ನಕಲಿ ರಾಷ್ಟ್ರೀಯ ವಾದಿಗಳು, ಬಹುತ್ವದ ಸಂಘರ್ಷ: ಎಚ್.ವಿಶ್ವನಾಥ್

ಶುಕ್ರವಾರ, ಮೇ 24, 2019
29 °C
ಲೋಕಸಭಾ ಚುನಾವಣೆ ಕುರಿತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಬಣ್ಣನೆ

ನಕಲಿ ರಾಷ್ಟ್ರೀಯ ವಾದಿಗಳು, ಬಹುತ್ವದ ಸಂಘರ್ಷ: ಎಚ್.ವಿಶ್ವನಾಥ್

Published:
Updated:

ಶಿವಮೊಗ್ಗ: ನಕಲಿ ರಾಷ್ಟ್ರೀಯ ವಾದಿಗಳು ಮತ್ತು ಬಹುತ್ವ ವಾದಿಗಳ ನಡುವಿನ ಸಂಘರ್ಷವೇ ಈ ಚುನಾವಣೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಬಣ್ಣಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆ ತುಂಬಾ ಪ್ರಮುಖ್ಯತೆ ಪಡೆದಿದೆ. ಪ್ರಧಾನಿ ಮೋದಿಯ ತಪ್ಪು ಹೆಜ್ಜೆಗಳು, ಅವರು ಕೊಟ್ಟ ಸುಳ್ಳು ಆಶ್ವಾಸನೆಗಳು, ಯುವಕರಿಗೆ ಮಾಡಿದ ದ್ರೋಹ, ಉದ್ಯೋಗ ಕಡಿತ ಇವೆಲ್ಲವೂ ಮತ್ತೆ ಮರುಕಳಿಸಬಾರದು. ಈ ನಕಲಿ ರಾಷ್ಟ್ರವಾದಿಗಳು ಮತ್ತೆ ತಲೆಎತ್ತಬಾರದು. ಅದಕ್ಕಾಗಿ ಈ ಬಾರಿ ಬಿಜೆಪಿ ಸೋಲಿಸಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

ದೇಶದ ಸೈನಿಕರ ವಿಷಯಗಳನ್ನೂ ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಪ್ರಧಾನಿಗೆ ದೇಶದ ಇತಿಹಾಸವೇ ಗೊತ್ತಿಲ್ಲ. 1971ರ ಯುದ್ಧದಲ್ಲಿ ಪಾಕಿಸ್ತಾನದ ರೆಕ್ಕೆ ಕತ್ತರಿಸಿದ್ದು ಅಂದಿನ ಪ್ರಧಾನಿ ಇಂದಿರಾಗಾಂಧಿ. ಮೋದಿ ಒಬ್ಬ ಮಹಾನ್ ಸುಳ್ಳುಗಾರ ಎಂದು ಛೇಡಿಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಯುವಕರ ಮನಸ್ಸಿನಲ್ಲಿ ಆಸೆ ತುಂಬಿದ್ದರು. ನಂತರ ಇರುವ ಉದ್ಯೋಗವನ್ನೇ ಕಸಿದುಕೊಂಡವರು. ಈಗಲೂ ಶೇ 40ರಷ್ಟು ಖಾಲಿ ಹುದ್ದೆಗಳಿವೆ. ಹಲವು ಸರ್ಕಾರಿ ಸಂಸ್ಥೆಗಳನ್ನೇ ಮುಚ್ಚಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಎಲ್ಐಸಿ, ಬಿಎಸ್ಎನ್‌ಎಲ್ ಸಹ ಶೀಘ್ರ ಬಾಗಿಲು ಮುಚ್ಚಲಿವೆ ಎಂದು ಭವಿಷ್ಯ ನುಡಿದರು.

