ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಪ್ರಯುಕ್ತ ಮಂತ್ರಾಲಯ ಮಠದಲ್ಲಿ ಮಂಗಳವಾರ ಸುಬುಧೇಂದ್ರ ತೀರ್ಥ ಶ್ರೀಗಳ ನೇತೃತ್ವದಲ್ಲಿ ರಾಯರ ಪೂರ್ವಾರಾಧನೆ ನಡೆಯಿತು.
ಬೆಳಗಿನ ಜಾವ ಸುಪ್ರಭಾತದೊಂದಿಗೆ ಧಾರ್ಮಿಕ ಕಾರ್ಯಗಳು ಆರಂಭವಾದವು. ಪಂಚಾಮೃತ ಅಭಿಷೇಕ, ಉತ್ಸವ ರಾಯರ ಪಾದಪೂಜೆ, ರಜತ ಸಿಂಹವಾಹನೋತ್ಸವ ಇನ್ನಿತರ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ಸಂಪನ್ನಗೊಂಡವು.
ನಂತರ ರಾಯರು ರಚಿಸಿರುವ ಪರಿಮಳ ಗ್ರಂಥವನ್ನು ಪಲ್ಲಕ್ಕಿ ಯಲ್ಲಿ ಇಟ್ಟು ಮಠದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಯಿತು.
ತಮಿಳುನಾಡು ಸರ್ಕಾರದ ನಿರ್ದೇಶನದಂತೆ ಅಲ್ಲಿಯ ಮುಜರಾಯಿ ಇಲಾಖೆಯ ಅಧಿಕಾರಿಗಳು ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನದಿಂದ ರಾಯರಿಗೆ ಶೇಷ ವಸ್ತ್ರ ಹಾಗೂ ಗಂಧ ತಂದು ಮಠಾಧೀಶರಿಗೆ ಒಪ್ಪಿಸಿದರು.
ಇದಕ್ಕೂ ಮೊದಲು ತಮಿಳುನಾಡಿನ ಶ್ರೀರಂಗಂನಿಂದ ತರಲಾದ ವಸ್ತ್ರವನ್ನು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹಾಗೂ ಮಠದ ಅಧಿಕಾರಿಗಳು ವಿವಿಧ ಕಲಾ-ತಂಡಗಳ ವಾದ್ಯಗಳೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಆಗಮಿಸಿರುವ ಭಕ್ತರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.