ಬಯಲು ಬಹಿರ್ದೆಸೆ ಮುಕ್ತ ಗ್ರಾಮಕ್ಕಾಗಿ ಪಣ..!, ಗ್ರಾ.ಪಂ.ಸದಸ್ಯರ ವಿನೂತನ ಯತ್ನ

ವಿಜಯಪುರ: ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂಬ ಸಂಕಲ್ಪ ತೊಟ್ಟ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು, ತಮ್ಮೂರಿನ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರಿಗೆ ಸ್ವತಃ ತಾವೇ ಮುಂಚೂಣಿಯಲ್ಲಿ ನಿಂತು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿದ್ದಾರೆ.
ಮುಂಬರುವ ಮಹಾತ್ಮ ಗಾಂಧಿ (ಅ.2) ಜಯಂತಿಯೊಳಗೆ, ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಸಂಕಲ್ಪ ತೊಟ್ಟಿರುವ ಜಿಲ್ಲಾ ಪಂಚಾಯ್ತಿಯ ಕಾರ್ಯಕ್ಕೆ ಕೈ ಜೋಡಿಸಲು ಬಸವನಬಾಗೇವಾಡಿ ತಾಲ್ಲೂಕು ದಿಂಡವಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಮನಕೇರಿ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ ಶಂಕರಗೌಡ ಪಾಟೀಲ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
‘ಊರಿನ ಎಲ್ಲರ ಮನೆಗೂ ತೆರಳಿ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸುವ ಯತ್ನ ನಡೆಸಿದೆ. ಈ ಸಂದರ್ಭ ಬಹುತೇಕರು ಹಣಕಾಸು, ಮರಳಿನ ಸಮಸ್ಯೆ ಹೇಳಿಕೊಂಡರು. ಹೀಗಾಗಿ ನಾನೇ ಸ್ವತಃ ಶೌಚಾಲಯ ನಿರ್ಮಿಸಿಕೊಟ್ಟು, ಸರ್ಕಾರದ ಸಹಾಯ ಧನ ಪಡೆದುಕೊಳ್ಳಲು ನಿರ್ಧರಿಸಿದೆ.
ಮೊದಲ ಹಂತದಲ್ಲಿ 25 ಸಿದ್ಧ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಸದ್ಯ 40 ಶೌಚಾಲಯಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಶೌಚಾಲಯ ಬೇಕು ಎನ್ನುವವರು ಆರ್ಥಿಕ ಸಮಸ್ಯೆ ಹೇಳಿಕೊಂಡು ಬಂದರೆ, ಅರ್ಜಿ ಪಡೆದು ನಿರ್ಮಿಸಿಕೊಡುವುದಾಗಿ’ ಗ್ರಾಮ ಪಂಚಾಯ್ತಿ ಸದಸ್ಯ ಶಂಕರಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೊದಲು ನಾವೇ ಖರ್ಚ್ ಮಾಡಿ ಪಾಯಖಾನೆ ಕಟ್ಟಿಸಿಕೊಂಡ್ರ ಸರ್ಕಾರದವ್ರು ರೊಕ್ಕ ಕೊಡ್ತಾರ. ಆದ್ರ ನಮ್ಮ ಟೈಂಗೆ ರೊಕ್ಕ ಬರೋದಿಲ್ಲ. ಹಿಂಗಾಗಿ ರೊಕ್ಕದ ಸಮಸ್ಯೆಯಿಂದ ಪಾಯಖಾನೆ ಕಟ್ಟಿಸಿಕೊಂಡಿರಲಿಲ್ಲ. ಶಂಕರಗೌಡ್ರು ನಾನೇ ಕಟ್ಟಿಸಿಕೊಡ್ತೀನಿ. ಅರ್ಜಿ ಕೊಡ್ರಿ ಅಂಥ ಹೇಳಿ, ಹದಿನೈದು ದಿನದ ಹಿಂದ್ ಕಟ್ಟಿಸಿಕೊಟ್ಟಾರ. ಬಾಳ ಚಲೋ ಆಗ್ಯಾದ್ರಿ. ಹೆಣ್ಣುಮಕ್ಕಳಿಗೆ ಆಗುತ್ತಿದ್ದ ಮುಜುಗುರ ತಪ್ಪಿದಂತಾಗ್ಯಾದ. ಈಗ ಯಾರು ಹೊರಗ ಶೌಚಕ್ಕೆ ಹೋಗೋದಿಲ್ಲ’ ಎನ್ನುತ್ತಾರೆ ಗ್ರಾಮದ ಮಲ್ಲಯ್ಯ ಮಠ.
‘ಪಂಚಾಯ್ತಿ ವ್ಯಾಪ್ತಿಯ ಎಲ್ಲ ಹಳ್ಳಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ. ಮರಳಿನ ಸಮಸ್ಯೆಯಿಂದ ಕೆಲ ಜನರು ಶೌಚಾಲಯ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನರಿತ ಶಂಕರಗೌಡ ಕಾಮನಕೇರಿಯಲ್ಲಿ ಸ್ವತಃ ತಾವೇ ಖರ್ಚು ಮಾಡಿ ಶೌಚಾಲಯಗಳನ್ನು ನಿರ್ಮಿಸಿಕೊಟ್ಟು, ಅವರ ಖಾತೆಗೆ ಜಮಾಗೊಳ್ಳುವ ಸರ್ಕಾರದ ಸಹಾಯಧನ ಪಡೆದುಕೊಳ್ಳುತ್ತಿದ್ದಾರೆ.
ಈ ದಿಟ್ಟ ನಿರ್ಧಾರದಿಂದ ನಿರೀಕ್ಷೆಗೂ ಮೀರಿ ಶೌಚಾಲಯಗಳು ನಿರ್ಮಾಣಗೊಳ್ಳುತ್ತಿವೆ. ಅವರಂತೆ ಇತರೆ ಸದಸ್ಯರೂ ಮುಂದಾದರೇ, ನಮ್ಮ ಪಂಚಾಯ್ತಿಯೂ ಬಯಲು ಬಹಿರ್ದೆಸೆ ಮುಕ್ತವಾಗಲಿದೆ’ ಎಂದು ದಿಂಡವಾರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಮನಗೌಡ ನರಸಲಗಿ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.