ಪಾಕಿಸ್ತಾನ ಟೀಕಿಸುವ ಪ್ರಧಾನಿ ರಾತ್ರೋ ರಾತ್ರೋ ಪಾಕಿಸ್ತಾನದ ಪ್ರಧಾನಿ ಮನೆಗೆ ಹೋಗಿ ಅಪ್ಪಿಕೊಂಡು, ಊಟ ಮಾಡಿ ಬರುತ್ತಾರೆ. ಇದು ಇವರ ಪಾಕಿಸ್ತಾನ ಭಕ್ತಿ. ಬರುವಾಗ ಆ ದಾವುದ್ ಇಬ್ರಾಹಿಂ ಕರೆದುಕೊಂಡು ಬಾರದೇ ಬರಿಗೈಲಿ ಬಂದರು ಎಂದು ವ್ಯಂಗ್ಯವಾಡಿದರು.

ನೋಟ್ ರದ್ದು, ಜಿಎಸ್‌ಟಿಯಿಂದ ದೇಶದ ಆರ್ಥಿಕ ಸ್ಥಿತಿ ಬಿದ್ದು ಹೋಯಿತು. ಯುದ್ದ ವಿಮಾನ, ಭ್ರಷ್ಟಾಚಾರಗಳು ದೇಶದ ಉದ್ದಗಲಕ್ಕೂ ತಲುಪಿತ್ತು. ಇದಕ್ಕೆ ಸಂಬಂಧಿಸಿದಂತೆ ಕಡತಗಳು ಕಳುವಾಗಿವೆ ಎಂದು ಹೇಳುವ ಮಟ್ಟಕ್ಕೆ ಬಂದರು. ನಾನು ಸತ್ಯವಂತ ಸುಳ್ಳು ಹೇಳುವುದಿಲ್ಲ ಎನ್ನುತ್ತಲೇ ಜಿಯೊ ಕಂಪನಿ ಮಾರುಕಟ್ಟೆ ರಾಯಭಾರಿಯಾಗುತ್ತಾರೆ. ಭಾರತ ದೇಶದಲ್ಲಿ ಮೊಬೈಲ್‌ ರಿಂಗಣಿಸಲು ರಾಜೀವ್ ಗಾಂಧಿ ಕಾರಣ. ಈ ಮೋದಿ ಕ್ರಾಂತಿ ಮಾಡುತ್ತೇನೆ ಎನ್ನುತ್ತಾ ಅಂಬಾನಿ ಮುಂದೆ ವಾಂತಿ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಜಾಪ್ರಭುತ್ವ ದಿಕ್ಕು ತಪ್ಪುತ್ತಿದೆ. ಯುವಕರು ದೇಶದ ಸತ್ಯ ಅರ್ಥಮಾಡಿಕೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರಿಗೆ ವಂಚನೆ ಮಾಡಿದೆ. ಇಂತಹವರಿಗೆ ರೈತರು ಮತ ಕೊಡಬೇಕೆ ಎಂದು ಪ್ರಶ್ನಿಸಿದರು.

ಮೈತ್ರಿಕೂಟದ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಬಂಗಾರಪ್ಪನವರ ಪುತ್ರ. ಬಂಗಾರಪ್ಪ ಅವರು ಈ ಜಿಲ್ಲೆಗೆ, ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಧು ಸೊರಬ ಶಾಸಕರಾಗಿದ್ದ ಸಮಯದಲ್ಲಿ ನೀರಾವರಿ, ಬಗರ್‌ಹುಕುಂ ಸೇರಿದಂತೆ ರೈತರಿಗೆ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಈ ಎಲ್ಲದನ್ನು ಮನದಲ್ಲಿಟ್ಟುಕೊಂಡು ಈ ಬಾರಿ ಮಧುಬಂಗಾರಪ್ಪ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಂ.ಶ್ರೀಕಾಂತ್, ಕೆ.ರಂಗನಾಥ್, ಜಿ.ಡಿ.ಮಂಜುನಾಥ್, ಕಿರಣ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !