ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಮೇಳ ಆಯೋಜನೆ ಶ್ಲಾಘನೀಯ; ನಿರಾಣಿ

ಬೃಹತ್ ಉದ್ಯೋಗ ಮೇಳಕ್ಕೆ ಸಚಿವ ಮುರುಗೇಶ್ ನಿರಾಣಿ ಚಾಲನೆ
Last Updated 25 ಏಪ್ರಿಲ್ 2022, 5:23 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹರಿಹರ: ಯುವಜನರಿಗೆ ಉದ್ಯೋಗ ದೊರಕಿಸಲು ವಚನಾನಂದ ಸ್ವಾಮೀಜಿ ಅವರು ಉದ್ಯೋಗ ಮೇಳ ಆಯೋಜಿಸಿದ್ದು ಶ್ಲಾಘನೀಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಸಂಶೆ ವ್ಯಕ್ತಪಡಿಸಿದರು.

ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಭಾನುವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಥಮ ಬಾರಿಗೆ ನಾಡಿನ 115 ಪ್ರತಿಷ್ಠಿತ ಸಂಸ್ಥೆಗಳು ಒಂದೇ ಚಾವಣಿಯಲ್ಲಿ ನೇಮಕಾತಿ ಪ್ರಕ್ರಿಯೆ ಇಲ್ಲಿ ನಡೆಸಿವೆ. ಪ್ರತಿಷ್ಠಿತ ಕಂಪನಿಗಳಾದ ಕಿರ‍್ಲೋಸ್ಕರ್, ಜೆಎಸ್‌ಡಬ್ಲ್ಯೂ, ಎಚ್‌ಪಿ, ಟಾಟಾ ಮೋಟಾರ್ಸ್, ಐಸಿಐ, ಐಎಫ್ಐ ಮೇಳದಲ್ಲಿ ಪಾಲೊಂಡಿದ್ದು, ಎಸ್ಸೆಸ್ಸೆಲ್ಸಿಯಿಂದ ಐಟಿಐ, ಡಿಪ್ಲೊಮಾ, ಎಂಬಿಎ, ಎಂಎಸ್‌ಡಬ್ಲ್ಯೂ ಸೇರಿ ವಿವಿಧ ಪದವೀಧರರು ಮೇಳದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ ಎಂದರು.

ಮಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಮಾತನಾಡಿ, ‘ನನ್ನ ಜನ್ಮ ದಿನಾಚರಣೆಯನ್ನು ಬೃಹತ್ ಉದ್ಯೋಗ ಮೇಳ ನಡೆಸುವ ಮೂಲಕ ಬಡ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ಪ್ರಯತ್ನ ನಡೆಸಿದ್ದು ಸಂತಸ ತಂದಿದೆ’ ಎಂದರು.

ಕೋವಿಡ್ ಕಾರಣ ನಿರುದ್ಯೋಗ ಸಮಸ್ಯೆ ಬಿಗಡಾಯಿಸಿದ್ದು, ಮನೆ ಮನೆಯಲ್ಲೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈ ಕುರಿತು ಸಚಿವ ಮುರುಗೇಶ್ ನಿರಾಣಿಯವರ ಜೊತೆ ಚರ್ಚಿಸಿದಾಗ ಉದ್ಯೋಗ ಮೇಳ ಆಯೋಜಿಸುವ ಕಲ್ಪನೆ ನೀಡಿದರು. ರಾಜ್ಯದ ಕೇಂದ್ರ ಭಾಗದಲ್ಲಿರುವ ಹರಿಹರದಲ್ಲಿ ಮೇಳ ನಡೆಸಿದರೆ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುತ್ತದೆ ಎಂದರು. ನಂತರ ಸಚಿವ ಅಶ್ವತ್ಥನಾರಾಯಣ ಅವರನ್ನು ಸಂಪರ್ಕಿಸಿ ರಾಜ್ಯ ಕೌಶಲಾಭಿವೃದ್ಧಿ ಇಲಾಖೆಯ ಸಹಕಾರ ಪಡೆಯಲಾಯಿತು ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳಿಗೆ ಒಂದೇ ಮೀಸಲಾತಿ ಸಿಕ್ಕರೆ ಒಗ್ಗಟ್ಟು ಮೂಡುತ್ತದೆ ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಬಸವರಾಜ ದಿಂಡೂರು, ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಧರ್ಮದರ್ಶಿಗಳಾದ ಚಂದ್ರಶೇಖರ್ ಪೂಜಾರ್, ಪ್ರಕಾಶ್ ಪಾಟೀಲ್, ಎನ್.ಜಿ. ನಾಗನಗೌಡರು, ನಾಗರಾಜ್, ಪಿ.ಡಿ. ಶಿರೂರು, ಹಾವೇರಿ ಮಲ್ಲಿಕಾರ್ಜುನ ಅವರೂ ಈ ಸಂದರ್ಭದಲ್ಲಿ ಇದ್ದರು.

ಗೃಹ ಸಚಿವರ ಬದಲಾವಣೆ ಊಹಾಪೋಹ: ಸಚಿವ

ಗೃಹ ಸಚಿವರ ಬದಲಾವಣೆ ಕೇವಲ ಊಹಾಪೋಹ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ, ದಿವಂಗತ ಅನಂತಕುಮಾರ್ ಅವರ ಜೊತೆ ಕೆಲಸ ಮಾಡಿದ್ದು, ಉತ್ತಮ ಅನುಭವಿಯಾಗಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

‘ಸರ್ಕಾರದ ಸಂಪುಟದಲ್ಲಿರುವ ನಾನು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ದೊರಕಿಸುವ ಹೋರಾಟದಲ್ಲಿ ನೇರವಾಗಿ ಭಾಗವಹಿಸಲು ಆಗುವುದಿಲ್ಲ. ಮೀಸಲಾತಿ ಕೊಡಿಸಲು ಎಲ್ಲಾ ರೀತಿಯಲ್ಲಿ ಪರೋಕ್ಷ ಪ್ರಯತ್ನ ನಡೆಸಿದ್ದೇನೆ. ಮೀಸಲಾತಿ ಸಂಬಂಧ ಸಮೀಕ್ಷೆ ನಡೆಸುತ್ತಿರುವ ಜಯಪ್ರಕಾಶ ಹೆಗ್ಡೆ ಆಯೋಗಕ್ಕೆ ಎಲ್ಲಾ ಪೂರಕ ಮಾಹಿತಿ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT