಡ್ಲಿ ಬಡಿಸಲಾಗುತ್ತಿದೆ.

*
ಇಲ್ಲಿನ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡಬೇಕಾಗಿದೆ. ಹೀಗಾಗಿ, ಮುಂದಿನ ವರ್ಷದಿಂದ ಎಲ್‌ಕೆಜಿ ತರಗತಿ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ
–ಸಂತೋಷ ಕ್ಷತ್ರಿ,ಅಧ್ಯಕ್ಷ, ಎಸ್‌ಡಿಎಂಸಿ

*
ಮುಂದಿನ ವರ್ಷ ಶಾಲೆಗೆ 115 ವರ್ಷವಾಗುತ್ತದೆ. ಅದರ ಅಂಗವಾಗಿ ವಿಶೇಷ ಯೋಜನೆ ಸಿದ್ಧಪಡಿಸಿದ್ದೇವೆ. ಶತಮಾನ ಸಂಭ್ರಮಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಗಳು ಪ್ರಗತಿಯಲ್ಲಿವೆ
–ಜಿ.ಎನ್.ಪಾಟೀಲ,ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT