ಭಾನುವಾರ, ಸೆಪ್ಟೆಂಬರ್ 22, 2019
25 °C
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರೀಕ್ಷೆಯಲ್ಲಿ ಹಿರಿಯ ಅಧಿಕಾರಿಗಳು

ಪೊಲೀಸರಿಗೆ ದೊರಕದ ವಸತಿಗೃಹ ಪ್ರವೇಶ ಭಾಗ್ಯ

Published:
Updated:
Prajavani

ಶಿವಮೊಗ್ಗ: ಪೊಲೀಸ್‌ ಸಿಬ್ಬಂದಿಗಾಗಿ ಸರ್ಕಾರ ನಿರ್ಮಿಸಿದ ವಸತಿಗೃಹಗಳ ಫಲಾನುಭವಿಗಳಿಗೆ ವರ್ಷವಾದರೂ ಪ್ರವೇಶ ಭಾಗ್ಯ ದೊರೆತಿಲ್ಲ. 

ಜಿಲ್ಲೆಯ ಪೊಲೀಸರಿಗೆ ನೀಡಲಾಗಿರುವ ಬಹುತೇಕ ವಸತಿ ಗೃಹಗಳು ಅತ್ಯಂತ ಹಳೆಯದಾಗಿವೆ. ಅಲ್ಲದೇ ಹಲವು ಪೊಲೀಸರಿಗೆ ವಸತಿ ಸೌಲಭ್ಯ ಇಲ್ಲದ ಕಾರಣ ದುಬಾರಿ ಬಾಡಿಗೆ ತೆತ್ತು ಖಾಸಗಿ ಮನೆಗಳಲ್ಲಿ ವಾಸವಿದ್ದರು. ವಸತಿ ಗೃಹಗಳ ಬೇಡಿಕೆ ಮನಗಂಡ ಸರ್ಕಾರ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಮೂಲಕ 250 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ವಸತಿ ಗೃಹಗಳು ಸಿದ್ಧಗೊಂಡು ವರ್ಷವಾದರೂ ಹಂಚಿಕೆಯಾಗದೆ ಹಾಗೆ ಉಳಿದಿವೆ.

ಜಿಲ್ಲೆಯಲ್ಲಿ 240 ಸಿಬ್ಬಂದಿ ಹಾಗೂ 10 ಅಧಿಕಾರಿಗಳ ವಸತಿ ಗೃಹಗಳ ಸಂಕೀರ್ಣ ನಿರ್ಮಿಸಲಾಗಿದೆ. ಶಿವಮೊಗ್ಗದಲ್ಲಿ 96 ಸಿಬ್ಬಂದಿ, 6 ಅಧಿಕಾರಿಗಳು, ಭದ್ರಾವತಿಯಲ್ಲಿ 72 ಸಿಬ್ಬಂದಿ, 4 ಅಧಿಕಾರಿಗಳು, ತೀರ್ಥಹಳ್ಳಿ, ಸಾಗರ ಮತ್ತು ಶಿಕಾರಿಪುರದಲ್ಲಿ ತಲಾ 24 ಸಿಬ್ಬಂದಿ ಗೃಹಗಳ ವಸತಿ ಸಂಕೀರ್ಣ ನಿರ್ಮಿಸಲಾಗಿದೆ. ₹47 ಕೋಟಿ ವೆಚ್ಚದ ಈ ಕಾಮಗಾರಿಗಳಿಗೆ 2017-18ನೇ ಸಾಲಿನಲ್ಲಿ ಚಾಲನೆ ನೀಡಲಾಗಿತ್ತು. ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್ ಖರೆ, ಅಶ್ವಿನಿ ಅವರ ಅವಧಿಯಲ್ಲಿ ಪೂರ್ಣಗೊಂಡು ಈಗಾಗಲೇ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಆಯಾ ವಿಭಾಗದ ಡಿವೈಎಸ್‌ಪಿಗಳು ವಸತಿ ಗೃಹಗಳ ನಿರ್ಮಾಣದ ಗುಣಮಟ್ಟ ಪರಿಶೀಲಿಸಿ ವರದಿ ನೀಡಿದ್ದಾರೆ. ವರದಿ ಆಧಾರದಲ್ಲಿ ನಿಗಮದಿಂದ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿ ಅಭಿವನ್ ಖರೆ ಅವಧಿಯಲ್ಲೇ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲಾಗಿದೆ. ಹಂಚಿಕೆಯನ್ನೂ ಮಾಡಲಾಗಿತ್ತು. ತಮಗೆ ಮಂಜೂರಾದ ವಸತಿ ಗೃಹಗಳಲ್ಲಿ ಆಗಬೇಕಿರುವ ಸಣ್ಣಪುಟ್ಟ ಬದಲಾವಣೆ ಮಾಡಿಸಿಕೊಳ್ಳಲು ಅವಕಾಶವನ್ನೂ ನೀಡಲಾಗಿತ್ತು. ಅಶ್ವಿನಿ ಅವರ ಅವಧಿಯಲ್ಲಿ ಎಲ್ಲ ಕಾರ್ಯಗಳು ಪೂರ್ಣಗೊಂಡಿದ್ದವು. ಆದರೂ, ಇದುವರೆಗೆ ಮನೆಗಳ ಪ್ರವೇಶ ಭಾಗ್ಯ ಫಲಾನುಭವಿ ಪೊಲೀಸರಿಗೆ ದೊರೆತಿಲ್ಲ.

ಜಿಲ್ಲೆಯಲ್ಲಿ 917 ವಸತಿ ಗೃಹಗಳಿವೆ. ಹೊಸದಾಗಿ ನಿರ್ಮಾಣಗೊಂಡ 250 ಸೇರಿದರೆ ಒಟ್ಟು ವಸತಿ ಗೃಹಗಳ ಸಂಖ್ಯೆ 1,176 ಆಗುತ್ತದೆ. ಜಿಲ್ಲಾ ಪೊಲೀಸ್‌ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇ 60 ಸಿಬ್ಬಂದಿಗೆ ವಸತಿ ಸೌಲಭ್ಯ ಸಿಗುತ್ತದೆ.

ಮುಖ್ಯಮಂತ್ರಿ ಆಗಮನದ ನಿರೀಕ್ಷೆ:

ರಾಜ್ಯದಲ್ಲಿ ಮೈತ್ರಿ ಸರ್ಕಾರದ ಪತನವಾಗಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಅವರ ಮೂಲಕವೇ ವಸತಿ ಗೃಹಗಳ ಉದ್ಘಾಟನೆ ನೆರವೇರಿಸಬೇಕು ಎಂದು ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಇತರೆ ಜನಪ್ರತಿನಿಧಿಗಳ ಸಮಯದ ಹೊಂದಾಣಿಕೆ ಸಾಧ್ಯವಾಗಿಲ್ಲ. ಹಾಗಾಗಿ,ಉದ್ಘಾಟನೆ ಭಾಗ್ಯ ದೊರೆತಿಲ್ಲ ಎಂದು ಹಲವು ಪೊಲೀಸರು ಮಾಹಿತಿ ನೀಡುತ್ತಾರೆ.

ವಸತಿ ಗೃಹಗಳ ಹಂಚಿಕೆ ಪ್ರಕ್ರಿಯೆ ಮುಗಿದಿದೆ. ಉದ್ಘಾಟನೆ ದಿನ ನಿಗದಿ ಮಾಡಲು ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ ಅವರನ್ನು ಕೋರಲಾಗಿದೆ. ಎಲ್ಲವೂ ಶೀಘ್ರದಲ್ಲೇ ಸುಖಾಂತ್ಯವಾಗಲಿವೆ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್. 

Post Comments (+)